- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ನೂತನ ಮೇಳ 27ರಿಂದ ಆರಂಭ

Patla Mela [1]ಮಂಗಳೂರು: ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿಯವರ ಸಾರಥ್ಯದಲ್ಲಿ ನೂತನ ಮೇಳ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ವಠಾರದಲ್ಲಿ ಯಕ್ಷಗಾನ ಪ್ರದರ್ಶನದೊಂದಿಗೆ ಉದ್ಘಾಟನೆಗೊಳ್ಳಲಿದೆ. ನವೆಂಬರ್‌ 27ರಿಂದ ಮೇಳ ತಿರುಗಾಟ ಆರಂಭಿಸಲಿದೆ.

ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಎಂ.ಶಶೀಂದ್ರ ಕುಮಾರ್ ಮಾತನಾಡಿ, ನಮ್ಮ ಕ್ಷೇತ್ರದ ವತಿಯಿಂದ ಈ ಬಾರಿಯಿಂದ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಎಂಬ ನೂತನ ಯಕ್ಷಗಾನ ಮೇಳ ತಿರುಗಾಟ ನಡೆಸಲಿದೆ. ಅಕ್ಟೋಬರ್ 26 ವಿಜಯದಶಮಿ‌ಯಂದು ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ವಠಾರದಲ್ಲಿ ಯಕ್ಷಗಾನ ಪ್ರದರ್ಶನದೊಂದಿಗೆ ಮೇಳ ಉದ್ಘಾಟನೆಗೊಳ್ಳಲಿದೆ. ನವೆಂಬರ್‌ 27ರಿಂದ ಮೇಳ ತಿರುಗಾಟ ಆರಂಭಿಸಲಿದೆ ಎಂದು ತಿಳಿಸಿದರು.

ಪಟ್ಲ ಸತೀಶ್ ಶೆಟ್ಟಿಯವರು ಪ್ರಧಾನ ಭಾಗವತಿಕೆಯಲ್ಲಿ ಈ ನೂತನ ಮೇಳ ಮುನ್ನಡೆಯಲಿದೆ.  ಭಾಗವತ ಪ್ರಪುಲ್ಲಚಂದ್ರ ನೆಲ್ಯಾಡಿ, ಚಂಡೆ-ಮದ್ದಳೆ-ಚಕ್ರತಾಳದಲ್ಲಿ ಪದ್ಮನಾಭ ಉಪಾಧ್ಯಾಯ, ಗುರುಪ್ರಸಾದ್ ಬೊಳಿಂಜಡ್ಕ, ಪ್ರಶಾಂತ್ ವಗೆನಾಡು, ಪೂರ್ಣೇಶ್ ಆಚಾರ್ಯ ಇರಲಿದ್ದಾರೆ. ಮುಮ್ಮೇಳ ಕಲಾವಿದಾರಾಗಿ ರಾಧಾಕೃಷ್ಣ ನಾವಡ, ದಿವಾಣ ಶಿವಶಂಕರ್ ಭಟ್, ಸಂತೋಷ್ ಮಾನ್ಯ, ರಾಕೇಶ್ ರೈ ಅಡ್ಕ, ಸತೀಶ್ ನೈನಾಡು, ಮಾಧವ ಕೊಳತ್ತಮಜಲು, ಮೋಹನ್ ಬೆಳ್ಳಿಪಾಡಿ, ಮನೀಷ್ ಪಾಟಾಳಿ, ಲೋಕೇಶ್ ಮುಚ್ಚೂರು, ಹರಿರಾಜ್ ಕಿನ್ನಿಗೋಳಿ, ರೋಹಿತ್, ದಿವಾಕರ, ಲಕ್ಷ್ಮಣ, ಮಧುರಾಜ್, ಭುವನ್ ಮತ್ತಿತರ ಪ್ರಖ್ಯಾತ ಕಲಾವಿದರು   ಮೇಳದಲ್ಲಿ ಇದ್ದಾರೆ.

ಸಂಜೆ 6 ರಿಂದ ರಾತ್ರಿ 11ರವರೆಗೆ ಕಾಲಮಿತಿಯ ಪ್ರದರ್ಶನ ನೀಡಲಿದೆ. ಈ ಮೇಳ ವರ್ಷದ ಆರು ತಿಂಗಳು ಮಾತ್ರವಲ್ಲ, ವರ್ಷಪೂರ್ತಿ ಮೇಳ ನಡೆಸಲಿದೆ. ಮಳೆಗಾಲದ ಸಂದರ್ಭದಲ್ಲಿ ಶ್ರೀಕ್ಷೇತ್ರ ಪಾವಂಜೆಯಲ್ಲಿಯೇ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಮೇಳದ ವೀಳ್ಯವನ್ನು ಇನ್ನೂ ನಿರ್ಧಾರ ಮಾಡಿಲ್ಲ ಎಂದು ಎಂ.ಶಶೀಂದ್ರ ಕುಮಾರ್ ಹೇಳಿದರು.

ಭಾಗವತ ಪಟ್ಲ ಸತೀಶ್ ಶೆಟ್ಟಿಯವರು ಮಾತನಾಡಿ  ಕೋವಿಡ್ ನಿಂದಾಗಿ  ಹರಕೆ ಯಕ್ಷಗಾನ ಮೇಳಗಳು ಯಾವ ರೀತಿಯಲ್ಲಿ ಈ ಬಾರಿ ತಿರುಗಾಟ ನಡೆಸೋದು ಎಂಬ ಚಿಂತನೆ ನಡೆಸುವ ಕಾಲಘಟ್ಟದಲ್ಲಿ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಭಕ್ತಾದಿಗಳು ಸೇರಿ ಯಕ್ಷಗಾನ ಮೇಳವನ್ನು ನಡೆಸಲು ಹೊರಟಿರೋದು ಇತಿಹಾಸದ ಪುಟಗಳಲ್ಲಿ ದಾಖಲೆಯಾಗಬೇಕಾದ ವಿಚಾರ.‌ ಅವರಿಗೆ ನಾನು ಕಲಾವಿದರ ಪರವಾಗಿ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.