- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ರಾಜ್ಯದಲ್ಲಿದ್ದ ರೌಡಿಸಂ ರಾಜಕಾರಣ ಕೊನೆಗೊಳಿಸಲು ಬಿಜೆಪಿಗೆ ಬಂದೆವು, ಆದರೆ ಕಡೆಗಣಿಸಿದರು : ಎಚ್.ವಿಶ್ವನಾಥ್

HVishwanath [1]ಬೆಂಗಳೂರು: ನನಗೂ ಪರಿಷತ್ ಚುನಾವಣೆಗೆ ಟಿಕೆಟ್ ನೀಡಿದ್ದರೆ ಮಂತ್ರಿ ಆಗುತ್ತಿದ್ದೆಆದರೆ ಕಡೆಗಣಿಸಿದರು  ನಮ್ಮಿಂದಲೇ ಸರ್ಕಾರ ಬಂದರೂ ನಮ್ಮ ಜೊತೆ ನಿಲ್ಲಲಿಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ  ಎಚ್.ವಿಶ್ವನಾಥ್ ಅಸಮಧಾನ ಹೊರ ಹಾಕಿದ್ದಾರೆ.

ಹೈ ಕೋರ್ಟ್ ತೀರ್ಪಿನ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿದ್ದ ರೌಡಿಸಂ ರಾಜಕಾರಣ, ಕುಟುಂಬ ರಾಜಕಾರಣ ಕೊನೆಗೊಳಿಸಲು ಬಿಜೆಪಿಗೆ ಬಂದೆವು. ಕ್ಷಿಪ್ರ ಕ್ರಾಂತಿ ನಡೆದು ಬಿಜೆಪಿ ಸರ್ಕಾರ ಬಂತು. ನಾವು ಮಂತ್ರಿ ಆಗಬೇಕು ಎಂದು ಬಯಸಿ ಸರ್ಕಾರ ಬೀಳಿಸಲಿಲ್ಲ. ಕೆಲವರು ಅನಾವಶ್ಯಕವಾಗಿ ಮಾತನಾಡುತ್ತಿದ್ದಾರೆ ಎಂದರು.

ನಮ್ಮಿಂದ ಸರ್ಕಾರ ಬಂದರೂ, ಕಾನೂನಿನ ವಿಚಾರದಲ್ಲಿ ಯಾರೂ ಸಹಾಯ ಮಾಡಲಿಲ್ಲ. ವಿಧಾನ ಪರಿಷತ್ ಚುನಾವಣೆ ವೇಳೆ ಅಭ್ಯರ್ಥಿಗಳ ಪಟ್ಟಿಯಿಂದ ನನ್ನ ಹೆಸರು ತೆಗೆದರು. ನನ್ನ ಅನುಭವ ಬಳಸಿಕೊಳ್ಳಬಹುದಿತ್ತು. ಆದರೆ ಕಡೆಗಣಿಸಿದರು, ಎಲ್ಲವನ್ನೂ ನಾನು ಎದುರಿಸುತ್ತೇನೆ. ನನಗೂ ಪರಿಷತ್ ಚುನಾವಣೆಗೆ ಟಿಕೆಟ್ ನೀಡಿದ್ದರೆ ಮಂತ್ರಿ ಆಗುತ್ತಿದ್ದೆ ಎಂದು ತಿಳಿಸಿದರು.

ಪರಿಷತ್ ಚುನಾವಣೆ ವೇಳೆ ನನ್ನ ಹೆಸರು ಯಾಕೆ ತೆಗೆದರು ಅಂತ ಗೊತ್ತಿಲ್ಲ. ನನ್ನ ಬಗ್ಗೆ ಎಜಿಗೆ ಅನಾದರ ಯಾಕೆ, ಅಡ್ವೊಕೇಟ್ ಜನರಲ್ ನನ್ನ ಜೊತೆ ಮಾತಾಡಲಿಲ್ಲ. ಸರಿಯಾಗಿ ಕೆಲಸ ಮಾಡಲಿಲ್ಲ. ನಾಮನಿರ್ದೇಶನದ ಬಗ್ಗೆ ಅವರು ಸ್ಪಷ್ಟವಾಗಿ ಹೇಳಲಿಲ್ಲ ಎಂದು ಎಜಿ ಮೇಲೆ ಸಹ ವಿಶ್ವನಾಥ್ ಆರೋಪ ಮಾಡಿದ್ದಾರೆ. ಬಿಜೆಪಿ ಕೋರ್ ಕಮಿಟಿಗೆ ಜೂನ್ ನಲ್ಲಿ ಪರಿಷತ್ ಗೆ ನನ್ನ ಹೆಸರೂ ಸೇರಿಸಿ ನಾಲ್ವರ ಹೆಸರು ಕಳುಹಿಸಲಾಗಿತ್ತು. ಅಲ್ಲಿಂದ ಪಟ್ಟಿ ಬರುವಾಗ ನನ್ನ ಹೆಸರು ಇರಲಿಲ್ಲ. ದೆಹಲಿಯಲ್ಲಿ ನನ್ನ ಹೆಸರು ತೆಗೆಸಿದ್ದು ಯಾಕೆ ಎಂದು ಬಿಜೆಪಿ ನಾಯಕರಲ್ಲಿ ಕೇಳಿದೆ. ನಿಮ್ಮನ್ನು ನಾಮನಿರ್ದೇಶನ ಮಾಡುತ್ತೇವೆ ಎಂದರು.

ಇಂದು ಸಿಎಂ ಜೊತೆ ಮಾತನಾಡುತ್ತೇನೆ. ನನ್ನ ಬಗ್ಗೆ ಕಾಳಜಿ ತೋರಿ ಮಾತನಾಡಿದವರಿಗೆ ಧನ್ಯವಾದಗಳು. ನನಗೆ ತೀರ್ಪಿನ ಪ್ರತಿ ಸಿಕ್ಕ ಮೇಲೆ ವಕೀಲರ ಜೊತೆ ಚರ್ಚೆ ಮಾಡುತ್ತೇನೆ. ಬಳಿಕ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸುತ್ತೇನೆ ಎಂದರು.

ನಿನ್ನೆ ಹೈಕೋರ್ಟ್ ನಲ್ಲಿ ಸಚಿವ ಸ್ಥಾನದ ಅನರ್ಹತೆ ಬಗ್ಗೆ ತೀರ್ಪು ಬಂದಿದೆ. ನೆಲದ ಕಾನೂನನ್ನು, ನ್ಯಾಯಾಲಯದ ತೀರ್ಪನ್ನು ಸ್ವಾಗತಿಸುತ್ತೇವೆ. ತೀರ್ಪನ್ನು ಗೌರವದಿಂದ ಕಾಣ್ತೇನೆ. ಮುಂದೆ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸುತ್ತೇನೆ. ರಾಜಕಾರಣವನ್ನು ಲಾಭ, ನಷ್ಟ, ಸೋಲು, ವ್ಯವಹಾರವಾಗಿ ತಗೊಂಡಿಲ್ಲ. ರಾಜಕೀಯವನ್ನು ಸಾಂಸ್ಕ್ರತಿಕ ಚಟುವಟಿಕೆಯಾಗಿ ತೆಗೆದುಕೊಂಡಿದ್ದೇನೆ. ಏನೋ ದೊಡ್ಡ ದುರಂತ ಆಗಿದೆ ಎಂದು ಭಾವಿಸಿಲ್ಲ. ವಿಶ್ವನಾಥ್ ಗೆ ಏನೂ ಆಗಿಲ್ಲ ಎಂದು ತಿಳಿಸಿದರು.