- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಜನವರಿ 1 ರಿಂದ ಎಸ್‌ಎಸ್‌ಎಲ್ಸಿ, ಪಿಯು ಕಾಲೇಜುಗಳು ಹಾಗೂ ವಿದ್ಯಾಗಮ ತರಗತಿಗಳು ಆರಂಭ

Suresh Kumar [1]ಬೆಂಗಳೂರು: ಕೊರೋನಾ ಹಿನ್ನಲೆಯಲ್ಲಿ ಮುಚ್ಚುಗಡೆಯಾಗಿದ್ದ ಶಾಲೆಗಳು ಜನವರಿ 1 ರಿಂದ ಆರಂಭಗೊಳ್ಳಲಿದೆ.  ಶಾಲೆ ಆರಂಭದ ನಿರ್ಧಾರದಲ್ಲಿ ಬದಲಾವಣೆ ಇಲ್ಲ. ಮುಂದಿನ ದಿನಗಳಲ್ಲಿ ಅಗತ್ಯವಿದ್ದರೆ ಸಭೆ ನಡೆಸಿ ಪರಿಶೀಲನೆ ನಡೆಸಲಾಗುವುದು ಎಂದು ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಜನವರಿ 1 ರಿಂದಲೇ ಸಮವಸ್ತ್ರ ಮತ್ತು ಶೂ ವಿತರಣೆ ಮಾಡಲಾಗುವುದು ಹಾಗೂ ಈ ವರ್ಷ 8ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಮಾಡಲಾಗುವುದಿಲ್ಲ. ಶಾಲೆ ಆರಂಭಕ್ಕೆ ಮೂರು ದಿನ ಮೊದಲು ಸಿಬ್ಬಂದಿ, ಶಿಕ್ಷಕರಿಗೆ ಕೋವಿಡ್ ಪರೀಕ್ಷೆ ನೆಗೆಟಿವ್ ಕಡ್ಡಾಯವಾಗಿರುತ್ತದೆ. 10 ನೇ ತರಗತಿಗೆ ಹೊಸ ವೇಳಾಪಟ್ಟಿ ಪ್ರಕಟಿಸಲಾಗಿದ್ದು, ವಾರದಲ್ಲಿ 6 ದಿನ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 30 ರವರೆಗೆ ತಲಾ 45 ನಿಮಿಷಗಳ ಮೂರು ಪಿರಿಯಡ್ ಗಳಲ್ಲಿ ಬೋಧನೆ ಮಾಡಲಾಗುತ್ತದೆ. ವಿದ್ಯಾರ್ಥಿ ಸಂಖ್ಯೆಗೆ ಅನುಗುಣವಾಗಿ ತಂಡಗಳನ್ನು ರಚಿಸಿ ಪಾಠ ಮಾಡಲಾಗುವುದು ಎಂದು ಹೇಳಿದ್ದಾರೆ.

ಶಾಲೆ ಪುನರಾರಂಭಗೊಂಡ ನಂತರ ಮಿಡ್ ಡೇ ಮೀಲ್ ಬದಲಾಗಿ ಸಾಮಾಗ್ರಿಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗುವುದು ಹಾಗೂ ತರಗತಿಗಳನ್ನು ದಿನಕ್ಕೆ ೩ ತಾಸು ನಡೆಸಲಾಗುವುದು,  ಪ್ರೌಢಶಾಲೆಗಳಲ್ಲಿ 8, 9ನೇ ತರಗತಿಗಳಿಗೆ ವಾರದ ಐದು ದಿನ ಮಧ್ಯಾಹ್ನ 2 ಗಂಟೆಯಿಂದ 4.30 ರವರೆಗೆ ಮೂರು ತರಗತಿಗಳು ನಡೆಯಲಿವೆ. ಪ್ರಾಥಮಿಕ ಶಾಲೆಯಲ್ಲಿ 6 ರಿಂದ 8ನೇ ತರಗತಿ ಮಕ್ಕಳಿಗೆ ವಾರಕ್ಕೆ 6 ದಿನ ಬೆಳಗ್ಗೆ 10 ಗಂಟೆಯಿಂದ 12.30 ರವರೆಗೆ 3 ತರಗತಿಗಳು ನಡೆಯಲಿವೆ. ವಿದ್ಯಾರ್ಥಿಗಳು ಹೆಚ್ಚಾದಲ್ಲಿ 15 -20 ಮಕ್ಕಳ ತಂಡ ರಚಿಸಿ ವಿದ್ಯಾಗಮ ನಡೆಸಲು ಸೂಚನೆ ನೀಡಲಾಗಿದೆ.

ಜನವರಿ 1 ರಿಂದ ಎಸ್‌ಎಸ್‌ಎಲ್ಸಿ ಮತ್ತು ಪಿಯು ಕಾಲೇಜುಗಳು ಹಾಗೂ ವಿದ್ಯಾಗಮ ತರಗತಿಗಳು ಆರಂಭವಾಗಲಿದ್ದು, ಯಾವುದೇ ಬದಲಾವಣೆ ಇರುವುದಿಲ್ಲ. ಅಗತ್ಯವಿದ್ದರೆ ಪರಿಶೀಲನೆ ನಡೆಸಲಾಗುವುದು ಎಂದು ಹೇಳಲಾಗಿದೆ.