- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಡ್ರಗ್ ಆರೋಪಿಗಳನ್ನು ಪರೇಡ್ ನಡೆಸಿ ಎಚ್ಚರಿಕೆ ನೀಡಿದ ಮಂಗಳೂರು ಪೊಲೀಸ್ ಕಮಿಷನರ್

drug [1]ಮಂಗಳೂರು : ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಸೋಮವಾರ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿರುವ ಪೊಲೀಸ್ ಠಾಣೆಗಳಲ್ಲಿ ಮಾದಕ ದ್ರವ್ಯ ಸಾಗಾಟ ಮತ್ತು ವ್ಯಸನ ಪ್ರಕರಣಗಳಲ್ಲಿ ಶಾಮೀಲಾದ ಆರೋಪಿಗಳ ಪರೇಡ್ ನಡೆಸಲಾಯಿತು.

ಮಂಗಳೂರು ಮತ್ತು ಕಾಸರಗೋಡು ಮೂಲದ ನೂರಕ್ಕೂ ಹೆಚ್ಚು ಆರೋಪಿಗಳನ್ನು ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ವಿಚಾರಣೆ ನಡೆಸಿದರು.

ಡ್ರಗ್ಸ್ ದಂಧೆಯನ್ನು ಮತ್ತೆ ಮುಂದುವರಿಸಿದರೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಹಾಗೂ ಗಡೀಪಾರು ಮಾಡಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಈಗಾಗಲೇ ಒಂದಕ್ಕಿಂತ ಹೆಚ್ಚು ಡ್ರಗ್ಸ್ ಸಾಗಾಟ, ಮಾರಾಟ, ಪೂರೈಕೆ ಪ್ರಕರಣಗಳಲ್ಲಿ ಭಾಗಿಯಾಗಿ ಸಿಕ್ಕಿಬಿದ್ದಿರುವ ಆರೋಪಿಗಳಿಗೆ ಎಚ್ಚರಿಕೆ ನೀಡುವ ಕೆಲಸ ಮಾಡಲಾಗಿದೆ. ಯುವಜನತೆಯನ್ನು ಈ ಪಿಡುಗಿನಿಂದ ಹೊರತಂದು ಅವರಿಗೆ ಉಜ್ವಲವಾದ ಭವಿಷ್ಯವನ್ನು ನೀಡುವುದು ನಮ್ಮ ಉದ್ದೇಶ. ಡ್ರಗ್ಸ್ ಮಾಫಿಯಾದ ವಿರುದ್ಧ ಪೊಲೀಸ್ ಇಲಾಖೆ ಹಿಂದಿನಿಂದಲೂ ಕಾರ್ಯಾಚರಿಸುತ್ತಿದೆ. ಇದೀಗ ತನ್ನ ಕಾರ್ಯಾಚರಣೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ಇದರ ಭಾಗವಾಗಿ ಈಗಾಗಲೇ ವಿವಿಧ ರೀತಿಯ ಪ್ರಕರಣಗಳಲ್ಲಿ ಸಿಕ್ಕಿ ಬಿದ್ದಿರುವ ಆರೋಪಿಗಳನ್ನು ಕರೆಸಿ ಅವರಿಗೆ ಎಚ್ಚರಿಕೆ ಹಾಗೂ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

drug [2]ಆಂಧ್ರ ಪ್ರದೇಶ, ಮಹಾರಾಷ್ಟ್ರ, ಕೇರಳ, ಗೋವಾ ಮೊದಲಾದ ಕಡೆಗಳಿಂದ ಮಂಗಳೂರಿಗೆ ಡ್ರಗ್ಸ್ ಪೂರೈಕೆಯಾಗುತ್ತಿದೆ. ವಿದೇಶಗಳಿಂದಲೂ ಇಲ್ಲಿಗೆ ರವಾನೆಯಾಗುತ್ತಿದೆ ಎಂಬುದನ್ನು ಅಲ್ಲಗಳೆಯಲಾಗದು. ಇತರ ಪ್ರಕರಣಗಳಂತೆ ಡ್ರಗ್ಸ್ ಮಾಫಿಯಾದಲ್ಲಿ ಆರೋಪಿಗಳನ್ನು ಪತ್ತೆಹಚ್ಚುವುದು ಕಷ್ಟದ ಕೆಲಸ. ಈ ದಂಧೆ ಮುಕ್ತವಾಗಿ ನಡೆಯುವುದಿಲ್ಲ. ಗುಪ್ತವಾಗಿ ನಡೆಯುವ ಈ ದಂಧೆಯನ್ನು ಮಟ್ಟಹಾಕಲು ಪೊಲೀಸ್ ಇಲಾಖೆ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಡ್ರಗ್ಸ್ ಮಾಫಿಯಾ ವಿರುದ್ಧ ಇದು ಮುಂದುವರಿದ ಯುದ್ಧ ಎಂದರು.

ಮಂಗಳೂರಿಗೆ  ವಿದ್ಯಾಭ್ಯಾಸಕ್ಕೆ ಹೊರ ರಾಜ್ಯಗಳಿಂದ ಸಾಕಷ್ಟು ಮಂದಿ ಬರುತ್ತಾರೆ. ಇವರನ್ನೇ ಗುರಿಯಾಗಿಸಿಕೊಂಡು ಈ ದಂಧೆ ನಡೆಯುತ್ತಿದೆ. ರೌಡಿ ಪರೇಡ್‌ಗಳನ್ನು ಸತತವಾಗಿ ನಡೆಸಲಾಗುತ್ತಿದೆ. ಇದೀಗ ಪ್ರತ್ಯೇಕವಾಗಿ ಡ್ರಗ್ಸ್ ಮಾರಾಟಗಾರರು, ಪೂರೈಕೆದಾರರು ಮತ್ತು ವ್ಯಸನ ಪ್ರಕರಣಗಳ ಆರೋಪಿಗಳನ್ನು ಕರೆಸಿ ಪರೇಡ್ ನಡೆಸಿ ಅವರಿಗೆ ಮುನ್ನೆಚ್ಚರಿಕೆ ನೀಡಲಾಗುತ್ತಿದೆ, ಜತೆಗೆ ಅವರನ್ನು ಬದಲಾಯಿಸಿ ಅವರನ್ನು ಸಮಾಜದಲ್ಲಿ ಸರಿದಾರಿಗೆ ತರುವ ಉದ್ದೇಶವೂ ಸೇರಿದೆ ಎಂದರು.

ಡ್ರಗ್ಸ್ ಪ್ರಕರಣದ ಆರೋಪಿಗಳಿಗೆ ಸಿಸಿಬಿ ವಿಭಾಗದ ಇನ್ಸ್‌ಪೆಕ್ಟರ್ ಶಿವಪ್ರಕಾಶ್ ಆರ್. ನಾಯ್ಕ ಪರೇಡ್ ನಡೆಸಿ, ಎಚ್ಚರಿಕೆ ನೀಡಿದರು. ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಆರೋಪಿಗಳನ್ನು ಪ್ರತ್ಯೇಕವಾಗಿ ಮಾತುಕತೆ ನಡೆಸಿ ಎಚ್ಚರಿಕೆ ನೀಡಿದರು.