- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

22 ಮಂದಿ ಕೊರೋನಾ ಸೋಂಕಿತರಿಂದ ಪಡೆದ 24 ಲಕ್ಷ ಹಣವನ್ನು ಹಿಂತಿರುಗಿಸಿದ ಖಾಸಗಿ ಆಸ್ಪತ್ರೆ

Roopa IGP [1]ಬೆಂಗಳೂರು : ರಾಜರಾಜೇಶ್ವರಿ ನಗರ ಸಮೀಪದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯೊಂದು ಕೊರೋನಾ ಚಿಕಿತ್ಸೆ ಸಲುವಾಗಿ 22 ಮಂದಿ ಸೋಂಕಿತರಿಂದ ಹೆಚ್ಚುವರಿಯಾಗಿ ಪಡೆದಿದ್ದ 24 ಲಕ್ಷ ಹಣವನ್ನು ಸೋಮವಾರ ಮರಳಿಸಿದೆ.

ಹಿರಿಯ ಐಎಎಸ್‌ ಅಧಿಕಾರಿ ಹರ್ಷಗುಪ್ತ ಮತ್ತು ಐಜಿಪಿ ಡಿ.ರೂಪಾ ನೇತೃತ್ವದ ತಂಡ ಕ್ರಿಮಿನಲ್‌ ಕೇಸ್‌ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ ಬೆನ್ನಲ್ಲೇ ಆಸ್ಪತ್ರೆ ಎಚ್ಛೆತ್ತು ಕೊಂಡು ಹಣ ಮರಳಿಸಿದೆ.

ಸರ್ಕಾರದ ನಿಗದಿತ ದರಕ್ಕಿಂತ ಹೆಚ್ಚಿನ ಹಣ ಸುಲಿಗೆ ಮಾಡಿದರೆ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ರೂಪಾ ಅವರು ಎಚ್ಚರಿಕೆ ನೀಡಿದ್ದರು.

ನಮ್ಮ ತಂಡಕ್ಕೆ ಮೂರು ಖಾಸಗಿ ಆಸ್ಪತ್ರೆಗಳ ಹೊಣೆಗಾರಿಕೆ ವಹಿಸಿದ್ದಾರೆ. ಸೋಂಕಿತರ ಚಿಕಿತ್ಸೆ ಸಲುವಾಗಿ ಸರ್ಕಾರದ ಸೂಚನೆಗಳು ಆಸ್ಪತ್ರೆಗಳು ಕಡ್ಡಾಯವಾಗಿ ಪಾಲಿಸಬೇಕು. ಪ್ರತಿ ಆಸ್ಪತ್ರೆಗಳ ಮೇಲೆ ನಿಗಾ ವಹಿಸಲಾಗಿದೆ. ಆ ಪೈಕಿ ಒಂದು ಆಸ್ಪತ್ರೆಯಲ್ಲಿ ಸೋಂಕಿತರಿಗೆ ಹಣ ವಸೂಲಿ ಪ್ರಕರಣವು ದಾಖಲೆ ಸಮೇತ ಪತ್ತೆಯಾಗಿದೆ ಎಂದು ರೂಪಾ ಹೇಳಿದ್ದಾರೆ.

ಹಣ ವಸೂಲಿ ಬಗ್ಗೆ ಆಸ್ಪತ್ರೆ ವಿರುದ್ಧ ಹಲವು ದೂರುಗಳು ಬಂದಿದ್ದವು. ಕೊರೋನಾ ಚಿಕಿತ್ಸೆಗೆ ದಾಖಲಿಸಿಕೊಳ್ಳುವ ಮುನ್ನವೇ .1 ರಿಂದ 2 ಲಕ್ಷ ಹಣವನ್ನು ಮುಂಗಡವಾಗಿ ಅವರು ಪಡೆಯುತ್ತಿದ್ದರು. ಸಂಪೂರ್ಣ ಚಿಕಿತ್ಸೆಗೆ 4-5 ಲಕ್ಷ ವೆಚ್ಚವಾಗಲಿದೆ ಎಂದು ರೋಗಿಗಳಿಗೆ ಆಸ್ಪತ್ರೆ ಸಿಬ್ಬಂದಿ ಹೇಳಿದ್ದರು. ಇದರಿಂದ ಸೋಂಕಿತರು ಸಂಕಷ್ಟಕ್ಕೆ ಸಿಲುಕಿದ್ದರು. ಈ ದುಬಾರಿ ಹಣ ವಸೂಲಿ ಬಗ್ಗೆ ಮಾಹಿತಿ ತಿಳಿದ ಕೂಡಲೇ ಆಸ್ಪತ್ರೆಗೆ ನಮ್ಮ ತಂಡ ತೆರಳಿ ಪರಿಶೀಲಿಸಿದಾಗ ಹಣ ವಸೂಲಿ ಸಂಬಂಧ ದಾಖಲೆಗಳು ಸಿಕ್ಕಿದ್ದವು ಎಂದು ರೂಪಾ ಹೇಳಿದರು.

ಕೂಡಲೇ ಆಸ್ಪತ್ರೆ ಸಿಬ್ಬಂದಿಗೆ ಹೆಚ್ಚುವರಿ ಹಣವನ್ನು ರೋಗಿಗಳಿಗೆ ಮರಳಿಸಬೇಕು. ಅಲ್ಲದೆ ಸೋಂಕಿತರಿಗೆ ಸರ್ಕಾರದ ವೆಚ್ಚದಲ್ಲಿ ಉಚಿತ ಚಿಕಿತ್ಸೆ ನೀಡಬೇಕು. ಇಲ್ಲದೆ ಹೋದರೆ ಕ್ರಿಮಿನಲ್‌ ಕೇಸ್‌ ದಾಖಲಿಸುವುದಾಗಿ ಎಚ್ಚರಿಕೆ ನೀಡಲಾಯಿತು. ಈಗ ಆಸ್ಪತ್ರೆ, ತಾನು ಪಡೆದಿದ್ದ ಹಣವನ್ನು 22 ಸೋಂಕಿತರಿಗೆ ಮರಳಿಸಿದೆ. ಇನ್ನುಳಿದ ನಾಲ್ಕೈದು ಮಂದಿಯ ಬ್ಯಾಂಕ್‌ ದಾಖಲೆಗಳಲ್ಲಿ ವ್ಯತ್ಯಾಸವಾಗಿದೆ. ಆದಷ್ಟುಶೀಘ್ರವೇ ಅವರಿಗೆ ಸಹ ಹಣ ಜಮೆಯಾಗಲಿದೆ ಎಂದು ವಿವರಿಸಿದರು.

ಕೊರೋನಾ ಚಿಕಿತ್ಸೆ ಹೆಸರಿನಲ್ಲಿ ಹಣ ಸುಲಿಗೆ ಮಾಡದಂತೆ ಮೂರು ಖಾಸಗಿ ಆಸ್ಪತ್ರೆಗಳ ಮೇಲೆ ನಿಗಾವಹಿಸಲು ಹಿರಿಯ ಐಎಎಸ್‌ ಹರ್ಷಗುಪ್ತ ಹಾಗೂ ಐಜಿಪಿ ಡಿ.ರೂಪಾ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ.

ಕೊರೋನಾ ಸೋಂಕಿತರಿಂದ ಹಣ ಸುಲಿಗೆ ಮಾಡಿದ್ದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗೆ ಬಿಸಿ ಮುಟ್ಟಿಸಿದ ಖಡಕ್‌ ಅಧಿಕಾರಿ ಡಿ,ರೂಪಾ ಅವರಿಗೆ ಟ್ವಿಟರ್‌ನಲ್ಲಿ ಅಭಿನಂದನೆಗಳ ಸುರಿಮಳೆಯಾಗಿವೆ. ಖಾಸಗಿ ಆಸ್ಪತ್ರೆ ಸೋಂಕಿತರಿಗೆ ಹಣ ಮರಳಿಸಿರುವ ಬಗ್ಗೆ ರೂಪಾ ಅವರು, ಟ್ವೀಟ್‌ ಮಾಡಿದ್ದರು. ಇದಕ್ಕೆ ನೂರಾರು ಮಂದಿ ಪ್ರತಿಕ್ರಿಯಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನನ್ನ ತಾಯಿಗೆ ಕೊರೋನಾ ಸೋಂಕು ದೃಢಪಟ್ಟಿತು. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸುವಾಗ .2 ಲಕ್ಷ ಮುಂಗಡವಾಗಿ ಕಟ್ಟಿಸಿಕೊಂಡಿದ್ದರು. ಒಟ್ಟಾರೆ ಚಿಕಿತ್ಸೆಗೆ .2.18 ಲಕ್ಷ ವೆಚ್ಚವಾಗಿದೆ. ಈಗ ಮುಂಗಡವಾಗಿ ಪಡೆದಿದ್ದ ಹಣವು ಆಸ್ಪತ್ರೆಯವರು ಮರಳಿಸಿದ್ದಾರೆ. ರಾಜ್ಯ ಸರ್ಕಾರಕ್ಕೆ ಧನ್ಯವಾದಗಳು.

ನನಗೆ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗುವ ವೇಳೆ ಮುಂಗಡ ಹಣ ಪಾವತಿಸಲು ತುಂಬಾ ಕಷ್ಟವಾಯಿತು. ಬಳಿಕ ಸರ್ಕಾರದ ವತಿಯಿಂದ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ ಎಂದು ಆಸ್ಪತ್ರೆಗೆ ಆಗಮಿಸಿದ್ದ ಅಧಿಕಾರಿಗಳು ಹೇಳಿದ್ದರು. ಈಗ ನಾನು ಪಾವತಿಸಿದ್ದ ಮುಂಗಡ ಹಣವು ಆಸ್ಪತ್ರೆ ಮರಳಿಸಿದೆ.

ಕೊರೋನಾ ಚಿಕಿತ್ಸೆಗೆ ಸೋಂಕಿತರಿಂದ ಪಡೆದಿದ್ದ ಮುಂಗಡ ಹಣವನ್ನು ಮರಳಿಸಿ ಆಸ್ಪತ್ರೆ ಉಚಿತ ಚಿಕಿತ್ಸೆ ನೀಡಿದೆ. ಇದರಿಂದ ಜನ ಸಾಮಾನ್ಯರಿಗೆ ಬಹಳ ಉಪಯೋಗವಾಗಿದೆ. ಐಎಎಸ್‌ ಅಧಿಕಾರಿ ಹರ್ಷಗುಪ್ತ, ಬಿಬಿಎಂಪಿ ಎಇಇ ಅಶೋಕ್‌ ಗೌಡ ಒಳಗೊಂಡ ನಮ್ಮ ತಂಡದ ಪರಿಶ್ರಮ ಸಾರ್ಥಕವಾಗಿದೆ. ಸೋಂಕಿತರ ಚಿಕಿತ್ಸೆಗೆ ಸರ್ಕಾರದ ಸೂಚನೆಗಳನ್ನು ಖಾಸಗಿ ಆಸ್ಪತ್ರೆಗಳು ಕಟ್ಟುನಿಟ್ಟಾಗಿ ಪಾಲಿಸಬೇಕು. ಆಸ್ಪತ್ರೆಗಳ ಮೇಲೆ ನಿಗಾವಹಿಸಲಾಗಿದ್ದು, ಹೆಚ್ಚುವರಿ ಹಣ ವಸೂಲಿ ಮಾಡಿದರೆ ಮುಲಾಜಿಲ್ಲದೆ ಕಠಿಣ ಕ್ರಮ ಜರುಗಿಸಲಾಗುತ್ತದೆ ಐಜಿಪಿ ಹೇಳಿದ್ದಾರೆ.