- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಅಡಕೆ ಖರೀದಿಗೆ ಬೆಳೆಗಾರರ ಮನೆಗೆ ಕಾಲಿಟ್ಟ ಕ್ಯಾಂಪ್ಕೋ ಸಂಸ್ಥೆ

Areca [1]ಮಂಗಳೂರು : ಆನ್‌ ವೀಲ್‌ ಯೋಜನೆಯಡಿ ಕಾಸರಗೋಡು ಸೇರಿದಂತೆ ಕರಾವಳಿ ಕರ್ನಾಟಕ ಭಾಗದಲ್ಲಿ ಅಡಕೆಯ ಖರೀದಿಗೆ  ಕ್ಯಾಂಪ್ಕೋ ಸಂಸ್ಥೆ, ಬೆಳೆಗಾರರ ಮನೆಗೆ ಕಾಲಿಟ್ಟಿದೆ.

ಪ್ರಾಯೋಗಿಕವಾಗಿ ಪುತ್ತೂರು, ವಿಟ್ಲ ವ್ಯಾಪ್ತಿಯಲ್ಲಿ ಬೆಳೆಗಾರರ ಮನೆಗೆ ತೆರಳಿ ಕ್ಯಾಂಪ್ಕೋ ಅಡಕೆ ಖರೀದಿಸುತ್ತಿದೆ. ಇದಕ್ಕೆ ಬೆಳೆಗಾರರಿಂದ ವ್ಯಾಪಕ ಸ್ಪಂದನೆಯೂ ವ್ಯಕ್ತವಾಗುತ್ತಿದೆ ಎಂದು ಸಂಸ್ಥೆ ಹೇಳಿದೆ.

ಕ್ಯಾಂಪ್ಕೋದ ಆನ್‌ ವೀಲ್‌  ಯೋಜನೆಯಿಂದ ಮನೆಗಳಿಗೆ ತೆರಳಿ ಅಡಕೆ ಖರೀದಿಸುವ ಖಾಸಗಿ ಖರೀದಿದಾರರಿಗೆ ಹಾಗೂ ದಲ್ಲಾಳಿಗಳಿಗೆ ತೀವ್ರ ಹೊಡೆತ ಬಿದ್ದಂತಾಗಿದೆ.  ಮಾರುಕಟ್ಟೆಯಲ್ಲಿ ಕ್ಯಾಂಪ್ಕೋ ಹಿಡಿತ ಇನ್ನಷ್ಟುಬಲಗೊಳ್ಳುವ ನಿರೀಕ್ಷೆಯನ್ನು ಹುಟ್ಟುಹಾಕಿದೆ.

ಕ್ಯಾಂಪ್ಕೋ ಶಾಖೆಗೆ ಕರೆ ಮಾಡಿದರೆ ನೇರವಾಗಿ ಕ್ಯಾಂಪ್ಕೋ ಸಿಬ್ಬಂದಿಯೇ ಮನೆಗೆ ಆಗಮಿಸುತ್ತಾರೆ.  ದಲ್ಲಾಳಿ ಅಥವಾ ಖಾಸಗಿ ಖರೀದಿದಾರರಂತೆ ಇಲ್ಲಿ ಬೆಳೆಗಾರರಿಗೆ ಯಾವುದೇ ವಿಳಂಬ ಅಥವಾ ಅನ್ಯಾಯ ಆಗುವುದಿಲ್ಲ. ಇಲ್ಲಿ ಬೆಲೆ ವಿಚಾರದಲ್ಲಿ ಬೆಳೆಗಾರರನ್ನು ವಂಚಿಸಲು ಸಾಧ್ಯವಾಗದು  ಎಂದು ಕ್ಯಾಂಪ್ಕೋ ಸಂಸ್ಥೆ ಹೇಳಿದೆ.

ಕ್ಯಾಂಪ್ಕೋ ಸಿಬ್ಬಂದಿ ಅಡಕೆಗೆ ದರ ನಿಗದಿಪಡಿಸಿ, ತೂಕ ಮಾಡಿ ವಾಹನದಲ್ಲಿ ಕ್ಯಾಂಪ್ಕೋ ಶಾಖೆಗೆ ತೆಗೆದುಕೊಂಡು ಹೋಗುತ್ತಾರೆ. ಬಳಿಕ ಮಾರಾಟದ ಮೊತ್ತವನ್ನು ನೇರ ಬೆಳೆಗಾರರ ಖಾತೆಗೆ ಜಮೆ ಮಾಡುತ್ತಾರೆ. ಅವಶ್ಯಕತೆ ಇದ್ದರೆ ನಗದು ರೂಪದಲ್ಲೂ ಪಾವತಿಸುತ್ತಾರೆ. ಅಡಕೆ ಸಾಗಾಟಕ್ಕೆ ವೆಚ್ಚ ಸಂಸ್ಥೆಗೆ ನೀಡಬೇಕಾಗುತ್ತದೆ.

ಕ್ಯಾಂಪ್ಕೋ 155 ನೇರ ಹಾಗೂ ಉಪ ಖರೀದಿ ಕೇಂದ್ರಗಳನ್ನು ಹೊಂದಿದೆ. ಪ್ರಸ್ತುತ ಸುಮಾರು 1.15 ಲಕ್ಷ ಮಂದಿ ಅಡಕೆ ಬೆಳೆಗಾರ ಸದಸ್ಯರಿದ್ದಾರೆ. ಕ್ಯಾಂಪ್ಕೋ ಶಾಖೆಗಳಲ್ಲೂ ಖರೀದಿ ಕೇಂದ್ರ ತೆರೆದಿರುತ್ತದೆ. ಬೆಳೆಗಾರರ ಮನೆ ಬಾಗಿಲಿಗೆ ಕ್ಯಾಂಪ್ಕೋ ತೆರಳುವುದರಿಂದ ಖರೀದಿ ಕೇಂದ್ರದ ಮೇಲಿನ ಒತ್ತಡವೂ ಕಡಿಮೆಯಾಗಲಿದೆ.