- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಅಯೋದ್ಯೆಯ ವಿವಾದಿತ ಸ್ಥಳದ ತೀರ್ಪು ಅಲಹಾಬಾದ್ ಹೈಕೋರ್ಟಿನಿಂದ ಪ್ರಕಟ

ಅಲಹಾಬಾದ್ ಹೈಕೋರ್ಟ್ [1]ಲಖನೌ  : ರಾಮಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ವಿವಾದದ ತೀರ್ಪು ಹೊರಬಿದ್ದಿದೆ. 60 ವರ್ಷಗಳ ವಿವಾದಿತ 2.7 ಎಕರೆ ಭೂಮಿಯನ್ನು  ಮೂರು ವಿಭಾಗಗಳನ್ನಾಗಿ ಮಾಡಿ ಮೂರು ಅರ್ಜಿದಾರರಿಗೆ ಹಂಚಲು  ಅಲಹಾಬಾದ್ ಹೈಕೋರ್ಟಿನ ಮೂರು ನ್ಯಾಯ ಮೂರ್ತಿಗಳ ಪೀಠ ಸೂಚಿಸಿದೆ.
ರಾಮಲಲ್ಲಾನ ವಿಗ್ರಹ ಇರುವ ಇರುವ ಸ್ಥಳ ರಾಮಮಂದಿರ ನಿರ್ಮಾಣಕ್ಕೆ ಬಿಡಬೇಕು ಇನ್ನುಳಿದ ಒಂದು ಭಾಗವನ್ನು ಸುನ್ನಿ ವಕ್ಫ್ ಮಂಡಳಿ ಮತ್ತು  ಮೂರನೇ ಒಂದು ಭಾಗವನ್ನು ನಿರ್ಮೋಹಿ ಅಖಾಡಕ್ಕೆ ನೀಡಬೇಕು ಎಂದು ಹೇಳಿದೆ.
ನ್ಯಾಯಮೂರ್ತಿಗಳಾದ ಸಿಬಘತ್ ಉಲ್ಲಾ ಖಾನ್, ನ್ಯಾ. ಧರಂ ವೀರ್ ಶರ್ಮಾ ಮತ್ತು ನ್ಯಾ. ಸುಧೀರ್ ಅಗರವಾಲ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಈ ಐತಿಹಾಸಿಕ ತೀರ್ಪನ್ನು ಲಖನೌ ಪೀಠದಿಂದ ಇಂದು ಸಂಜೆ 4.15ರ ವೇಳೆಗೆ  ನೀಡಿದೆ
ನ್ಯಾ. ಧರಂ ವೀರ್ ಶರ್ಮಾ ಅವರು ತೀರ್ಪನ್ನು ಸರಿಯಾಗಿ 3.30ಕ್ಕೆ ಮೊದಲು ಓದಲು ಪ್ರಾರಂಭಿಸಿದರು. ಮೂರೂ ನ್ಯಾಯಮೂರ್ತಿಗಳು ಪ್ರತ್ಯೇಕವಾಗಿ ತೀರ್ಪನ್ನು ನೀಡಿದ್ದಾರೆ. ಸರಿಯಾಗಿ ಒಂದು ಗಂಟೆಯಲ್ಲಿ ತೀರ್ಪು ಓದುವ ಪ್ರಕ್ರಿಯೆ ಮುಗಿಯಿತು.
ತೀರ್ಪಿನ ಪ್ರಕಾರ, ಸುನ್ನಿ ವಕ್ಫ್ ಬೋರ್ಡ್ ಅರ್ಜಿ ಬಹುಮತದಿಂದ ವಜಾಗೊಂಡಿದೆ. ಮಸೀದಿಯ ಸುತ್ತ ಸ್ಮಶಾನವಿತ್ತೆಂಬ ಅರ್ಜಿಯೂ ವಜಾಗೊಂಡಿದೆ. ಮೂರು ತಿಂಗಳುಗಳ ಕಾಲ ಯಥಾಸ್ಥಿತಿ ಕಾಪಾಡಬೇಕೆಂದು ಹೈಕೋರ್ಟ್ ಹೇಳಿದೆ. ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಸುನ್ನಿ ವಕ್ಫ್ ಬೋರ್ಡ್ ಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸುವುದಾಗಿ ಹೇಳಿದೆ.