- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಲಾಕ್‍ಡೌನ್ ಅವಧಿಯಲ್ಲಿ ನೆರವು ನೀಡಿದ ಸರ್ಕಾರೇತರ ಸಂಘ ಸಂಸ್ಥೆಗಳ ಮಾಹಿತಿ ದಾಖಲಿಸಲು ಸೂಚನೆ

foodkits [1]ಬೆಂಗಳೂರು : ಮಾರಕ ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನಲೆಯಲ್ಲಿ ಕೈಗೊಂಡ ಲಾಕ್‍ಡೌನ್ ಅವಧಿಯಲ್ಲಿ ತೊಂದರೆ ಅನುಭವಿಸಿದವರಿಗೆ ನೆರವು ನೀಡಿದ ಸರ್ಕಾರೇತರ ಸಂಘ ಸಂಸ್ಥೆಗಳು/ಕಾರ್ಪೊರೇಟ್ ಸಂಸ್ಥೆಗಳು ಕೈಗೊಂಡ ಪರಿಹಾರ ಕಾರ್ಯಗಳನ್ನು ದಾಖಲಿಸಲು ಸರ್ಕಾರ ಕ್ರಮಕೈಗೊಂಡಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ಕಳೆದ ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳುಗಳಲ್ಲಿ ಕೋವಿಡ್-19 ರ ನಿಮಿತ್ತ ಲಾಕ್‍ಡೌನ್ ಅವಧಿಯಲ್ಲಿ ರಾಜ್ಯದಲ್ಲಿ ಸಂಕಷ್ಟಕ್ಕೆ ಸಿಲುಕಿದ ಕಾರ್ಮಿಕರು/ವಲಸೆ ಕಾರ್ಮಿಕರು ಮುಂತಾದ ಅಸಂಘಟಿತ ವಲಯದ ಜನರಿಗೆ ತುರ್ತು ಪರಿಹಾರ ನೀಡಲು ಹಲವಾರು ಸರ್ಕಾರೇತರ ಸಂಘ ಸಂಸ್ಥೆಗಳು, ಕಾರ್ಪೊರೇಟ್ ಸಂಸ್ಥೆಗಳು, ಸಾರ್ವಜನಿಕ ಸಂಸ್ಥೆಗಳು ಹಾಗೂ ನಾಗರೀಕರು ಸರ್ಕಾರದ ಜೊತೆ ಬಹುದೊಡ್ಡ ಪ್ರಮಾಣದಲ್ಲಿ ಕೈ ಜೋಡಿಸಿ ತೊಂದರೆ ಅನುಭವಿಸಿದವರಿಗೆ ಹಲವು ರೀತಿಯಲ್ಲಿ ನೆರವು ನೀಡಿರುವುದನ್ನು ಸರ್ಕಾರ ಶ್ಲಾಘಿಸುತ್ತದೆ.

ಈ ಅವಧಿಯಲ್ಲಿ ನೀಡಲಾದ ನೆರವು ಹಾಗೂ ಕೈಗೊಂಡ ಪರಿಹಾರ ಕಾರ್ಯಗಳ ಬಗ್ಗೆ ಸರ್ಕಾರದ ಹಂತದಲ್ಲಿ ದಾಖಲೀಕರಣ ಮಾಡಲು ಸರ್ಕಾರವು ಪ್ರತ್ಯೇಕ ರಾಜ್ಯ ದಾಖಲಾತಿ ಸಮಿತಿಯನ್ನು ರಚಿಸಿದೆ.

ಲಾಕ್‍ಡೌನ್ ವೇಳೆ ಉದಾರವಾಗಿ ನೆರವು ನೀಡಿದ ಸರ್ಕಾರೇತರ ಸಂಸ್ಥೆಗಳು, ಸಂಘ ಸಂಸ್ಥೆಗಳು, ಕಾರ್ಪೊರೇಟ್ ಸಂಸ್ಥೆಗಳು, ಸಾರ್ವಜನಿಕ ಸಂಸ್ಥೆಗಳು ಹಾಗೂ ನಾಗರೀಕರು ತಾವು ಕೈಗೊಂಡ ಪರಿಹಾರ ಉಪಕ್ರಮಗಳ ಬಗ್ಗೆ ದಾಖಲೆಗಳನ್ನು ಸಂಕ್ಷಿಪ್ತ ಟಿಪ್ಪಣಿಯೊಡನೆ ಫೋಟೊ/ವಿಡಿಯೋ ಸಮೇತ karfightscorna@karnataka.gov.in or karnatakafightscorna@gmail.com ಗೆ ಕಳುಹಿಸಿಕೊಡಬಹುದಾಗಿದೆ. ಮಾಹಿತಿ ಕನ್ನಡ ಅಥವಾ ಆಂಗ್ಲ ಭಾಷೆಯಲ್ಲೂ ಸಹ ಹಂಚಿಕೊಳ್ಳಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.