- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬವನ್ನು ಪಕೋಡ ಮಾರಿ ಆಚರಿಸಿದ ಎನ್ಎಸ್ ಯುಐ

nsui [1]ಮಂಗಳೂರು: ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯ ಮುಂಭಾಗದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬವನ್ನು ಎನ್ಎಸ್ ಯುಐ ಸದಸ್ಯರು  ರಾಷ್ಟ್ರೀಯ ನಿರುದ್ಯೋಗ ದಿನವನ್ನಾಗಿ ಆಚರಿಸಿ ಪಕೋಡ ಮಾಡಿ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭ ಎನ್ಎಸ್ಯುಐ ದ‌.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸವಾದ್ ಸುಳ್ಯ ಮಾತನಾಡಿ,  ವರ್ಷಕ್ಕೆ 12 ಕೋಟಿ‌ ಉದ್ಯೋಗ ಸೃಷ್ಟಿ ಮಾಡುತ್ತದೆ ಎಂದು ಹೇಳಿದ ಕೇಂದ್ರ ಸರ್ಕಾರ, ವರ್ಷಕ್ಕೆ 2.50 ಕೋಟಿ ಉದ್ಯೋಗ ನಷ್ಟ ಮಾಡುವಂತಹ ಸನ್ನಿವೇಶವನ್ನು ಸೃಷ್ಟಿ ಮಾಡುತ್ತಿದೆ. ಅವೈಜ್ಞಾನಿಕವಾಗಿ ಲಾಕ್ ಡೌನ್ ಘೋಷಣೆ ಮಾಡಿ ವಿದ್ಯಾರ್ಥಿಗಳನ್ನು, ಕೃಷಿಕರನ್ನು, ಬಡವರನ್ನು ಬೀದಿಗೆ ತಂದು ನಿಲ್ಲಿಸಿದೆ ಎಂದು ಹೇಳಿದರು.‘

ಇಂಜಿನಿಯರಿಂಗ್, ಎಂಬಿಬಿಎಸ್ ಪದವೀಧರರು ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಅನ್ವಯ 250 ರೂ. ವೇತನಕ್ಕೆ ದುಡಿಯುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಪಕೋಡ ಮಾರಿ ಬದುಕುತ್ತಿರಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ. ದೇಶದಲ್ಲಿ ವಿದ್ಯಾರ್ಥಿಗಳ, ಯುವಕರ ಪರವಾದ ಯಾವುದೇ ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿಲ್ಲ. ಬದಲಾಗಿ ವಿದ್ಯಾರ್ಥಿಗಳನ್ನು, ಯುವಕರನ್ನು ಪಕೋಡ ಮಾರಿ ಎಂದು ಮೋದಿವರು ಹೇಳುತ್ತಿದ್ದಾರೆ. ದ.ಕ.ಜಿಲ್ಲೆ ಶಿಕ್ಷಣದ ತವರು ಜಿಲ್ಲೆ. ಇಲ್ಲಿ ಸಾಕಷ್ಟು ಮೆಡಿಕಲ್ ಕಾಲೇಜುಗಳು, ಇಂಜಿನಿಯರಿಂಗ್ ಕಾಲೇಜುಗಳು ಇದ್ದರೂ ಉದ್ಯೋಗವನ್ನು ಅರಸುತ್ತಾ ವಿದೇಶಗಳಿಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.

ದ.ಕ.ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲುರವರು ಯಾವುದೇ ಐಟಿ ಕಂಪೆನಿಗಳನ್ನು ದ.ಕ.ಜಿಲ್ಲೆಗೆ ತರುವಲ್ಲಿ ವಿಫಲವಾಗಿದ್ದಾರೆ. ಇಂತಹ ಅಯೋಗ್ಯ ಸಂಸದರನ್ನು ನಾವು ಪಡೆದಿರೋದಕ್ಕೆ ನಾವು ಖೇದ ವ್ಯಕ್ತಪಡಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ನೂತನ ಐಟಿ ಕಂಪೆನಿಗಳನ್ನು ತಂದು ಇಲ್ಲಿನ ವಿದ್ಯಾರ್ಥಿಗಳಿಗೆ ರಾಜ್ಯದಲ್ಲಿಯೇ ಉದ್ಯೋಗ ನಿರ್ಮಿಸದಿದ್ದಲ್ಲಿ ಮುಂದಿನ ಚುನಾವಣೆಯಲ್ಲಿ ವಿದ್ಯಾರ್ಥಿಗಳು, ಯುವ ಸಮೂಹ ಕೇಂದ್ರ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲಿದೆ ಎಂದು ಸವಾದ್ ಸುಳ್ಯ ಹೇಳಿದರು.