ಮಂಗಳೂರು ಧರ್ಮಪ್ರಾಂತ್ಯ ಧರ್ಮಾಧ್ಯಕ್ಷ ವಂದನೀಯ ಡಾ| ಪೀಟರ್ ಪಾವ್ಲ್ ಸಲ್ಡಾನ್ಹ ಕ್ರಿಸ್ಮಸ್ ಸಂದೇಶ

2:43 PM, Wednesday, December 23rd, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Bhisopಮಂಗಳೂರು   : ಕ್ರಿಸ್ಮಸ್ ಒಂದು ಮಹತ್ತರ ಸತ್ಯವನ್ನು ನಮ್ಮ ಮುಂದೆ ತೆರೆದಿಡುತ್ತದೆ. ದೇವರು ಮಾನವ ಮಗುವಾಗಲು ಇಚ್ಛಿಸಿದ್ದಾರೆ. ಇದು ಬೈಬಲ್‌ನಲ್ಲಿ ಯೆಶಾಯಾ ಪ್ರವಾದಿ ಮುಂದಾಗಿ ತಿಳಿಸಿದಂತೆ ನೆರವೇರಿದೆ: “ಇಗೊ ಒಂದು ಮಗುವು ನಮಗೆ ಜನಿಸಿದೆ, ಒಬ್ಬ ವರಪುತ್ರನನ್ನು ನಮಗೆ ಕೊಡಲಾಗಿದೆ (ಯೆಶಾಚಿಯಾ  ೯:೬). ಮಗುವಿನ ಇರುವಿಕೆ ನಮ್ಮನ್ನು ತನ್ನತ್ತ ಸೆಳೆಯುತ್ತದೆ. ಮಗು ನಮ್ಮತ್ತ ಬರಲಿಚ್ಚಿಸುವಾಗ, ನಮ್ಮೊಡನೆ ಆಟವಾಡುವಾಗ ನಾವು ಹರ್ಷಭರಿತರಾಗುತ್ತೇವೆ. ದೇವರೆಂದರೆ ಒಂದು ವಿಚಿತ್ರ ವಿಸ್ಮಯ, ಭಯಂಕರ ವಾಸ್ತವ ಎಂಬುದಾಗಿ ಹೇಳಲಾಗುತ್ತಿತ್ತು. ಆದರೆ ಈಗ ಯೇಸುವು ದೇವರು ಒಬ್ಬ ಅಕ್ಕರೆಯ ಮಗುವೂ ಹೌದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಕ್ರಿಸ್ಮಸ್ ನಾವು ವೃದ್ಧಿಹೊಂದಲು ನಮ್ಮನ್ನು ಕರೆಯುತ್ತದೆ. ನಮ್ಮ ಸಂಕುಚಿತ ದೃಷಿಕೋನವನ್ನು ತ್ಯಜಿಸಲು ಮತ್ತು ನಮ್ಮ ದಿಗಂತವನ್ನು ವಿಸ್ತಾರಗೊಳಿಸಲು, ಮಾನವ ಕುಲವನ್ನು ನಮ್ಮ ಸಹೋದರರು ಮತ್ತು ಸಹೋದರಿಯರೆಂದು ಆಲಿಂಗಿಸಲು ಯೇಸುವು ನಮಗೆ ಆಹ್ವಾನವನ್ನೀಯುತ್ತಿದ್ದಾರೆ. ಕಷ್ಟದಲ್ಲಿರುವವರು, ಬಡವರು, ತಿರಸ್ಕೃತರು ಇವರನ್ನೆಲ್ಲಾ ಸ್ವಾಗತಿಸಲು, ರಕ್ಷಿಸಲು, ಬೆಳೆಸಲು ಹಾಗೂ ನಮ್ಮ ಹೃದಯಗಳನ್ನು ಅವರಿಗಾಗಿ ತೆರೆಯಲು ಯೇಸು ನಮಗೆ ಪಂಥಾಹ್ವಾನವನ್ನೀಯುತ್ತಿದ್ದಾರೆ. ಪ್ರತಿಯೊಬ್ಬರನ್ನು ನನ್ನ ಸಹೋದರ/ಸಹೋದರಿ ಎಂದು ಪರಿಗಣಿಸಲು ನಾನು ಸಿದ್ದನಿದ್ದೇನೊ?

ಕ್ರಿಸ್ಮಸ್ ನಮಗೆ ಎರಡು ಅತಿ ಸೂಕ್ಷ್ಮ ವಿಷಯಗಳನ್ನು ಬೆಳೆಸಲು ಆಹ್ವಾನಿಸುತ್ತಿದೆ: ಇತರರಿಗೆ ಸಂಪರ್ಕಿಸುವ ಸಂಸ್ಕೃತಿ ಮತ್ತು ಸಂವಾದದ ಸಂಸ್ಕೃತಿ. ವಿವಿಧ ಧಾರ್ಮಿಕ ವಿಶ್ವಾಸಿಗಳು ಮತ್ತು ಪಂಗಡಗಳ ಜನರೊಡನೆ ಗೆಳೆತನ, ಶಾಂತಿ, ಸಮಾಧಾನ ಹೆಚ್ಚಿಸುವುದು ಮತ್ತು ಸತ್ಯ ಹಾಗೂ ಪ್ರೀತಿಯ ಮನೋಭಾವದಲ್ಲಿ ನಮ್ಮ ಆಧ್ಯಾತ್ಮಿಕ ಮತ್ತು ನೈತಿಕ ಅನುಭವಗಳನ್ನು ಹಂಚಿಕೊಳ್ಳುವುದು ಈ ಭೇಟಿ ಮತ್ತು ಸಂವಾದದ ಉದ್ದೇಶ. ನಾವು ನ್ಯಾಯಕ್ಕಾಗಿ ಹಾತೊರೆಯುತ್ತೇವೆ ಮತ್ತು ಅನ್ಯಾಯವಾದಾಗ ನಮಗೆ ತುಂಬಾ ದುಃಖವಾಗುತ್ತದೆ. ಇಂದು ರೈತರು, ಮಾನವ ಹಕ್ಕುಗಳ ಹೋರಾಟಗಾರರು ನ್ಯಾಯಕ್ಕಾಗಿ ಎದ್ದು ನಿಲ್ಲಲು ನಮ್ಮನ್ನು ಕರೆಯುತ್ತಿದ್ದಾರೆ. ಅವರನ್ನು ಗಾಢವಾಗಿ ಆಲಿಸೋಣ. ಇತರರೊಡನೆ ಸೌಹಾರ್ಧದ ಮಾತುಕತೆಯ ಮೂಲಕ ಸಮಸ್ಸೆಗಳನ್ನು ಬಗೆಹರಿಸಲು ಸಾಧ್ಯವಿದೆ. ಸಹೋದರತೆ ಮತ್ತು ಸಾಮಾಜಿಕ ಮಿತೃತ್ವವನ್ನು ಬೆಳೆಸಲು ಸಂಪರ್ಕದ ಸಂಸ್ಕೃತಿ ಮತ್ತು ಸಂವಾದದ ಸಂಸ್ಕೃತಿಯನ್ನು ಪೋಷಿಸೋಣ. ನಾವೆಲ್ಲಾ ದೇವರ ಒಂದೇ ಕುಟುಂಬದ ಸದಸ್ಯರು.

ಈ ವರ್ಷ ಕ್ರಿಸ್ಮಸ್ ಆಚರಣೆ ತುಂಬಾ ಸರಳವಾಗಿದೆ. ನಾವೇನು ಉಳಿಸುತ್ತೇವೊ ಅದನ್ನು ಬಡವರೊಡನೆ ಹಂಚಿಕೊಳ್ಳಬೇಕು. ಚಿಂದಿ ಬಟ್ಟೆಯಲ್ಲಿ ಸುತ್ತಿದ್ದ ಹಾಗೂ ಗೋದಲಿಯಲ್ಲಿ ಮಲಗಿದ್ದ ಯೇಸು, ಆಹಾರವಿಲ್ಲದೆ ಹಸಿದ ಹೊಟ್ಟೆಯಲ್ಲಿ ನಿದ್ದೆಗೆ ಜಾರುವ ಬಡವರ ಕಷ್ಟಗಳನ್ನು ಅನುಭವಿಸಿದವರು, ವಸತಿ ಇಲ್ಲದೆ ಬೀದಿ ಬದಿಗಳಲ್ಲಿ ಮಲಗುವ ನಿರಾಶ್ರಿತರ ಆತಂಕಗಳನ್ನು ಅರಿತವರು, ಉದ್ಯೋಗ ಕಳೆದುದರಿಂದಾಗಿ ತಮ್ಮ ಕುಟುಂಬಗಳನ್ನು ಸಾಕಲು ಕಷ್ಟಪಡುತ್ತಿರುವ ನಿರುದ್ಯೋಗಿಗಳ ಬವಣೆಗಳನ್ನು ಬಲ್ಲವರು, ಕೋವಿಡ್ ಮತ್ತು ಇತರ ರೋಗಗಳು ತಗುಲಿ ತಮ್ಮ ಔಷಧಕ್ಕಾಗಿ ಹಣ ಇಲ್ಲದವರ ಪಾಡನ್ನು ತಿಳಿದವರು, ತಮ್ಮ ಮಕ್ಕಳಿಗೆ ಶಿಕ್ಷಣವನ್ನು ಕೊಡಲು ಕಷ್ಟಪಡುತ್ತಿರುವ ಹೆತ್ತವರ ದುಃಖದುಗುಡಗಳನ್ನು ಅರಿತವರು ಆಗಿದ್ದಾರೆ. ಇಂತಹ ಸಮಾಜದಲ್ಲಿರುವ ಅಶಕ್ತರೊಡನೆ ನಾವೂ ಬೆರೆಯೋಣ. ಅದು ನಮಗೆ ಅಪಾರ ಸಂತೋಷವನ್ನೀಯಲಿ.

ಮಂಗಳೂರು ಧರ್ಮಪ್ರಾಂತ್ಯವು ಬಡವರಿಗೆ ನೆರವಾಗುವ ನಿಮಿತ್ತ ಕೋವಿಡ್-19 ಲೊಕ್‌ಡೌನ್ ಸಂದರ್ಭದಲ್ಲಿ ಸುಮಾರು 1.5 ಕೋಟಿ ರುಪಾಯಿಗಳಷ್ಟರ ನಾನಾ ರೀತಿಯ ಸಹಾಯವನ್ನು ಮಾಡಿದೆ. ಸಾವಿರಾರು ವಲಸೆ ಕಾರ್ಮಿಕರಿಗೆ ವಸತಿ ಉಪಹಾರವನ್ನು ಒದಗಿಸಿದೆ. ಈ ಹೊಸ ವರ್ಷದಲ್ಲಿ ನಾವು ಬಡವರ ಮನೆಗಳ ದುರಸ್ತಿ ಹಾಗೂ ಇತರ ಸೌಕರ್ಯಗಳ ಅಭಿವೃದ್ದಿಯತ್ತ ಪ್ರಯತ್ನಿಸಿ ಅವರ ಉದ್ದಾರಕ್ಕಾಗಿ ಶ್ರಮಿಸುವೆವು. ಅಶಕರನ್ನು ಸಬಲರನ್ನಾಗಿಸಲು ನಾವೆಲ್ಲಾ ಒಂದಾಗೋಣ  ಎಂದು  ಮಂಗಳೂರು ಧರ್ಮಪ್ರಾಂತ್ಯ ಧರ್ಮಾಧ್ಯಕ್ಷ ವಂದನೀಯ ಡಾ| ಪೀಟರ್ ಪಾವ್ಲ್ ಸಲ್ಡಾನ್ಹ ಕ್ರಿಸ್ಮಸ್ ಸಂದೇಶ ದಲ್ಲಿ ಹೇಳಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English