- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮಹಿಳೆಯರ ಸುರಕ್ಷತೆಗಾಗಿ 751 ದ್ವಿಚಕ್ರ ವಾಹನಗಳ ಹಸ್ತಾಂತರ

bicycle [1]ಬೆಂಗಳೂರು : ಪೊಲೀಸ್ ಇಲಾಖೆಯನ್ನು ಮತ್ತಷ್ಟು ಬಲಿಷ್ಠಗೊಳಿಸುವ ಹಾಗೂ ಮಹಿಳೆಯರ ಸುರಕ್ಷತೆ ಮತ್ತು ಭದ್ರತೆಗೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ನಿರ್ಭಯ ಯೋಜನೆಯಡಿ 751 ದ್ವಿಚಕ್ರ  ವಾಹನಗಳನ್ನು ರಾಜ್ಯ ಪೊಲೀಸ್ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.

ವಿಧಾನಸೌಧದ ಬೃಹತ್ ಮೆಟ್ಟಿಲುಗಳ ಮುಂಭಾಗದಲ್ಲಿ ಇಂದು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಿರ್ಭಯ ಯೋಜನೆಯಡಿ ರಾಜ್ಯ ಪೊಲೀಸ್ ಇಲಾಖೆಗೆ 751 ದ್ವಿ-ಚಕ್ರ ವಾಹನಗಳನ್ನು ಹಸ್ತಾಂತರಿಸಿ ಮಾತನಾಡಿದ ಅವರು ಪೊಲೀಸ್ ಇಲಾಖೆಗೆ ಇದರಿಂದ ಮತ್ತಷ್ಟು ವೇಗವನ್ನು ನೀಡಿದಂತಾಗುತ್ತದೆ. ಬೆಂಗಳೂರಿನಂತ ಬೃಹತ್ ನಗರದಲ್ಲಿ ದ್ವಿಚಕ್ರ  ವಾಹನಗಳು ಸುಲಭವಾಗಿ ಸಂಚರಿಸಬಲ್ಲವು, ಇದರಿಂದ ಅಪರಾಧಿಗಳನ್ನು ಹಿಡಿಯಲು ಸಹಾಯವಾಗುತ್ತದೆ ಎಂದು ಹೇಳಿದರು.

ದೇಶದಲ್ಲೆ ಕರ್ನಾಟಕ ರಾಜ್ಯ ಅತ್ಯುತ್ತಮ ಕಾನೂನು ಮತ್ತು ಸುವ್ಯವಸ್ಥೆ ಹೊಂದಿರುವ ರಾಜ್ಯವಾಗಿದೆ. ಮಹಿಳೆಯರ ಸುರಕ್ಷತೆಗಾಗಿ ಸರ್ಕಾರವು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಬಿಎಂಟಿಸಿಯಲ್ಲಿ ಸುರಕ್ಷತಾ ಉಪಕರಣಗಳನ್ನು ಸಹ ಅಳವಡಿಸಿದೆ. ಮಹಿಳೆಯರ ಬಗೆಗಿನ ದೃಷ್ಷಿಕೋನವನ್ನು ಬದಲಾಯಿಸಲು ಎಲ್ಲರೂ ಒಗ್ಗೂಡಿ ಶ್ರಮಿಸಬೇಕೆಂದರು.

bicycle [2]ನಿರ್ಭಯ ಯೋಜನೆಯಡಿ ಮಾನವ ಕಳ್ಳಸಾಕಾಣಿಕೆ ನಿಷೇಧ ದಳಗಳ ಸೃಜನೆಗಾಗಿ 30 ಕೇಂದ್ರಗಳಿಗೆ 51 ಮೋಟಾರ್ ಸೈಕಲ್‍ಗಳನ್ನು ಸಹ ಮಂಜೂರು ಮಾಡಲಾಗಿದೆ ಎಂದ ಅವರು, ಕೇಂದ್ರ ಸರ್ಕಾರವು ರಾಜ್ಯದಲ್ಲಿ 700 ಪೊಲೀಸ್ ಠಾಣೆಗಳಲ್ಲಿ ಮಹಿಳಾ ಸಹಾಯ ಕೇಂದ್ರಗಳನ್ನು ಪ್ರಾರಂಭಿಸಲು ಹಾಗೂ ಅದರ ನಿರ್ವಹಣೆಗಾಗಿ 7 ಕೋಟಿ ರೂ. ಗಳನ್ನು ಒದಗಿಸಿದೆ ಎಂದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಒಂದು ವರ್ಷದಲ್ಲಿ ಕರ್ನಾಟಕ ರಾಜ್ಯ ಪೊಲೀಸರು ಅತ್ಯಂತ ದಕ್ಷ ಹಾಗೂ ಪ್ರಾಮಾಣಿಕತೆಯಿಂದ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಇಡೀ ರಾಷ್ಟ್ರದಲ್ಲಿ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಲ್ಲದೆ ಒಂದು ವರ್ಷದಲ್ಲಿ ಅಪರಾಧ ಪ್ರಕರಣಗಳು ಸಹ ಬಹಳಷ್ಟು ಕಡಿಮೆಯಾಗಿದೆ. ಡ್ರಗ್ ವಿರುದ್ಧದ ಸಮರ ಯಶಸ್ವಿಯಾಗಿ ಮುಂದೆ ಸಾಗಿದ್ದು, ಮುಂದೆ ನಿರಂತರವಾಗಿ ನಡೆಯಲಿದೆ ಎಂದರು.

ಮುಖ್ಯಮಂತ್ರಿಗಳು ಇಲಾಖೆಯ ಹಲವಾರು ಬೇಡಿಕೆಗಳನ್ನು ಈಡೇರಿಸಲು ಸಹಾಯ ಹಸ್ತವನ್ನು ನೀಡಿದ್ದು, ಸುಮಾರು 16 ಸಾವಿರ ಸಿಬ್ಬಂದಿ ನೇಮಕಾತಿಗೆ ಅನುಮತಿ ನೀಡಿದ್ದಾರೆ. ಬೆಂಗಳೂರು ನಗರ ಸುರಕ್ಷಿತ ಯೋಜನೆ ಆದಷ್ಟು ಬೇಗನೆ ಕಾರ್ಯಗತವಾಗುತ್ತದೆ ಎಂದರು.
ಅಪರಾಧ ಪ್ರಕರಣಗಳಲ್ಲಿ ಮುಖ್ಯವಾಗಿ ಬೇಕಾಗಿರುವ ಆಧುನಿಕವಾಗಿರುವಂತಹ ಎಫ್‍ಎಸ್‍ಎಲ್ ಲ್ಯಾಬ್ ಕೂಡ ಸಿದ್ಧವಾಗಿದ್ದು, ದೀಪಾವಳಿಯ ನಂತರ ಮುಖ್ಯಮಂತ್ರಿಗಳು ಉದ್ಘಾಟನೆ ಮಾಡಲಿದ್ದಾರೆ ಎಂದರು.

ಸಮಾರಂಭದಲ್ಲಿ ಒಳಾಡಳಿತ ಇಲಾಖೆಯ ಸರ್ಕಾರದ ಅಪರ ಮುಖ್ಯಕಾರ್ಯದರ್ಶಿ ಡಾ: ರಜನೀಶ್ ಗೋಯಲ್, ಪೊಲೀಸ್ ಮಹಾನಿರ್ದೇಶಕರು ಮತ್ತು ಆರಕ್ಷಕ ಮಹಾನೀರಿಕ್ಷಕರಾದ ಪ್ರವೀಣ್ ಸೂದ್ ಹಾಗೂ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.