- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಅವರ ಕುಟುಂಬದ ವಿರುದ್ಧ ಸಿಬಿಐ ಎಫ್ಐಆರ್

DK-Shivakumar [1]ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಅವರ ಕುಟುಂಬದ ವಿರುದ್ಧ 74.93 ಕೋಟಿ ರೂಪಾಯಿ ಅಕ್ರಮ ಆಸ್ತಿ ಗಳಿಸಿದ ಆರೋಪದ ಮೇಲೆ ಸಿಬಿಐ ಎಫ್ಐಆರ್ ದಾಖಲಿಸಿದೆ.

ಸೋಮವಾರ ಬೆಳ್ಳಂಬೆಳಗ್ಗೆಯೇ 14 ಸ್ಥಳಗಳಲ್ಲಿ ಹುಡಕಾಟ ನಡೆಸಿದಾಗ 57 ಲಕ್ಷ ರೂ ನಗದು ಹಾಗೂ ಆಸ್ತಿ ದಾಖಲೆಗಳು, ಬ್ಯಾಂಕ್ ಗೆ ಸಂಬಂಧಿಸಿದ ಮಾಹಿತಿಗಳು, ಕಂಪ್ಯೂಟರ್ ಹಾರ್ಡ್ ಡಿಸ್ಕನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಐ ತಿಳಿಸಿದೆ.

74.93 ಕೋಟಿ ರೂ ಅಸಮರ್ಪಕ ಆಸ್ತಿಗಳನ್ನು ಡಿ.ಕೆ.ಶಿವಕುಮಾರ್ ಮತ್ತು ಅವರ ಕುಟುಂಬ ಸದಸ್ಯರ ಹೆಸರಿನಲ್ಲಿ ಹೊಂದಿದ್ದಾರೆ ಎಂಬ ಆರೋಪದ ಮೇಲೆ ಮಾರ್ಚ 2020 ರಲ್ಲಿ ಕರ್ನಾಟಕ ಸರ್ಕಾರವು ದೆಹಲಿ ವಿಶೇಷ ಪೊಲೀಸ್ ಎಸ್ಟಾಬ್ಲಿಷ್ ಮೆಂಟ್ ಕಾಯ್ದೆಯ 6 ರ ಅಡಿಯಲ್ಲಿ ಅಧಿಸೂಚನೆಯನ್ನು ಹೊರಡಿಸಿದೆ. ಅದರ ಭಾಗವಾಗಿ ಕೇಂದ್ರ ಸರ್ಕಾರ ಡಿಎಸ್ ಪಿಇ ಕಾಯ್ದೆಯ ಅಧಿಸೂಚನೆ 5ರ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗಿದೆ ಎಂದು ಸಿಬಿಐ ತಿಳಿಸಿದೆ.

ಸಿಬಿಐ ಎಸ್ಪಿ ಥಾಮ್ಸನ್ ಜೋಸ್ ನೇತೃತ್ವದಲ್ಲಿ ದಾಳಿ ನಡೆದಿದೆ. ಅವರ ಕುಟುಂಬಸ್ಥರನ್ನೆಲ್ಲಾ ಮನೆ ಹತ್ತಿರದಲ್ಲಿರುವ ಕಚೇರಿಗೆ ಸದ್ಯ ಸ್ಥಳಾಂತರ ಮಾಡಲಾಗಿದೆ ಎಂದು ತಿಳಿದುಬಂದಿದೆ.

ದೆಹಲಿಯ 4 ಕಡೆ, ಮುಂಬೈಯ 1 ಕಡೆ ದಾಳಿ. ದೆಹಲಿಯಲ್ಲಿ ಸಂಸದ ಡಿ ಕೆ ಸುರೇಶ್ ವಾಸ್ತವ್ಯ ಹೂಡುವ ಕಾವೇರಿ ಅಪಾರ್ಟ್ ಮೆಂಟ್ ಮೇಲೆ, ಮುಂಬೈಯಲ್ಲಿರುವ ನಿವಾಸಗಳ ಮೇಲೆ ಸಹ ವ್ಯವಸ್ಥಿತವಾಗಿ ದಾಳಿ ನಡೆಸಿದ್ದಾರೆ. ಸಾಕಷ್ಟು ಪೂರ್ವ ತಯಾರಿ ನಡೆಸಿಯೇ ದಾಳಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ನಿನ್ನೆಯೇ ಸರ್ಚ್ ವಾರಂಟ್ ಬಂದಿತ್ತು ಎಂದು ತಿಳಿದುಬಂದಿದೆ.

ಡಿ ಕೆ ಸೋದರರ ನಿವಾಸಗಳ ಮೇಲೆ ದಾಳಿ ನಡೆಯುತ್ತಿದ್ದಂತೆ ಅವರ ಬೆಂಬಲಿಗರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆ ಜಾರಿ ನಿರ್ದೇಶನಾಲಯ ಡಿ ಕೆ ಶಿವಕುಮಾರ್ ನಿವಾಸದ ಮೇಲೆ ದಾಳಿ ನಡೆಸಿ ಅವರು ಜೈಲಿಗೆ ಕೂಡ ಹೋಗಿ ಬಂದಿದ್ದರು.