ಕಾಂಪ್ಕೋ 2019-20ನೇ ಸಾಲಿನಲ್ಲಿ32.10 ಕೋಟಿ ರೂ.ಗಳ ನಿವ್ವಳ ಲಾಭ

11:58 PM, Thursday, November 26th, 2020
Share
1 Star2 Stars3 Stars4 Stars5 Stars
(No Ratings Yet)
Loading...

campco ಮಂಗಳೂರು : ಕಾಂಪ್ಕೋ  2019-20ನೇ ಸಾಲಿನಲ್ಲಿ1,848 ಕೋಟಿ ರೂ.ಗಳ ವಹಿವಾಟು ನಡೆಸಿದ್ದು, 32.10 ಕೋಟಿ ರೂ.ಗಳ ನಿವ್ವಳ ಲಾಭ ಗಳಿಸಿದೆ. ಕೊರೋನ ಹಿನ್ನೆಲೆಯಲ್ಲಿ ಆಗಸ್ಟ್‌ನಲ್ಲಿ ನಡೆಯಬೇಕಾಗಿದ್ದ ಸರ್ವ ಸದಸ್ಯರ ಮಹಾಸಭೆ ಡಿಸೆಂಬರ್ 13ರಂದು ನಿಗದಿಪಡಿಸಲಾಗಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ತಿಳಿಸಿದ್ದಾರೆ.

ಗ್ರಾಹಕರಿಗೆ  ಸುಲಭವಾಗಿಸುವ ದೃಷ್ಟಿಯಿಂದ ಬೆಂಗಳೂರು ಮತ್ತು ಪುತ್ತೂರಿನಲ್ಲಿ ವಿಶೇಷ ಚಾಕಲೇಟು ಕಿಯೋಸ್ಕ್‌ಗಳು ಕಾರ್ಯಪ್ರವೃತ್ತವಾಗಿವೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸ್ಪೈಸ್ ಟೋಫಿ ಎಂಬ ಹೊಸ ಚಾಕಲೇಟು ಉತ್ಪನ್ನ ಮಾರುಕಟ್ಟೆಗೆ ಪರಿಚಯಿಸಲಾಗಿದ್ದು, ಉತ್ತಮ ಬೇಡಿಕೆ ಇದೆ. ಮಾಣಿ- ಮೈಸೂರು ಹೆದ್ದಾರಿಯ ಕಾವು ಎಂಬಲ್ಲಿ ನಿರ್ಮಾಣ ಹಂತದಲ್ಲಿರುವ ಗೋದಾಮು ಪೂರ್ಣ ಪ್ರಮಾಣದ ಕಾಳು ಮೆಣಸು ಸಂಸ್ಕರಣಾ ಘಟಕವನ್ನು ಹೊಂದಲಿದ್ದು, ಇದು ಫೆಬ್ರವರಿಯೊಳಗೆ ಲೋಕಾರ್ಪಣೆಗೊಳ್ಳಲಿದೆ ಎಂದವರು ಮಾಹಿತಿ ನೀಡಿದರು.

ರೈತರ ಉತ್ಪನ್ನಗಳ ದಾಸ್ತಾನಿಗಾಗಿ ಸಾಕಷ್ಟು ಸ್ಥಳಾವಕಾಶ ಕಲ್ಪಿಸುವ ದೃಷ್ಟಿಯಂದ ಬೈಕಂಪಾಡಿ, ಬೆಳ್ತಂಗಡಿ ಹಾಗೂ ಕೇರಳದ ತ್ರಿಶೂರಿನಲ್ಲಿ ಗೋದಾಮು ನಿರ್ಮಿಸಲಾಗಿದ್ದು, ಸಾಗರದಲ್ಲಿ ಗೋದಾಮು ನಿರ್ಮಾಣ ಹಂತದಲ್ಲಿದೆ. ಪ್ರಸಕ್ತ ಸಾಲಿನಲ್ಲಿ ಸಂಸ್ಥೆಯು 1,430.43 ಕೋಟಿ ರೂ. ಮೌಲ್ಯದ 48,294.93 ಮೆ. ಟನ್ ಅಡಿಕೆ, 19.70 ಕೋಟಿ ರೂ. ಮೌಲ್ಯದ 3,534.59 ಮೆ. ಟನ್ ಕೊಕ್ಕೋ ಹಸಿ ಬೀಜ ಮತ್ತು 71.69 ಕೋಟಿ ರೂ. ಮೌಲ್ಯದ 3,441.36 ಮೆ. ಟನ್ ಒಣಬೀಜ, 23.37 ಕೋಟಿ ರೂ. ಮೌಲ್ಯದ 1822.95 ಮೆ. ಟನ್ ರಬ್ಬರ್, 37.77 ಕೋಟಿ ರೂ. ಮೌಲ್ಯದ 1164.46 ಮೆ. ಟನ್ ಕಾಳುಮೆಣಸು ಖರೀದಿಸಿದೆ. ಇದೇ ವೇಳೆ ಸಂಸ್ಥೆಯು ತನ್ನ 34 ಸದಸ್ಯ ಬೆಳೆಗಾರರಿಗೆ ವಿವಿಧ ಚಿಕಿತ್ಸಾ ವೆಚ್ಚಗಳಿಗಾಗಿ ಆರ್ಥಿಕ ಸಹಾಯ ನೀಡಿದೆ ಎಂದು ಅವರು ವಿವರಿಸಿದರು.

ನೇರವಾಗಿ ಕೃಷಿಕನ ಮನೆಗೆ ಹೋಗಿ ಅಡಿಕೆ ಖರೀದಿ ಮಾಡುವ ‘ಕ್ಯಾಂಪ್ಕೋ ಆನ್ ವೀಲ್’ ಯೋಜನೆ ಜನವರಿಯಿಂದ ಅಧಿಕೃತವಾಗಿ ಜಾರಿಗೊಳಿಸಲಾಗುವುದು  ಪುತ್ತೂರಿನಲ್ಲಿ ಈಗಾಗಲೇ ಪ್ರಾಯೋಗಿಕವಾಗಿ ಈ ಯೋಜನೆ ಆರಂಭಿಸಲಾಗಿದೆ ಎಂದರು. ಕ್ಯಾಂಪ್ಕೋ ಸದಸ್ಯರಲ್ಲಿ ಅನೇಕರು ಹಿರಿಯ ನಾಗರಿಕರು. ಅವರಿಗೆ ಅಡಿಕೆ ಸುಲಿದು ಪರಿಷ್ಕರಿಸಿದ ನಂತರ ಕ್ಯಾಂಪ್ಕೋ ಶಾಖೆಗಳಿಗೆ ಒಯ್ದು ಮಾರಾಟಕ್ಕೆ ಕಷ್ಟವಾಗುತ್ತಿದೆ. ಕಾರ್ಮಿಕರು ಸಮಯಕ್ಕೆ ಒದಗಿಸುವುದು ಕೂಡಾ ಕಡಿಮೆಯಾಗಿರುವುದನ್ನು ಗಮನಿಸಿ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ. ಇದರಿಂದ ಕ್ಯಾಂಪ್ಕೋ ಮತ್ತು ಸದಸ್ಯರ ನಡವೆ ಬಾಂಧವ್ಯ ವೃದ್ಧಿ ಆಗುವ ಜತೆಗೆ ಸದಸ್ಯರ ಸಾಗಾಟದ ಶ್ರಮ ಕಡಿಮೆಯಾಗಲಿದ್ದು, ಖಾಸಗಿಯವರ ಮುಷ್ಟಿಯಿಂದ ಸದಸ್ಯರನ್ನು ರಕ್ಷಿಸುವ ಹೊಣೆಗಾರಿಕೆಯೂ ಈಡೇರಲಿದೆ ಎಂದು ಅವರು ಹೇಳಿದರು.

ಕ್ಯಾಂಪ್ಕೋ ಚಾಕಲೇಟ್ ಅಮೆಝಾನ್ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಉತ್ತಮ ಬೇಡಿಕೆ ವ್ಯಕ್ತವಾಗಿದೆ. ಇದೀಗ ಅಡಿಕೆ ಹಾಗೂ ಕಾಳು ಮೆಣಸು ಕೂಡಾ ಗ್ರಾಹಕ ಪ್ಯಾಕೇಟ್‌ನಲ್ಲಿ ಅಮೆಝಾನ್‌ನಲ್ಲಿ ಒದಗಿಸಲಾಗುವುದು ಎಂದು ಎಸ್.ಆರ್. ಸತೀಶ್ಚಂದ್ರ ತಿಳಿಸಿದರು.

ಕಳೆದ ಮಾರ್ಚ್‌ನಲ್ಲಿ ಕೆಜಿಗೆ 267 ರೂ.ಗಳಿದ್ದ ಅಡಿಕೆ ದರ ಎಪ್ರಿಲ್ ಮೊದಲ ವಾರದಿಂದ 150 ರೂ.ನಿಂದ 200 ರೂ.ಗೆ ಇಳಿಕೆಯಾಗಿತ್ತು. ಇದೀಗ ಅಡಿಕೆ ಧಾರಣೆ 400 ರೂ. ಆಸುಪಾಸಿನಲ್ಲಿದ್ದು, ಅಡಿಕೆ ಹಾಗೂ ಕ್ಯಾಂಪ್ಕೋ ಇತಿಹಾಸದಲ್ಲೇ ದೀರ್ಘ ಸಮಯದಿಂದ ಈ ಧಾರಣೆ ಇರುವುದು ಅಡಿಕೆ ಬೆಳೆಗಾರರಿಗೆ ಪೂರಕವಾಗಿದೆ ಎಂದು ಎಸ್.ಆರ್. ಸತೀಶ್ಚಂದ್ರ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ, ವ್ಯವಸ್ಥಾಪಕ ನಿರ್ದೇಶಕ (ಪ್ರಭಾರ) ಎಚ್.ಎಂ. ಕೃಷ್ಣ ಕುಮಾರ್, ಕಿಶೋರ್ ಕೊಡ್ಗಿ, ರೇಷ್ಮಾ ಮಲ್ಯ ಮೊದಲಾದವರು ಉಪಸ್ಥಿತರಿದ್ದರು.

 

 

                       

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 

 Click this button or press Ctrl+G to toggle between Kannada and English