- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ವಿಟ್ಲ ಉಪ ನೋಂದಣಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಸಂಜೀವ ಮಠಂದೂರು

vitla Subregister [1]ಬಂಟ್ವಾಳ:  ವಿಟ್ಲ ಉಪನೋಂದಣಿ ಕಚೇರಿಗೆ ದಿಢೀರನೆ ಭೇಟಿ ನೀಡಿದ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ವಿಟ್ಲ ಉಪ ನೋಂದಣಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ಶುಕ್ರವಾರ ನಡೆದಿದೆ.

ಸಾರ್ವಜನಿಕರ ನಿರಂತರ ದೂರಿನ ಹಿನ್ನೆಲೆಯಲ್ಲಿ  ವಿಟ್ಲ ಉಪ ನೋಂದಣಿ  ಕಚೇರಿಗೆ ಭೇಟಿ ನೀಡಿದ ಶಾಸಕರು ಉಪನೋಂದಣಾಧಿಕಾರಿ ಪ್ರೇಮಾ  ಅವರನ್ನು  ನೀವು ಬೆಳಿಗ್ಗೆ 11 ಗಂಟೆಗೆ ಕರ್ತವ್ಯ ಹಾಜರಾಗುತ್ತಿದ್ದೀರಿ, ಪ್ರತಿನಿತ್ಯ ಜನರು ತಮ್ಮ ಕೆಲಸಕ್ಕೆ ಕಾಯಬೇಕು. ಕೆಲವರು ಕೆಲಸ ನಡೆಯದೇ ಹಿಂತಿರುಗುತ್ತಿದ್ದಾರೆ. ಜನರೊಂದಿಗೆ ದರ್ಪದಿಂದ ವರ್ತಿಸುತ್ತಿದ್ದೀರಿ ಎಂಬ ದೂರು ಬರುತ್ತಿದೆ. ನಾನು ಬಂದು ಕೆಲವು ಹೊತ್ತು ಕಳೆದರೂ ಹೊರಗಡೆ ನಿಂತುಕೊಂಡಿದ್ದೆ. ಶಾಸಕರ ಜತೆ ಹೇಗೆ ನಡೆದುಕೊಳ್ಳಬೇಕೆಂದು ನಿಮಗೆ ಗೊತ್ತಿಲ್ಲ. ಇನ್ನೂ ಜನರನ್ನು ಯಾವ ರೀತಿ ನಡೆದುಕೊಳ್ಳುತ್ತೀರಿ ಸ್ವಲ್ಪವಾದರೂ ಜವಾಬ್ದಾರಿ ಇದೆಯಾ ನಿಮಗೆ ಎಂದು ಪ್ರಶ್ನಿಸಿದರು.

ಉಪನೋಂದಣಾಧಿಕಾರಿ ಪ್ರೇಮಾ, ಇಲ್ಲಿ  ಸರ್ವರ್ ಸಮಸ್ಯೆ ಇದೆ. ಇಬ್ಬರು ಮಾತ್ರ ಸಿಬ್ಬಂದಿಗಳು ಮಾತ್ರ ಇರುವುದು. ಕಂಪ್ಯೂಟರ್ ಕೂಡಾ ಕೈ ಕೊಡುತ್ತಿದೆ. ಈ ಸಮಸ್ಯೆಯಿಂದ ಕೆಲಸಕಾರ್ಯ ತಡವಾಗುತ್ತದೆ. ನಾನು ಸಮಯಕ್ಕೆ ಸರಿಯಾಗಿ ಕರ್ತವ್ಯ ಹಾಜರಾಗುತ್ತಿದ್ದೇನೆ. ಟೋಕನ್ ನೀಡಿದ ಎಲ್ಲರ ಕೆಲಸ ನಡೆಯುತ್ತಿದೆ ಎಂದು ಹೇಳಿದರು.

ತಾಂತ್ರಿಕ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿ ಸರಿಪಡಿಸುವ ಜವಾಬ್ದಾರಿ ನಿಮ್ಮದಾಗಿದೆ. ತಮ್ಮ ಕೆಲಸಕಾರ್ಯಗಳಿಗೆ ಬರುವ ಜನರಿಗೆ ಯಾವುದೇ ಸಮಸ್ಯೆ ಆಗಬಾರದು. ಅವರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎಂದು ಸಂಜೀವ ಮಠಂದೂರು ಹೇಳಿದರು.

ಅವರು ಬಳಿಕ ಮೇಲಾಧಿಕಾರಿಗಳಿಗೆ ಕರೆ ಮಾಡಿ ಮಾತನಾಡಿ ಇಲ್ಲಿಯ ಪರಿಸ್ಥಿತಿಯ ಬಗ್ಗೆ ವಿವರಿಸಿ, ತಕ್ಷಣವೇ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಸೂಚನೆ ನೀಡಿದರು.