ಕಾಸರಗೋಡು : ಕರ್ನಾಟಕ ನೋಂದಣಿಯ ಬೋಟ್ ಕೇರಳ ಸರಹದ್ದಿನ ಮಂಜೇಶ್ವರ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಕ್ಕೆ ಕೇರಳ ಪೊಲೀಸರು ಬೋಟನ್ನು ವಶಪಡಿಸಿದ್ದರು ಆದರೆ ಮೀನುಗಾರರ ತಂಡ ಇಬ್ಬರು ಕೇರಳ ಪೊಲೀಸರನ್ನು ಮಂಗಳೂರು ಬಂದರಿನಲ್ಲಿ ಇಳಿಸಿದ ಘಟನೆ ಸೋಮವಾರ ನಡೆದಿದೆ.
ಕರಾವಳಿ ಪೊಲೀಸ್ ಠಾಣೆಯ ಸಬ್‌ಇನ್‌ಸ್ಪೆಕ್ಟರ್ ಕೆ.ವಿ. ರಾಜೀವ್ ಕುಮಾರ್ ನೇತೃತ್ವದ ತಂಡವು ಸೋಮವಾರ ಕುಂಬಳೆ ಶಿರಿಯದಲ್ಲಿ ತಪಾಸಣೆ ನಡೆಸುತ್ತಿದ್ದ ಸಂದರ್ಭ ಮಂಜೇಶ್ವರ ಸಮುದ್ರದಲ್ಲಿ ಕರ್ನಾಟಕ ನೋಂದಣಿಯ ಬೋಟ್ ಕಂಡುಬಂದಿದೆ. ಈ ವೇಳೆ ಅದರ ದಾಖಲೆ ಗಳನ್ನು ಪರಿಶೀಲಿಸಿದಾಗ ಕೆಲ ಸಂಶಯ ಉಂಟಾದ ಹಿನ್ನೆಲೆಯಲ್ಲಿ ಪೊಲೀಸರು ಬೋಟ್‌ನ್ನು ವಶಕ್ಕೆ ಪಡೆದುಕೊಂಡಿದ್ದರು.
ಬೋಟ್‌ನ್ನು ಮಂಜೇಶ್ವರ ಬಂದರಿಗೆ ತಲುಪಿಸಲು ಸೂಚಿಸಿದ ಎಸ್ಸೈ, ಈ ಬೋಟ್‌ಗೆ ರಘು ಮತ್ತು ಸುಧೀಶ್ ಎಂಬ ಪೊಲೀಸ್ ಸಿಬ್ಬಂದಿಯನ್ನು ಹತ್ತಿಸಿದರು. ಬಳಿಕ ಸಬ್‌ಇನ್‌ಸ್ಪೆಕ್ಟರ್ ರಾಜೀವ್ ಕುಮಾರ್ ಹಾಗೂ ಇತರ ಪೊಲೀಸರು ಅಲ್ಲಿಂದ ಮಂಜೇಶ್ವರ ಬಂದರಿಗೆ ಆಗಮಿಸಿದರು. ಅವರು ಬಂದರ್ ತಲುಪಿ ಗಂಟೆಗಳೇ ಕಳೆದರೂ ವಶಕ್ಕೆ ಪಡೆದ ಬೋಟ್ ಬರಲೇ ಇಲ್ಲ. ಈ ಹಿನ್ನೆಲೆಯಲ್ಲಿ ಬೋಟ್ ನಲ್ಲಿದ್ದ ಪೊಲೀಸರನ್ನು ಸಂಪರ್ಕಿಸಿದಾಗ ಬೋಟ್ ಮಂಜೇಶ್ವರ ಬಂದರ್‌ಗೆ ಬಾರದೆ, ವಿರುದ್ಧ ದಿಕ್ಕಿಗೆ ವೇಗವಾಗಿ ತೆರಳುತ್ತಿರುವ ಮಾಹಿತಿ ಲಭಿಸಿತು. ಕೂಡಲೇ ಕಾಸರಗೋಡಿನ ಹಿರಿಯ ಪೊಲೀಸ್ ಅಧಿಕಾರಿಗಳು ಮಂಗಳೂರು ಪೊಲೀಸರನ್ನು ಸಂಪರ್ಕಿಸಿದರು. ಅಷ್ಟರಲ್ಲಿ ಬೋಟ್ ಮಂಗಳೂರು ಬಂದರು ತಲುಪಿದ್ದು, ಇಬ್ಬರು ಪೊಲೀಸರು ಸುರಕ್ಷಿತರಾಗಿದ್ದಾರೆ ಎಂದು ತಿಳಿದು ಬಂದಿತು ಎಂದು ಪೊಲೀಸರು ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ.
ಕರ್ನಾಟಕ ನೋಂದಣಿಯ ಬೋಟ್‌ನಲ್ಲಿ ಅಗತ್ಯ ದಾಖಲೆ ಇಲ್ಲದಿದ್ದ ಕಾರಣ ಅದನ್ನು ವಶಕ್ಕೆ ಪಡೆಯಲಾಗಿತ್ತು ಎಂದು ಕರಾವಳಿ ಪೊಲೀಸರು ತಿಳಿಸಿದ್ದಾರೆ. ಈ ನಡುವೆ ಪೊಲೀಸರನ್ನು ಹೊತ್ತೊಯ್ದ ಆರೋಪದಲ್ಲಿ ಬೋಟ್‌ನಲ್ಲಿದ್ದವರ ಮೇಲೆ ಕೇಸು ದಾಖಲಾಗಿದೆ ಎಂದು ತಿಳಿದು ಬಂದಿದೆ. ಬೋಟ್‌ನಲ್ಲಿ 12 ಮಂದಿ ಇದ್ದರೆನ್ನಲಾಗಿದೆ.
Click this button or press Ctrl+G to toggle between Kannada and English