- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ನಳಿನ್’ ಒಬ್ಬ ಹಾಸ್ಯಗಾರ, ಡಾಲರ್ ಬೆಲೆ 15 ರೂ.ಗೆ ಬರಲಿದೆ ಎಂದಿದ್ದ ಅವರು ಇದೀಗ ಎರಡು ಸಾವಿರಕ್ಕೆ ಮರಳು ಕೊಡಿಸುತ್ತೇವೆ ಎಂದಿದ್ದಾರೆ

Ramanatha-Rai [1]ಮಂಗಳೂರು : ಈ ಹಿಂದೆ ಡಾಲರ್ ಬೆಲೆ 15 ರೂ.ಗೆ ಬರಲಿದೆ ಎಂದಿದ್ದ ನಳಿನ್ ಕುಮಾರ್ ಕಟೀಲು, ಇದೀಗ ಎರಡು ಸಾವಿರಕ್ಕೆ ಮರಳು ಕೊಡಿಸುತ್ತೇವೆ ಎಂದು ಹೇಳಿದ್ದಾರೆ. ಇವರ ಹೇಳಿಕೆಗಳು ನರೇಂದ್ರ ಮೋದಿ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಹೇಳಿದಂತಿದೆ ಎಂದು ಮಾಜಿ ಸಚಿವ ರಮಾನಾಥ ರೈ  ವ್ಯಂಗ್ಯ ಮಾಡಿದರು.

ಜಿಲ್ಲಾ  ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ ಹಾಗೆ, ಈ ‘ಡಾಲರ್ ನಳಿನ್’ ಒಬ್ಬ ಹಾಸ್ಯಗಾರ. ಅವರು ಮೊದಲು ಈ ರೀತಿಯ ಬಾಲಿಶ ಹೇಳಿಕೆಗಳನ್ನು ನಿಲ್ಲಿಸಲಿ. ದಕ್ಷಿಣ ಕನ್ನಡ ಲೋಕ ಸಭಾ ಕ್ಷೇತ್ರದ ಸಂಸದರು ಹೇಳಿಕೆ ನೀಡಿರುವಂತೆ ಎರಡು ಸಾವಿರ ರೂಪಾಯಿಗೆ ಒಂದು ಲೋಡ್ ಮರಳನ್ನು ಜನರ ಮನೆಬಾಗಿಲಿಗೆ ತಲುಪಿಸುವ ಕೆಲಸ ಮಾಡಲಿ. ಇದನ್ನು ಕಾಂಗ್ರೆಸ್ ಸ್ವಾಗತಿಸುತ್ತದೆ. ಆದರೆ ಈ ಹೇಳಿಕೆ ಅವರು ಡಾಲರ್ ಬೆಲೆ ಇಳಿಕೆಯ ಬಗ್ಗೆ ನೀಡಿದಂತೆ ಆಗದಿರಲಿ ಎಂದರು.

ಕಳೆದ ಒಂದು ವರ್ಷದಿಂದ ಯಾರಿಗೂ ಪರವಾನಿಗೆ ನೀಡದಿದ್ದರೂ ಡ್ರೆಜ್ಜಿಂಗ್, ಜೆಸಿಬಿ ಬಳಸಿ ಅಕ್ರಮವಾಗಿ ಮರಳುಗಾರಿಕೆ ನಿರಂತರವಾಗಿ ನಡೆಯುತ್ತಿದೆ. ನಳಿನ್ ಕುಮಾರ್ ಬೆಂಬಲಿಗರೇ ನೇರವಾಗಿ ಇದರಲ್ಲಿ ಭಾಗಿಯಾಗಿದ್ದಾರೆ. ಪರವಾನಿಗೆ ಪಡೆದು ಮರಳುಗಾರಿಕೆ ನಡೆಸುವುದು ದಂಧೆಯೋ, ಇಲ್ಲ ಪರವಾನಿಗೆ ಇಲ್ಲದೇ ನಡೆಸುವುದು ದಂಧೆಯೋ ಎಂದು ಸಂಸದರೇ ಜನತೆಗೆ ತಿಳಿಸಲಿ ಎಂದು ಸವಾಲೆಸೆದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಹತ್ಯೆಗಳಲ್ಲಿ ಕಾಂಗ್ರೆಸ್ ನ ಯಾವೊಬ್ಬ ಕಾರ್ಯಕರ್ತನೂ ಭಾಗಿಯಾಗಿಲ್ಲ. ಯಾವುದೇ ದೋಷಾರೋಪಣೆ ಪಟ್ಟಿ, ಎಫ್‌ಐಆರ್ ನಲ್ಲಿ ಕಾಂಗ್ರೆಸಿಗರ ಹೆಸರಿಲ್ಲ. ಅದರಲ್ಲಿ ಎರಡು ಸಂಘಟನೆಗಳ ಕಾರ್ಯಕರ್ತರು ಇದ್ದಾರೆ. ಬಂಟ್ವಾಳ ತಾಲೂಕಿನ ಹರೀಶ್ ಎಂಬವರ ಹತ್ಯೆ ಆರೋಪಿಗಳಿಗೆ ಆಡಳಿತ ಪಕ್ಷದ ಸಂಘಟನೆಗಳಲ್ಲಿ ಉನ್ನತ ಸ್ಥಾನ ನೀಡಿ, ಪದಾಧಿಕಾರಿಗಳನ್ನಾಗಿ ಮಾಡಿದ್ದಾರೆ. ಹತ್ಯೆಗೆ ಪ್ರೋತ್ಸಾಹಿಸುತ್ತಿರುವವರು ಯಾರು ಎಂದು ಬಿಜೆಪಿ ದಾಖಲೆ ಸಹಿತ ಬಹಿರಂಗಪಡಿಸಲಿ ಎಂದು ರೈ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಯುವ ಕಾಂಗ್ರೆಸ್ ದ.ಕ. ಜಿಲ್ಲಾ ಅಧ್ಯಕ್ಷ ಮಿಥುನ್ ರೈ, ಕಾಂಗ್ರೆಸ್ ಮುಖಂಡರಾದ ಚಂದ್ರಪ್ರಕಾಶ್ ತುಂಬೆ, ವಿಶ್ವಾಸ್ ಅಮೀನ್, ಸುಭೋದ್ ಆಳ್ವ, ಸದಾಶಿವ ಶೆಟ್ಟಿ, ಬೇಬಿ ಕುಂದರ್, ಪ್ರವೀಣ್ ಚಂದ್ರ ಆಳ್ವ, ಸಂತೋಷ್ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.