- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

“ತೆಲಿಕೆದ ಬೊಳ್ಳಿ” ದೇವದಾಸ್ ಕಾಪಿಕಾಡ್ ಜೊತೆ ಸಂದರ್ಶನ

Telikeda Bolli [1]ಮಂಗಳೂರು :ಸೆಂಟ್ರಲ್ ಸಿನಿಮಾಸ್ ಬ್ಯಾನರ್ ನಡಿಯಲ್ಲಿ ಸುಮಿತ್ ಕಾಮತ್ ಅರ್ಪಿಸುವ ತುಳು ಚಲನಚಿತ್ರ `ತೆಲಿಕೆದ ಬೊಳ್ಳಿ’ ಡಿಸೆಂಬರ್ 6 ರಂದು ಬಿಡುಗಡೆಗೊಳ್ಳಲಿದೆ.

ಪಿ.ಎಚ್ ವಿಶ್ವನಾಥ್ ನಿರ್ದೇಶನದಲ್ಲಿ ದೇವದಾಸ್ ಕಾಪಿಕಾಡ್ ಅವರ ಕಥೆ-ಸಂಭಾಷಣೆ-ಚಿತ್ರಕಥೆಯಲ್ಲಿ ಮೂಡಿಬಂದಿರುವ ಈ ಚಿತ್ರ ಅದ್ದೂರಿ ಬಜೆಟ್ ನಲ್ಲಿ, ಹೊಚ್ಚ ಹೊಸ ಮಾದರಿಯಲ್ಲಿ ನಿರ್ಮಿಸಲಾಗಿದೆ ಎಂದು ದೇವದಾಸ್ ಕಾಪಿಕಾಡ್ ಹೇಳಿದರು.

ಸುಧೀರ್ ಕಾಮತ್ ಹಾಗೂ ಶರ್ಮಿಳ ದೇವದಾಸ್ ಕಾಪಿಕಾಡ್ ಚಿತ್ರದ ನಿರ್ಮಾಪಕರಾಗಿದ್ದು, ಗುರುಕಿರಣ್ ರವರ ಸಂಗೀತವಿದೆ, ಮದನ್ ಹರಿಣಿಯವರ ನೃತ್ಯ ಸಂಯೋಜನೆಯಿದೆ. ಆರ್. ಮಂಜುನಾಥ್ ರವರು ಛಾಯಾಗ್ರಹಣ ಮಾಡಿದ್ದಾರೆ.

ಚಿತ್ರದ ರೂವಾರಿ ದೇವದಾಸ್ ಕಾಪಿಕಾಡ್ ರವರು ಚಿತ್ರದ ಕುರಿತು ತನ್ನ ಸ್ವಗೃಹದಲ್ಲಿ ಮೆಗಾ ಮೀಡಿಯಾ ಸಂಪಾದಕರೊಂದಿಗೆ ಮಾತನಾಡಿದರು.

Telikeda Bolli [2]ಪ್ರಶ್ನೆ : ಚಿತ್ರದ ಕ್ಲೈಮ್ಯಾಕ್ಸ್ ಬಗ್ಗೆ ಹೇಳುತ್ತೀರ?

ದೇವದಾಸ್ : ಇದೊಂದು ತ್ರಿಕೋನ ಪ್ರೇಮ ಕಥೆ. ಕಥೆಗೆ ಪೂರಕವಾಗಿ ಹಾಸ್ಯ ಸನ್ನಿವೇಶಗಳನ್ನು ಹೆಣೆಯಲಾಗಿದೆ. ಏನೂ ಅರಿಯದ ಮುಗ್ಧ ಮನಸ್ಸಿನ ಹುಡುಗಿಯ ಅಸಹಾಯಕತೆಯೇ ಚಿತ್ರದ ಕಥಾವಸ್ತು. ಜೊತೆಗೆ ಮಕ್ಕಳನ್ನು ಸಾಕುವಲ್ಲಿ ತಂದೆ ತಾಯಿಯ ಜವಾಬ್ದಾರಿಯನ್ನು ಚಿತ್ರದ ಸಾರಾಂಶದಲ್ಲಿ ಬಿಂಬಿಸಲಾಗಿದೆ.

ಪ್ರಶ್ನೆ : ಚಿತ್ರದ ತಾಂತ್ರಿಕತೆ ಮತ್ತು ಚಿತ್ರೀಕರಣದ ಬಗ್ಗೆ ಹೇಳುತ್ತೀರಾ?

ದೇವದಾಸ್ : ಕೇವಲ 30 ದಿನಗಳಲ್ಲಿ ಈ ಚಿತ್ರವನ್ನು ಶೂಟ್ ಮಾಡಲಾಗಿದೆ. ಮೊದಲರ್ಧದಲ್ಲಿ ನಗೆಯನ್ನು ನಿಯಂತ್ರಣದಲ್ಲಿಡಲಾಗದಷ್ಟು ಸನ್ನಿವೇಶಗಳಿವೆ, ವಿರಾಮದ ನಂತರ ಕಥೆ ಮತ್ತು ಕ್ಲೈಮ್ಯಾಕ್ಸ್ ನೀಡಲಾಗಿದೆ. ಮಂಗಳೂರು ಸುತ್ತಮುತ್ತಲ ಪ್ರದೇಶದಲ್ಲಿ ಚಿತ್ರೀಕರಿಸಲಾಗಿದ್ದು ಪಚ್ಚನಾಡಿ, ವಾಮಂಜೂರು, ಸಿದ್ದಕಟ್ಟೆ ಶ್ರೀನಿವಾಸ ಆಳ್ವರ ಗುತ್ತಿನ ಮನೆಯಲ್ಲಿ, ಪುತ್ತೂರು ಮಹಾಲಿಂಗೇಶ್ವರ ಜಾತ್ರೆಯಲ್ಲಿ ಹಾಗೂ ಫೈಟಿಂಗ್ ದೃಶ್ಯವನ್ನು ಬೆಂಗಳೂರಿನಲ್ಲಿ ಮಾಡಲಾಗಿದೆ. ಸೌಂಡ್ ಡಬ್ಬಿಂಗ್ ಚೆನೈನಲ್ಲಿ ಮಾಡಲಾಗಿದೆ.

ಪ್ರಶ್ನೆ : ಅರ್ಜುನ್ ಮೊದಲ ಅಭಿನಯದಲ್ಲಿ ಹೇಗೆ ಕಾರ್ಯನಿರ್ವಹಿಸಿದ್ದಾರೆ?

ದೇವದಾಸ್ :ಅರ್ಜುನ್ ಮೊದಲ ದಿನದ ಚಿತ್ರೀಕರಣದಲ್ಲೇ ನಟನೆ ನೀಡಿ ನಿರ್ದೇಶಕರಿಂದ ಭೇಷ್ ಅನ್ನಿಸಿಕೊಂಡಿದ್ದಾನೆ. ಆತನಿಗೆ ಒಂದು ತಿಂಗಳು ಮುಂಬಯ್ ನ ಎಸ್. ಎನ್ ಇನ್ಸಿಟ್ಯೂಟ್ ನಲ್ಲಿ ಫೈಟ್ ಮಾಸ್ಟರ್ ಚೀತಾ ಯಜ್ಞೇಶ್ ಶೆಟ್ಟಿ ಯವರಿಂದ ಫೈಟಿಂಗ್ ತರಬೇತಿ ನೀಡಲಾಗಿತ್ತು. ಅರ್ಜುನ್ ಪ್ರತಿ ಸನ್ನಿವೇಶದಲ್ಲೂ ಅದ್ಧುತವಾಗಿ ನಟಿಸಿದ್ದಾನೆ.

Telikeda Bolli [3]ಪ್ರಶ್ನೆ : ಚಿತ್ರದ ಹಾಡುಗಳು ಮತ್ತು ತಾರಾಗಣ ಹೇಗಿದೆ?

ದೇವದಾಸ್ : ಗುರುಕಿರಣ್ ಸಂಗೀತ ನಿರ್ದೇಶನದಲ್ಲಿ ಹಾಡುಗಳನ್ನು ಸಂದರ್ಭಕ್ಕೆ ತಕ್ಕಹಾಗೆ ತಯಾರಿಸಲಾಗಿದೆ. ಹಾಡುಗಳು ಇಂಪಾಗಿದ್ದು ಕ್ಯಾಸೆಟ್ ಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ. ಚಿತ್ರದಲ್ಲಿ ನಾಯಕಿಯಾಗಿ ಬಾಂಬೆ ಹುಡುಗಿ ಕ್ಲೀನ್ ಎಂಡ್ ಕ್ಲಿಯರ್ ಮಾಡೆಲ್ ಆಶ್ರಿತ ಶೆಟ್ಟಿ ಅಭಿನಯಿಸಿದ್ದಾಳೆ. ಈಕೆ ಮೂಲತಃ ಮೂಡಬಿದ್ರೆಯವಳು ಈಕೆ ತಮಿಳಿನಲ್ಲಿ 3 ಚಿತ್ರದಲ್ಲಿ ಅಭಿನಯಿಸುತ್ತಿದ್ದಾಳೆ. ಇನ್ನೋರ್ವ ನಾಯಕಿ ವೈಶಾಲಿ ಶೆಟ್ಟಿ ಮುಂಬಯಿಯವಳು ಈಕೆ ಇಂಜಿನಿಯರಿಂಗ್ ಸ್ಟೂಡೆಂಟ್. ಮೂಲತಃ ಮಂಗಳೂರಿನ ಎಕ್ಕೂರಿನವಳು. ಈಗ ಮುಂಬಯಿಯಲ್ಲಿ ನೆಲೆಸಿದ್ದಾರೆ. ಉಳಿದ ಕಲಾವಿದರು ಹೆಚ್ಚಿನವರು ಸ್ಥಳೀಯರೆ ಆಗಿದ್ದಾರೆ. ಸ್ಥಳೀಯ ಎಲ್ಲಾ ನಾಟಕ ತಂಡಗಳಿಂದಲೂ ಒಬ್ಬೊಬ್ಬರಿಗೆ ಅವಕಾಶ ನೀಡಲಾಗಿದೆ.

ಪ್ರಶ್ನೆ : ನಿಮ್ಮ ಕಲಾಜೀವನ ಮತ್ತು ಮುಂದಿನ ಯೋಜನೆಗಳ ಬಗ್ಗೆ ಹೇಳುತ್ತೀರಾ?

ದೇವದಾಸ್ : ನನ್ನ 30 ಕ್ಕಿಂತಲೂ ಹೆಚ್ಚಿನ ನಾಟಕಗಳು ದೇಶ ವಿದೇಶಗಳಲ್ಲಿ ಪ್ರದರ್ಶನ ಕಂಡಿದೆ. ಕೆಲವು ನಾಟಕಗಳಂತೂ 1000 ಪ್ರದರ್ಶನಗಳ ಗಡಿ ದಾಟಿದೆ. ಇದುವರೆಗೆ 3 ಕನ್ನಡ ಚಲನ ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಈಗ ತಮಿಳು ಚಿತ್ರರಂಗದಿಂದ 18 ಆಫರ್ ಗಳು ಬಂದಿವೆ. ನಾಟಕಗಳ ನಿರಂತರ ಪ್ರದರ್ಶನಗಳಿರುವುದರಿಂದ ಆಫರ್ ಗಳನ್ನು ತಿರಸ್ಕರಿಸಲಾಯಿತು. ನಾನು ಮಗ ಅರ್ಜುನ್ ನ ಕೆರಿಯರ್ ಗೆ ತಕ್ಕ ಹಾಗೆ ಇನ್ನೊಂದು ತುಳುಚಿತ್ರ ನಿರ್ಮಿಸುವ ಸಿದ್ಧತೆ ನಡೆಸಿದ್ದೇನೆ.

ಪ್ರಶ್ನೆ : ತೆಲಿಕೆದ ಬೊಳ್ಳಿ ಚಿತ್ರದ ನಿರೀಕ್ಷೆ ಹೇಗಿದೆ?

ದೇವದಾಸ್ : ಈ ಚಿತ್ರದಲ್ಲಿ ಮನರಂಜನೆಗೇನೂ ಕಮ್ಮಿ ಇಲ್ಲ. ಅದ್ದೂರಿ ಬಜೆಟ್ ನಲ್ಲಿ ಚಿತ್ರವನ್ನು ನಿರ್ಮಿಸಲಾಗಿದೆ. ಜನರಿಗೆ ಅದರಲ್ಲೂ ಮಂಗಳೂರಿನ ತುಳುವರಿಗೆ ಒಳ್ಳೆಯ ಮನರಂಜನೆಯನ್ನು ಕೊಟ್ಟರೆ ಸ್ವೀಕರಿಸುವರೆಂಬ ಭರವಸೆಯಿದೆ. ಚಿತ್ರದಲ್ಲಿ ಎಲ್ಲಾ ವರ್ಗದವರಿಗೂ ಬೇಕಾದ ಸಂದೇಶವಿದೆ.ಕುಟುಂಬ ಸಮೇತರಾಗಿ ವೀಕ್ಷಿಸಬಹುದು. ಮಂಗಳೂರಿನ ಜ್ಯೋತಿ, ಬಿಗ್ ಸಿನಿಮಾಗಳಲ್ಲಿ ಹಾಗೂ ಉಡುಪಿ ಕಾರ್ಕಳ, ಬೆಳ್ತಂಗಡಿ, ಮೂಡಬಿದ್ರೆ ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ಬಿಡುಗಡೆ ಮಾಡಲಾಗುವುದು.