- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಬಿಜೆಪಿ ಶಾಸಕರೊಬ್ಬರ ಸಂಬಂಧಿ ಮುಡಿಪು ಬಳಿ ಗಣಿಗಾರಿಕೆ ನಡೆಸುತ್ತಿರುವುದು ವಿಪರ್ಯಾಸ : ರಮಾನಾಥ ರೈ

Ramanatha Rai [1]ಮಂಗಳೂರು: ಮುಡಿಪು ಸಮೀಪ ನಡೆಯುತ್ತಿರುವ ಅಕ್ರಮ ರೆಡ್ ಬಾಕ್ಸೈಟ್ ಗಣಿಗಾರಿಕೆಯ ತನಿಖೆಯನ್ನು ರಾಜ್ಯದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ನೇತೃತ್ವದಲ್ಲಿ ಸಮಿತಿ ರಚಿಸಿ, ತನಿಖೆ ಕೈಗೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಸಚಿವ ಬಿ ರಮಾನಾಥ ರೈ  ಹೇಳಿದ್ದಾರೆ .

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಅವರು  ಮುಡಿಪು, ಬಾಳೆಪುಣಿ, ಇನೋಳಿ ಸೇರಿದಂತೆ ಕೇರಳದ ಗಡಿ ಭಾಗದ ರೆಡ್ ಬಾಕ್ಸೈಟ್ ಗಣಿಗಾರಿಕೆಯಲ್ಲಿ ಸ್ಥಳೀಯರೊಂದಿಗೆ ಕೇರಳ, ತಮಿಳುನಾಡು, ಆಂಧ್ರ ಪ್ರದೇಶದ ಧಂದೆಕೋರರು ಇದ್ದಾರೆ. ಇವರು ಅಧಿಕಾರಿಗಳ ಮೇಲೆ ಪ್ರಭಾವ ಬೀರುತ್ತಿರುವುದು ಕಂಡು ಬರುತ್ತಿದೆ. ಆದ್ದರಿಂದ ಉನ್ನತ ಮಟ್ಟದ ತನಿಖೆ ಅನಿವಾರ್ಯ ಎಂದು ತಿಳಿಸಿದರು.

ಇದು ಬಳ್ಳಾರಿಯಲ್ಲಿ ನಡೆದಿದ್ದ ಗಣಿಗಾರಿಕೆಯನ್ನೇ ಹೋಲುತ್ತದೆ. ಮನೆ ಕಟ್ಟಲು ಐದು ಸೆಂಟ್ಸ್‌ ಜಾಗದಲ್ಲಿ ಕೆಂಪು ಕಲ್ಲು ಕಡಿಯಲೆಂದು ಪರ್ಮಿಟ್ ಪಡೆದವರೂ ಇಲ್ಲಿ ಗಣಿಗಾರಿಕೆ ಮಾಡುತ್ತಿದ್ದಾರೆ. ಗಂಜಿಮಠ ಸಮೀಪದ ಬಡಗ ಎಡಪದವು ಗ್ರಾಮದಲ್ಲಿ ಕಲ್ಲು ಕೋರೆಗೆ ಪರ್ಮಿಟ್ ಪಡೆದಿದ್ದ ಶಾಸಕರೊಬ್ಬರ ಸಂಬಂಧಿ, ಅದೇ ಪರ್ಮಿಟ್ ತೋರಿಸಿ ಮುಡಿಪು ಬಳಿ ಗಣಿಗಾರಿಕೆ ನಡೆಸುತ್ತಿರುವುದು ವಿಪರ್ಯಾಸ ಎಂದು ರೈ ಹೇಳಿದರು.

ಒಂದು ಟನ್ ರೆಡ್ ಬಾಕ್ಸೈಟ್ ದರ 2,500 ರೂ. ಇದ್ದು, ಇದರ ಶೇ.5 ರಾಜಸ್ವ ಕಟ್ಟಬೇಕು. ನಕಲಿ ಪರ್ಮಿಟ್ ಮೂಲಕ ತೆರಿಗೆ ವಂಚನೆ ಮಾಡಿರುವುದರಿಂದ ಸರಕಾರಕ್ಕೆ ಸುಮಾರು 50 ಕೋಟಿ ನಷ್ಟವಾಗಿರಬಹುದು. ಹಿಂದಿನ ಎಸಿ ದಾಳಿ ನಡೆಸಿ, ಹಲವು ಲಾರಿಗಳನ್ನು ಜಪ್ತಿ ಮಾಡಿದ್ದರು. ಅವರ ವರ್ಗಾವಣೆಗೆ ಬೇರೆ ಕಾರಣಗಳೂ ಇರಬಹುದು. ಆದರೆ, ತನಿಖೆ ಮೇಲೆ ಇದು ಪರಿಣಾಮ ಬೀರಲಿದೆ ಎಂದರು.

ಈ ಗಣಿಗಾರಿಕೆಯಿಂದ ಇನ್ಫೋಸಿಸ್‌ ಕಾರ್ಯಾಚರಣೆಗೆ ಅಡ್ಡಿಯಾಗುತ್ತಿದೆ ಎಂದು ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಸಮೀಪದ ಸಂತ ಜೋಸೇಫರ ದೇವಾಲಯ, ಕೃಷ್ಣ ಧಾಮ ಧ್ಯಾನ ಕೇಂದ್ರಕ್ಕೆ ತೊಂದರೆಯಾಗಲಿದೆ. ಸಾರ್ವಜನಿಕರ ಓಡಾಟ ಕಷ್ಟವಾಗಲಿದೆ. ಪರಿಸರದ ಮೇಲೆ ಪರಿಣಾಮ ಬೀರಲಿದೆ. ಆದ್ದರಿಂದ ಇದನ್ನು ನಿಲ್ಲಿಸುವುದೇ ಸೂಕ್ತ. ಇಲ್ಲದಿದ್ದರೆ ಬಳ್ಳಾರಿ ಗಣಿಗಾರಿಕೆ ನಿಲ್ಲಿಸಲು ಮಾಡಿದ್ದ ಪ್ರತಿಭಟನೆ ಮಾದರಿಯಲ್ಲಿ ಹೋರಾಟ ನಡೆಸಬೇಕಾದೀತು ಎಂದು ಅವರು ಎಚ್ಚರಿಕೆ ನೀಡಿದರು.

ರಾಜ್ಯಮಟ್ಟದಲ್ಲಿ ಪತ್ರಿಕೆಗಳು ವರದಿ ಮಾಡಿ ಗಮನ ಸೆಳೆದಿದ್ದರೂ, ಸರಕಾರ ತುಟಿ ಬಿಚ್ಚುತ್ತಿಲ್ಲ. ಜಿಲ್ಲಾಧಿಕಾರಿ ತನಿಖೆಗೆ ಏಳು ಜನರ ಸಮಿತಿ ರಚಿಸಿದ್ದಾರೆ. ಜೊತೆಗೆ ಉನ್ನತ ಮಟ್ಟದ ತನಿಖೆಯೂ ನಡೆದರೆ, ತಪ್ಪುತಸ್ಥರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ರಮಾನಾಥ ರೈ ಹೇಳಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮುಖಂಡರಾದ ಶಶಿಧರ ಹೆಗ್ಡೆ, ಅಬ್ದುಲ್ ರವೂಫ್, ನವೀನ್ ಡಿಸೋಜ, ಮಿಥುನ್ ರೈ, ನೀರಜ್‍ಪಾಲ್, ನಝೀರ್ ಬಜಾಲ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.