- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಖಾಸಗಿ ಆಸ್ಪತ್ರೆಗಳು ಕೋವಿಡ್‌ ನಿರ್ವಹಣೆಗೆ ಶೇ. 50ರಷ್ಟನ್ನು ಸರಕಾರಕ್ಕೆ ಬಿಟ್ಟು ಕೊಡಲೇಬೇಕು : ಶ್ರೀನಿವಾಸ ಪೂಜಾರಿ

srinivas-poojary [1]

ಮಂಗಳೂರು: ಖಾಸಗಿ ಆಸ್ಪತ್ರೆಗಳು ಹಾಗೂ ಮೆಡಿಕಲ್‌ ಕಾಲೇಜುಗಳು ಕೋವಿಡ್‌ ನಿರ್ವಹಣೆಗೆ ತಮ್ಮ ಹಾಸಿಗೆ ಸಾಮರ್ಥ್ಯದ ಶೇ. 50ರಷ್ಟನ್ನು ಸರಕಾರಕ್ಕೆ ಬಿಟ್ಟು ಕೊಡಲೇಬೇಕು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಎ.ಜೆ. ಆಸ್ಪತ್ರೆ ಹಾಗೂ ಶ್ರೀನಿವಾಸ ವೈದ್ಯಕೀಯ ಕಾಲೇಜುಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಸಾರ್ವಜನಿಕ ಆರೋಗ್ಯ ರಕ್ಷಣೆ ಸರಕಾರದ ಆದ್ಯತೆ. ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿತರ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳು ಸರಕಾರದೊಂದಿಗೆ ಸಹಕರಿಸಬೇಕು. ರಾಜ್ಯ ಸರಕಾರವು ಆಯುಷ್ಮಾನ್‌ ಯೋಜನೆಯಡಿ ಕೋವಿಡ್‌ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲು ಉದ್ದೇಶಿಸಿದೆ. ಅಲ್ಲದೆ ಖಾಸಗಿಯಾಗಿ ಚಿಕಿತ್ಸೆ ಪಡೆಯುವ ಸೋಂಕಿತರಿಗೆ ಸರಕಾರ ನಿಗದಿಪಡಿಸಿದ ದರದಲ್ಲಿ ಚಿಕಿತ್ಸೆ ನೀಡಬೇಕು ಎಂದು ಸಚಿವರು ತಿಳಿಸಿದರು.

ಖಾಸಗಿ ಆಸ್ಪತ್ರೆಗಳಿಗೆ ಸರಕಾರದಿಂದ ರ್ಯಾಪಿಡ್‌ ಕಿಟ್‌ಗಳನ್ನು ಸರಬರಾಜು ಮಾಡಲಾಗುತ್ತಿದ್ದು, ಉಚಿತವಾಗಿ ಕೋವಿಡ್‌ ಪರೀಕ್ಷೆ ನಡೆಸಲು ಸೂಚಿಸಲಾಗಿದೆ. ಸರಕಾರಿ ಆಸ್ಪತ್ರೆಗಳಲ್ಲಿ ಈಗಾಗಲೇ ಈ ಪರೀಕ್ಷೆ ನಡೆಯುತ್ತಿದೆ ಎಂದರು. ಜಿಲ್ಲೆಗೆ ರಾಜ್ಯ ಸರಕಾರವು 50 ವೆಂಟಿಲೇಟರ್‌ಗಳನ್ನು ಸರಬರಾಜು ಮಾಡಲಿದೆ ಎಂದರು.

ಜಿಲ್ಲಾಧಿಕಾರಿ ಡಾ| ಕೆ.ವಿ. ರಾಜೇಂದ್ರ ಮಾತನಾಡಿ, ಆಸ್ಪತ್ರೆಗಳಲ್ಲಿ ಕೋವಿಡ್‌ ಚಿಕಿತ್ಸೆ ವಿವರ, ಶುಲ್ಕ ಮಾಹಿತಿ, ಆಯುಷ್ಮಾನ್‌ ಯೋಜನೆಯ ಸಮರ್ಪಕ ಮಾಹಿತಿಯನ್ನು ರೋಗಿಗಳು ದಾಖಲಾಗುವಾಗಲೇ ನೀಡಬೇಕು. ಆಸ್ಪತ್ರೆಯ ಪ್ರವೇಶ ದ್ವಾರದಲ್ಲಿ ಬೋರ್ಡ್‌ ಅಳವಡಿಸಿ ವಿವರ ನಮೂದಿಸಬೇಕು ಎಂದರು.

ಶಾಸಕ ಡಾ| ಭರತ್‌ ಶೆಟ್ಟಿ, ಜಿ.ಪಂ. ಸಿಇಒ ಡಾ| ಸೆಲ್ವಮಣಿ, ಡಿಎಚ್‌ಒ ಡಾ| ರಾಮಚಂದ್ರ ಬಾಯರಿ, ವೆನ್ಲಾಕ್ ಅಧೀಕ್ಷಕ ಡಾ| ಸದಾಶಿವ, ಎ.ಜೆ. ಆಸ್ಪತ್ರೆ ನಿರ್ದೇಶಕ ಡಾ| ಪ್ರಶಾಂತ್‌ ಮಾರ್ಲ, ಶ್ರೀನಿವಾಸ ಮೆಡಿಕಲ್‌ ಕಾಲೇಜಿನ ಡೀನ್‌ ಡಾ| ಉದಯ ಕುಮಾರ್‌ ಮೊದಲಾದವರಿದ್ದರು.

ಎಲ್ಲ ಮೆಡಿಕಲ್‌ ಕಾಲೇಜುಗಳು ಪ್ರತೀ ದಿನ 100 ಮಂದಿಯ ರ್ಯಾಪಿಡ್‌ ಆ್ಯಂಟಿಜನ್‌ ಪರೀಕ್ಷೆಯನ್ನು ಉಚಿತವಾಗಿ ನಡೆಸಬೇಕು. ಸಾರ್ವಜನಿಕರಿಗೆ ಆಯುಷ್ಮಾನ್‌ ಸೌಲಭ್ಯದ ಮಾಹಿತಿ ನೀಡಲು ಆರೋಗ್ಯ ಇಲಾಖೆ ವತಿಯಿಂದ ಪ್ರತೀ ಮೆಡಿಕಲ್‌ ಕಾಲೇಜು ಆಸ್ಪತ್ರೆಗಳಲ್ಲಿ ಆರೋಗ್ಯ ಮಿತ್ರ ಕಾರ್ಯಕರ್ತರನ್ನು ನೇಮಿಸಲಾಗಿದ್ದು, ಇವರು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ನಿರ್ಲಕ್ಷ್ಯ ತೋರುವವರ ವಿರುದ್ಧ ಕ್ರಮ ಜರಗಿಸು ವುದಾಗಿ ಜಿಲ್ಲಾಧಿಕಾರಿ ಎಚ್ಚರಿಸಿದರು.