- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಎಸ್.ಪಿ.ಬಿ. ಯವರಿಗೆ ಮಂಗಳೂರಿನಲ್ಲಿ “ಗಾನ ನಮನ” ಶ್ರದ್ಧಾಂಜಲಿ

SPB gnannamana [1]ಮಂಗಳೂರು : ಚಿತ್ರರಂಗದ ಸಾಹಿತ್ಯಗಳಿಗೆ ಭಾವನಾತ್ಮಕವಾಗಿ ಸಾತ್ವಿಕ ಶಕ್ತಿಯನ್ನು ತುಂಬಿದ ಮಹಾನ್ ಗಾಯಕ ಡಾ. ಎಸ್.ಪಿ.ಬಾಲಸುಬ್ರಹ್ಮಣ್ಯಂ ಎಂದು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಎಸ್. ಪ್ರದೀಪ ಕುಮಾರ ಕಲ್ಕೂರ ನುಡಿದರು. ನಗರದ ಕೊಡಿಯಾಲ್ ಬೈಲ್ ನ ಶಾರದಾ ವಿದ್ಯಾಲಯದ ಧ್ಯಾನಮಂದಿರದಲ್ಲಿ ಇಂದು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಏರ್ಪಡಿಸಲಾಗಿದ್ದ ” ಎಸ್.ಪಿ.ಬಿ. ಯವರಿಗೆ ಸಾರ್ವಜನಿಕ ಶ್ರದ್ಧಾಂಜಲಿ” ಕಾರ್ಯಕ್ರಮದಲ್ಲಿ ಅವರು ನುಡಿನಮನ ಸಲ್ಲಿಸಿದರು.

ಭಾರತೀಯ ಭಾಷೆಗಳೆಲ್ಲವನ್ನು ಸಮಾನ ಗೌರವದಿಂದ ಕಂಡಿರುವ ಎಸ್.ಪಿ.ವಿಶೇಷವಾಗಿ ನಮ್ಮೀ ಪ್ರದೇಶದ ತುಳು ಹಾಗು ಕೊಂಕಣಿ ಭಾಷಾ ಚಲನಚಿತ್ರಗಳ ಹಾಡಿಗೆ ತನ್ನ ಕಂಠಸಿರಿಯ ಮೂಲಕ ಕಳೆದ ಸುಮಾರು ನಾಲ್ಕು ದಶಕಗಳಿಂದ ಅವಿಸ್ಮರಣೀಯವಾದ ಕೊಡುಗೆಯನ್ನು ನೀಡಿರುವರು ಎಂದರು. ಪ್ರತಿಭೆಗಳನ್ನು ಗೌರವಿಸುತ್ತಾ ಮೌಲ್ಯಚಿಂತನೆಗೆ ಒತ್ತು ನೀಡುತ್ತಾ ಓರ್ವ ಸವ್ಯಸಾಚಿ ಕಲಾವಿದನಾಗಿ, ಸಂಗೀತ ಸಾಮ್ರಾಜ್ಯದ ಗಾನಗಂಧರ್ವರೆನಿಸಿಕೊಂಡು ಸಂಗೀತ ಪ್ರಿಯರೆಲ್ಲರ ಹೃದಯಾಂತರಾಳದಲ್ಲಿ ನೆಲೆ ನಿಂತಿರುವರು , ಅಮೃತ ಸೋಮೇಶ್ವರ, ಸೀತಾರಾಮ ಕುಲಾಲ್, ವಿಜಯಕುಮಾರ್ ಕೊಡಿಯಾಲಬೈಲ್ ಸಹಿತ ಅನೇಕ ಸಾಹಿತಿಗಳ ಚಿತ್ರಸಾಹಿತ್ಯಗಳಿಗೆ ಕಂಠದಾನ ಮಾಡುವ ಮೂಲಕ ಅಜರಾಮರಗೊಳಿಸಿದ ಹಿರಿಮೆಯೂ ಬಾಲಸುಬ್ರಹ್ಮಣ್ಯಂ ಅವರಿಗೆ ಸಲ್ಲುತ್ತದೆ ಎಂದರು.

ತುಳು ಚಿತ್ರರಂಗದ ಹಿರಿಯ ಗಾಯಕ ಚರಣ್ ಕುಮಾರ್ ಎಸ್.ಪಿ.ಯವರ ಸ್ಮರಣೆ ಗೈದು 70-80ರ ದಶಕದಲ್ಲಿ ಸಜ್ಜನಿಕೆಯಿಂದ ಆದ್ಯತೆಯ ನೆಲೆಯಲ್ಲಿ ತುಳುಚಿತ್ರರಂಗಕ್ಕೆ ಪ್ರಾಶಸ್ತ್ಯ ನೀಡಿ ಕಂಠದಾನ ಮಾಡುವ ಮೂಲಕ ಅವರು ಸ್ಮರಣೀಯರೆನಿಸಿದ್ದಾರೆ ಎಂದರು.

ದ.ಕ ದ ಎಸ್.ಪಿ. ಎಂದೇ ಖ್ಯಾತರಾದ ಗಾಯಕ ರವೀಂದ್ರ ಪ್ರಭು, ವಿವಿಧ ಹಾಡುಗಳನ್ನು ಹಾಡುವ ಮೂಲಕ ” ಗಾನ ನಮನ ” ಸಲ್ಲಿಸಿದರು.

ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ರಂಗಕರ್ಮಿ ವಿ.ಜಿ.ಪಾಲ್, ತುಳು ನಾಟಕ ಹಾಗು ಚಿತ್ರಸಾಹಿತಿ, ನಿರ್ದೇಶಕ ವಿಜಯಕುಮಾರ್ ಕೊಡಿಯಾಲಬೈಲ್, ಸಂಗೀತ ನಿರ್ದೇಶಕ ರಾದ ವಸಂತ ಕದ್ರಿ, ಮುರಳೀಧರ ಕಾಮತ್, ರಂಗಭೂಮಿ ಕಲಾವಿದ ತಮ್ಮ ಲಕ್ಷ್ಮಣ್, ಚಿತ್ರ ನಿರ್ಮಾಪಕ ಸುಧಾಕರ ಕುದ್ರೋಳಿ, ಜಿ.ಕೆ.ಭಟ್ ಸೆರಾಜೆ, ತಾರಾನಾಥ ಹೊಳ್ಳ, ಸನಾತನ ನಾಟ್ಯಾಲಯದ ನಿರ್ದೇಶಕ ಚಂದ್ರಶೇಖರ ಶೆಟ್ಟಿ, ನವಗಿರಿ ಗಣೇಶ್, ಅಭಿಜಿತ್ ಶೆಣೈ, ದಯಾನಂದ ಕಟೀಲ್, ರಜನಿ ಶೆಣೈ, ನಾಗರಾಜ ಬಸ್ರೂರು ಮೊದಲಾದವರು ಉಪಸ್ಥಿತರಿದ್ದರು.