- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಸುರತ್ಕಲ್ ಅಪಾರ್ಟ್‌ಮೆಂಟ್‌ನಲ್ಲಿ ದರೋಡೆ, ನಾಲ್ವರು ಆರೋಪಿಗಳ ಬಂಧನ

VikasKumar [1]ಮಂಗಳೂರು : ಅಪಾರ್ಟ್‌ಮೆಂಟ್‌ನಲ್ಲಿ  ಯಾರು ಇಲ್ಲದೆ ಇರುವುದನ್ನು ಗಮನಿಸಿ ಸುರತ್ಕಲ್ ಇಡ್ಯಾದಲ್ಲಿ  ಆಗಸ್ಟ್‌ನಲ್ಲಿ ನಡೆದ ಕಳ್ಳತನಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕಳ್ಳತನದ ಪ್ರಮುಖ ಸೂತ್ರಧಾರ ಆರೋಪಿ ಅದೇ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ನಿವೃತ್ತ ಸೈನಿಕನಾಗಿದ್ದು, ಪ್ರಕರಣದ ಇನ್ನಿಬ್ಬರು ಆರೋಪಿಗಳ ಪತ್ತೆ ಕಾರ್ಯ ಮುಂದವರಿದಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಪ್ರಕರಣದ ಕುರಿತಂತೆ ಮಾಹಿತಿ ನೀಡಿದ ಅವರು, ಆಗಸ್ಟ್ 17ರಂದು ಇಡ್ಯಾ ಗ್ರಾಮದ ಜಾರ್ಡಿನ್ ಅಪಾರ್ಟ್ ಮೆಂಟ್‌ನಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಅದೇ ಅಪಾರ್ಟ್‌ಮೆಂಟ್‌ನ ಸೆಕ್ರೆಟರಿ ಹುದ್ದೆಯಲ್ಲಿದ್ದ ಸೇನೆಯಿಂದ ನಿವೃತ್ತನಾಗಿರುವ ನವೀನ್, ಬೆಳ್ತಂಗಡಿಯ ಸಂತೋಷ್, ಕೇರಳ ಮೂಲದ ರಘು ಮತ್ತು ಅಮೇಶ್ ಎಂಬವರನ್ನು ಬಂಧಿಸಲಾಗಿದೆ ಎಂದರು.

ಅಂದು ರಾತ್ರಿ ಅಪಾರ್ಟ್‌ಮೆಂಟ್‌ನ ವಿದ್ಯಾಪ್ರಭು ಎಂಬವರಿಗೆ ಸೇರಿದ ಫ್ಲ್ಯಾಟ್‌ನ ಬಾಲ್ಕನಿ ಮೂಲಕ ನುಗ್ಗಿದ ಕಳ್ಳರು ಸುಮಾರು 51 ಲಕ್ಷ ರೂ. ನಗದು ಹಾಗೂ 224 ಗ್ರಾಂ ಚಿನ್ನವನ್ನು ದೋಚಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಸೆಪ್ಟಂಬರ್ 15ರಂದು ಸುರತ್ಕಲ್ ಪೊಲೀಸರು ಕೃತ್ಯದಲ್ಲಿ ಭಾಗಿಯಾಗಿದ್ದ ಕೇರಳ ತಿರುವನಂತಪುರದ ಆರೋಪಿಗಳಿಬ್ಬರನ್ನು ಬಂಧಿಸಿದ್ದರು. ತನಿಖೆ ಮುಂದುವರಿದಾಗ ಈ ಕಳ್ಳತನ ರೂಪಿಸಿದ್ದು, ಅದೇ ಅಪಾರ್ಟ್‌ಮೆಂಟ್‌ನ ಸೆಕ್ರೆಟರಿ ಹಾಗೂ ಅಲ್ಲೇ ಫ್ಲಾಟ್‌ನ ನಿವಾಸಿ, ಸೇನೆಯಲ್ಲಿ ಸುಮಾರು 15 ವರ್ಷ ಸೆವೆ ಸಲ್ಲಿಸಿ ನಿವೃತ್ತನಾಗಿದ್ದ ನವೀನ್ ಎಂಬುದು ಪತ್ತೆಯಾಗಿದೆ. ನವೀನ್ ವೈನ್‌ಶಾಪ್‌ನಲ್ಲಿ ಮ್ಯಾನೇಜರ್ ಆಗಿದ್ದು, ಅದೇ ವೈನ್‌ಶಾಪಿನಲ್ಲಿ ವೈಟರ್ ಆಗಿದ್ದ ಬೆಳ್ತಂಗಡಿಯ ಸಂತೋಷ್‌ರನ್ನು ಪ್ರಕರಣಕ್ಕೆ ಸಂಬಂಧಿಸಿ ಸೆ.18ರಂದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್ ತಿಳಿಸಿದರು.

Naveen [2]ಪೆಟ್ರೋಲ್ ಬಂಕ್ ಹೊಂದಿದ್ದ ವಿದ್ಯಾ ಪ್ರಭು ಅವರ ಪತಿ ಕೆಲ ಸಮಯದ ಹಿಂದೆಯಷ್ಟೇ ಮೃತಪಟ್ಟಿದ್ದರು. ಆ ಫ್ಲ್ಯಾಟ್ ಹೆಚ್ಚಾಗಿ ಖಾಲಿಯಾಗಿರುತ್ತಿದ್ದು, ವಿದ್ಯಾ ಪ್ರಭು ಆಗಾಗ್ಗೆ ಬಂದು ಹೋಗುತ್ತಿದ್ದರು. ಇದನ್ನು ಅರಿತು ಅದೇ ಫ್ಲ್ಯಾಟ್‌ನಲ್ಲಿ ಕಳೆದ ಮೂರು ವರ್ಷಗಳಿಂದ ವಾಸವಿರುವ ನವೀನ್ ಇತರ ಆರೋಪಿಗಳ ಜತೆ ಸೇರಿ ಕಳ್ಳತನ ಸಂಚು ರೂಪಿಸಿದ್ದ. ಆರೋಪಿಗಳಿಂದ 30,85,710 ರೂ. ನಗದು ಹಾಗೂ 224 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಕಾರು ಹಾಗೂ ದ್ವಿಚಕ್ರ ವಾಹನಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಕಳ್ಳತನ ಮಾಡಿರುವುದರಲ್ಲಿ ಸಾಕಷ್ಟು ಹಣವನ್ನು ಆರೋಪಿಗಳು ದುಂದು ವೆಚ್ಚ ಮಾಡಿದ್ದಾರೆ ಎಂದು ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್ ತಿಳಿಸಿದ್ದಾರೆ

ಸುದ್ದಿಗೋಷ್ಠಿಯಲ್ಲಿ ಡಿಸಿಪಿ ವಿನಯ್ ಗಾಂವ್ಕರ್, ಎಸಿಪಿ ಬೆಳ್ಳಿಯಪ್ಪ ಉಪಸ್ಥಿತರಿದ್ದರು.