ಭಯೋತ್ಪಾದಕರಿಗೆ ನೆರವು ನೀಡುತ್ತಿದ್ದ ಪಾಕಿಸ್ತಾನ, ದಾವೂದ್ ಇಬ್ರಾಹಿಂ ಕರಾಚಿ ಯಲ್ಲಿರುವುದನ್ನು ಒಪ್ಪಿಕೊಂಡಿದೆ

3:57 PM, Sunday, August 23rd, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Davoodಇಸ್ಲಾಮಾಬಾದ್ : ಭಯೋತ್ಪಾದಕರಿಗೆ ಹಣಕಾಸು ನೆರವು ನೀಡುವುದರ ಮೇಲೆ ನಿಗಾ ಇಡುವ ಅಂತರರಾಷ್ಟ್ರೀಯ ಮಟ್ಟದ ಸಂಸ್ಥೆ ಹಣಕಾಸು ಕಾರ್ಯಪಡೆಯ (ಎಫ್‌ಎಟಿಎಫ್‌) ‘ಬೂದು ಪಟ್ಟಿ’ಯಲ್ಲಿ ಗುರುತಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳಲು ದಾವೂದ್ ಇಬ್ರಾಹಿಂ, ಹಫೀಜ್ ಸಯೀದ್, ಮಸೂದ್ ಅಜರ್ ಮತ್ತು ನಿಷೇಧಿತ 88 ಉಗ್ರ ಸಂಘಟನೆಗಳು, ಅವುಗಳ ನಾಯಕರ ಮೇಲೆ ಪಾಕಿಸ್ತಾನ ಮತ್ತಷ್ಟು ಕಠಿಣ ಹಣಕಾಸು ನಿರ್ಬಂಧ ವಿಧಿಸಿದೆ.

ದಾವೂದ್ ಇಬ್ರಾಹಿಂ, ಹಫೀಜ್ ಸಯೀದ್, ಮಸೂದ್ ಅಜರ್ ಮತ್ತು ಇತರ ಉಗ್ರ ನಾಯಕರ ಎಲ್ಲ ಆಸ್ತಿ, ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಸರ್ಕಾರ ಆದೇಶಿಸಿದೆ. ಈ ಆದೇಶದ ಪ್ರತಿಯಲ್ಲಿ ದಾವೂದ್‌ನ ಕರಾಚಿ ವಿಳಾಸವೂ ಉಲ್ಲೇಖವಾಗಿದೆ ಎಂದು ಹೇಳಲಾಗಿದೆ.

ಇದರೊಂದಿಗೆ, ದಾವೂದ್ ಇಬ್ರಾಹಿಂ ಪಾಕಿಸ್ತಾನದಲ್ಲಿ ಇರುವುದನ್ನು ಆ ದೇಶ ಅಧಿಕೃತವಾಗಿ ಒಪ್ಪಿಕೊಂಡಂತಾಗಿದೆ ಎನ್ನಲಾಗಿದೆ.

ಉಗ್ರ ಸಂಘಟನೆಗಳಿಗೆ ಹಣಕಾಸು ನೆರವು ನೀಡುವುದಕ್ಕೆ ಕಡಿವಾಣ ಹಾಕುವಲ್ಲಿ ಗಂಭೀರ ಪ್ರಯತ್ನ ಮಾಡದ ಕಾರಣ, ಪಾಕಿಸ್ತಾನವನ್ನು ಎಫ್‌ಎಟಿಎಫ್‌ 2018ರ ಜೂನ್‌ನಲ್ಲಿ ‘ಬೂದು ಪಟ್ಟಿಗೆ’ ಸೇರಿಸಿತ್ತು. ಅಲ್ಲದೇ, 27 ಅಂಶಗಳನ್ನು ಈಡೇರಿಸುವ ಸಲುವಾಗಿ 2019ರ ಅಕ್ಟೋಬರ್‌ ವರೆಗೆ ಗಡುವು ನೀಡಿತ್ತು. ಆದರೆ, ಈ ಪೈಕಿ 25 ಅಂಶಗಳನ್ನು ಈಡೇರಿಸುವಲ್ಲಿಯೇ ಪಾಕಿಸ್ತಾನ ವಿಫಲವಾಗಿತ್ತು.

ಉಗ್ರ ಸಂಘಟನೆಗಳಾದ ಲಷ್ಕರ್‌–ಎ–ತಯಬಾ (ಎಲ್‌ಇಟಿ), ಜೈಷ್‌–ಎ–ಮೊಹಮ್ಮದ್‌ (ಜೆಇಎಂ), ಉಗ್ರರ ಚಟುವಟಿಕೆಗಳನ್ನು ಬೆಂಬಲಿಸುವ ಜಮಾತ್‌–ಉದ್‌–ದಾವಾ ಹಾಗೂ ಫಲ್ಹಾ–ಎ–ಇನ್ಸಾನಿಯತ್‌ ಫೌಂಡೇಷನ್‌ಗಳಿಗೆ ಹಣ ಹರಿದು ಬರುವುದರ ಮೇಲೆ ನಿಗಾ ಇಡುವಂತೆ ಎಫ್‌ಎಟಿಎಫ್‌ ಪಾಕಿಸ್ತಾನಕ್ಕೆ ಸೂಚಿಸಿತ್ತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English