- Mega Media News Kannada - https://kannada.megamedianews.com -

ಪತ್ನಿ ಮತ್ತು ತಾಯಿಯನ್ನು ಕೊಂದ ಶಾಟ್‌ಪುಟ್‌ ಆಟಗಾರ

iqbal Singh [1]ವಾಷ್ಟಿಂಗ್ಟನ್‌: ನ್ಯೂಟೌನ್‌ ಸ್ಕ್ವೇರ್‌ನ ರಾಕ್‌ವುಡ್‌ ರಸ್ತೆಯಲ್ಲಿ ಶಾಟ್‌ಪುಟ್‌ ಆಟಗಾರ ಇಕ್ಬಾಲ್‌ ಸಿಂಗ್ ಎಂಬಾತ ತಮ್ಮ ಪತ್ನಿ ಮತ್ತು ತಾಯಿಯನ್ನು ಕೊಂದು ಪೊಲೀಸರಿಗೆ ಶರಣಾಗಿದ್ದಾರೆ.

62 ವರ್ಷದ ಇಕ್ಬಾಲ್‌ ಸಿಂಗ್‌ ಬೊಪರಾಯ್‌  ಪ್ರಸ್ತುತ ಅಮೆರಿಕ ನಿವಾಸಿ. ಪೆನ್ಸಿಲ್ವೇನಿಯದ ಡೆಲಾವೇರ್‌ ಕೌಂಟಿಯ, ನ್ಯೂಟೌನ್‌ ಸ್ಕ್ವೇರ್‌ನಲ್ಲಿ ರವಿವಾರ ಬೆಳಗ್ಗೆ ಘಟನೆ ನಡೆದಿದೆ.

1983ರ ಕುವೈಟ್‌ ಏಶ್ಯನ್‌ ಆ್ಯತ್ಲೆಟಿಕ್ಸ್‌ ಚಾಂಪಿ ಯನ್‌ಶಿಪ್‌ನ ಶಾಟ್‌ಪುಟ್‌ನಲ್ಲಿ ಕಂಚಿನ ಪದಕ ಗೆದ್ದಿರುವ ಇಕ್ಬಾಲ್‌ ಸಿಂಗ್‌ ಬೊಪರಾಯ್‌ ಈಗ ಕೊಲೆ ಗಾರ!. ಆದರೆ ಕಾರಣವೇನೆಂದು ತಿಳಿದುಬಂದಿಲ್ಲ.

ನ್ಯೂಟೌನ್‌ ಸ್ಕ್ವೇರ್‌ನ ರಾಕ್‌ವುಡ್‌ ರಸ್ತೆಯಲ್ಲಿರುವ ಆ ಮನೆಯ ಮೊದಲನೇ ಮಹಡಿಯಲ್ಲಿ ಇಕ್ಬಾಲ್‌ ತಾಯಿ ನಸೀಬ್‌ ಕೌರ್‌ (90 ) ನಿಸ್ತೇಜಗೊಂಡು ಬಿದ್ದಿದ್ದರು. ಮೆಟ್ಟಿಲ ಮೇಲೆ ಪತ್ನಿ ಜಸ್ಪಾಲ್‌ ಕೌರ್‌ ಶವ ಸಿಕ್ಕಿದೆ. ಇಬ್ಬರ ಕತ್ತನ್ನು ಸೀಳಿ ಕೊಲೆ ಮಾಡಲಾಗಿದೆ. ಬಳಿಕ ತಮ್ಮನ್ನು ತಾವೇ ಇಕ್ಬಾಲ್‌ ಇರಿದುಕೊಂಡಿದ್ದಾರೆ. ಪರಿಣಾಮ, ಸ್ವತಃ ಅವರೇ ರಕ್ತಮಯವಾಗಿದ್ದರು.

ಪೊಲೀಸರು ಬರುವ ವೇಳೆ ಇಬ್ಬರು ಸ್ತ್ರೀಯರೂ ಮೃತಪಟ್ಟಿದ್ದರು. ಕೊಲೆ ಮಾಡಿದ ಅನಂತರ ತಮ್ಮ ಪುತ್ರ ಮತ್ತು ಪುತ್ರಿಗೆ ಇಕ್ಬಾಲ್‌ ಸಿಂಗ್‌ ಕರೆ ಮಾಡಿ ಕೃತ್ಯವೆಸಗಿರುವುದಾಗಿ ಹೇಳಿದ್ದಾರೆ. ಮಾತ್ರವಲ್ಲ, ತಾವಾಗಿಯೇ ಪೊಲೀಸ ರಿಗೆ ಶರಣಾಗಿದ್ದಾರೆ.

ಪಂಜಾಬ್‌ನ ಹೋಶಿಯಾರ್‌ಪುರ ಜಿಲ್ಲೆಯ ಉರ್ಮರ್‌ ತಂಡಾದಲ್ಲಿ ಇಕ್ಬಾಲ್‌ ಸಿಂಗ್‌ ಜನಿಸಿದರು. ಭಾರತದ ಅಗ್ರ 20 ಶಾಟ್‌ಪುಟ್‌ ಸ್ಪರ್ಧಿಗಳಲ್ಲಿ ಇವರೂ ಒಬ್ಬರು. 18.77 ಮೀ. ಅವರ ಶ್ರೇಷ್ಠ ಸಾಧನೆ. ಆರಂಭದಲ್ಲಿ ಟಾಟಾ ಸ್ಟೀಲ್‌ನಲ್ಲಿ ಉದ್ಯೋಗಿಯಾಗಿದ್ದ ಅವರು, ಅನಂತರ ಪಂಜಾಬ್‌ ಪೊಲೀಸ್‌ನಲ್ಲಿ ಇನ್ಸ್‌ಪೆಕ್ಟರ್‌ ಆಗಿದ್ದರು. ಬಳಿಕ ಅಮೆರಿಕದಲ್ಲಿ ನೆಲೆ ನಿಂತರು. ಸದ್ಯ ಅಲ್ಲಿ ಕ್ಯಾಬ್‌ ಚಾಲಕನಾಗಿ ವೃತ್ತಿ ನಿರ್ವಹಿಸುತ್ತಿದ್ದಾರೆ.