- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮಂಗಳೂರು: ಹಣವಿಲ್ಲದೆ ಆಸ್ಪತ್ರೆಗೆ ಸೇರಿದ ಆ ವ್ಯಕ್ತಿಗೆ ಹಣಕಾಸಿನ ನೆರವು ಬಂದರೂ ಆತನನ್ನು ಉಳಿಸಲಾಗಲಿಲ್ಲ

geetha [1]ಮಂಗಳೂರು: ಕಿಡ್ನಿ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ವ್ಯಕ್ತಿಯನ್ನು ಹಣಕಾಸಿನ ನೆರವು  ಬಂದರೂ ಉಳಿಸಿಕೊಳ್ಳಲಾಗಲಿಲ್ಲ ಎಂದು  ಪತ್ನಿ ಕಣ್ಣೀರಿಟ್ಟಿದ್ದಾರೆ.

ಹಣವಿಲ್ಲದೆ ನಗರದ ಯೆನೆಪೋಯ ಆಸ್ಪತ್ರೆಗೆ ಸೇರಿದ ಆ ವ್ಯಕ್ತಿಯನ್ನು ಮೊದಲು ಹಣವಿಲ್ಲದ ಕಾರಣ ಚಿಕಿತ್ಸೆ ನೀಡಲು ಒಪ್ಪಲಿಲ್ಲ ಬಳಿಕ,  ತಮ್ಮ ಪತಿಯನ್ನು ಉಳಿಸಲು ಹಣಕಾಸಿನ ನೆರವು ನೀಡಿ ಎಂದು ಮಹಿಳೆಯೋರ್ವರು ವೀಡಿಯೋ ಮೂಲಕ ಮಾಡಿದ ಮನವಿಗೆ ಒಂದೇ ದಿನ 14 ಲಕ್ಷ ರೂ. ನೆರವು ಹರಿದು ಬಂದಿದೆ. ಆದರೆ ಕೊನೆಯ ಕ್ಷಣದವರೆಗೆ ಹೋರಾಡಿದರೂ ಪತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗದ ಮನ ಮಿಡಿಯುವ ಘಟನೆ ಮಂಗಳೂರಿನಲ್ಲಿ ಸಂಭವಿಸಿದೆ.

ಮಂಗಳೂರಿನ ಬೋಳದ ರಂಜೇಶ್‌ ಶೆಟ್ಟಿ ಅವರು ಕಿಡ್ನಿ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಕೊರೊನಾ ಪಾಸಿಟಿವ್‌ ಬಂದು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದರು.

ಗಂಭೀರ ಸ್ಥಿತಿಯಲ್ಲಿದ್ದ ಕಾರಣ ಐಸಿಯುವಿಗೆ ದಾಖಲು ಮಾಡುವಂತೆ ವೈದ್ಯರು ತಿಳಿಸಿದ್ದಾರೆ. ಆದರೆ ಆಸ್ಪತ್ರೆ ಸಿಬ್ಬಂದಿಗಳು ಹಣವಿಲ್ಲದ ಕಾರಣ ಚಿಕಿತ್ಸೆ ನೀಡಲು ಒಪ್ಪಲಿಲ್ಲ. ತಮ್ಮ ಪತಿಯನ್ನು ಉಳಿಸಲು  ಅವರ ಪತ್ನಿ ಗೀತಾ ಅವರ ನೆರವಿಗೆ ಬಂದದ್ದು, ಸಾಮಾಜಿಕ ಕಾರ್ಯಕರ್ತ ಆಸಿಫ್‌ ಆಪತ್ಭಾಂಧವ. ಆಸಿಫ್‌ ಅವರು ತಮ್ಮ ಮೊಬೈಲ್‌ನಲ್ಲಿ ಗೀತಾ ಅವರ ಮನವಿಯನ್ನು ವೀಡಿಯೋ ಮಾಡಿ, ಬ್ಯಾಂಕ್‌ ಖಾತೆ ಸಂಖ್ಯೆ, ಮೊಬೈಲ್‌ ಸಂಖ್ಯೆಯೊಂದಿಗೆ ಸಾಮಾಜಿಕ ತಾಣಗಳಲ್ಲಿ ಹರಿಯಬಿಟ್ಟಿದ್ದರು. ಆಸಿಫ್‌ ವೀಡಿಯೋ ನೋಡಿದ ಹಲವಾರು ಮಂದಿ ಗೀತಾ ಮನವಿಗೆ ಸ್ಪಂದಿಸಿದ್ದು, ಒಂದೇ ದಿನದಲ್ಲಿ 14 ಲಕ್ಷ ರೂ. ಗೀತಾ ಅವರ ಖಾತೆಗೆ ಜಮಾಯಿಸಿದ್ದಾರೆ.

ವೀಡಿಯೋ ಅಪ್ಲೋಡ್‌ ಮಾಡಿದ ತತ್‌ಕ್ಷಣ ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ ಅವರು ವೈಯಕ್ತಿಕ ನೆಲೆಯಿಂದ 50 ಸಾವಿರ ರೂ. ನೀಡಿದ್ದಾರೆ. ಬುಧವಾರ ಬೆಳಗ್ಗೆ ಸಂಘದ ವತಿಯಿಂದ ಇನ್ನೂ 25 ಸಾವಿರ ರೂ.ಗಳನ್ನು ನೀಡಿದ್ದಾರೆ. ಅನೇಕ ಸಹೃದಯರು ಗೀತಾ ಅವರಿಗೆ ನೆರವು ನೀಡಿದ್ದಾರೆ ಎಂದು ಆಸಿಫ್‌ ಆಪತ್ಭಾಂಧವ ಅವರು ತಿಳಿಸಿದ್ದಾರೆ.

ಮಂಗಳವಾರ  ಮಂಗಳೂರಿನ ಯೆನೆಪೋಯ ಆಸ್ಪತ್ರೆಗೆ ಸೇರಿದ ರಂಜೇಶ್‌ ಶೆಟ್ಟಿ ಯನ್ನು ಬುಧವಾರ ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಗೆ ಕೊಂಡುಹೋಗಲಾಗಿತ್ತು. ಹಣವಿಲ್ಲದಿದ್ದರೂ ದಾನಿಗಳಿಗೆ ಗೋಗರೆದು ಸಂಗ್ರಹಿಸಿದ ಎಲ್ಲಾ ಹಣ ಆಸ್ಪತ್ರೆಗೆ ಕಟ್ಟಿದ್ದರು. ಆದರೆ  ಗೀತಾ ಅವರ ಮನವಿ  ಫಲಿಸಲೇ ಇಲ್ಲ. ಮಂಗಳವಾರ ಆಸ್ಪತ್ರೆಗೆ ದಾಖಲಾಗಿದ್ದ ಗೀತಾರ ಪತಿ ರಂಜೇಶ್‌ ಶೆಟ್ಟಿ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಸಂಜೆ ಪ್ರಾಣ ಕಳೆದುಕೊಂಡಿದ್ದಾರೆ. ತಂದೆಯ ಅಗಲಿಕೆಯಿಂದ ಪುಟ್ಟ ಮಗನೂ ದುಃಖದ ಮಡುವಿನಲ್ಲಿದ್ದಾನೆ.