- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕೊಚ್ಚಿ – ಮಂಗಳೂರು ನೈಸರ್ಗಿಕ ಅನಿಲ ಕೊಳವೆಮಾರ್ಗ ದೇಶಕ್ಕೆ ಸಮರ್ಪಿಸಿದ ಪ್ರಧಾನಿ

Narendra Modi [1]ನವದೆಹಲಿ : ಕೊಚ್ಚಿ ಮಂಗಳೂರು ನೈಸರ್ಗಿಕ ಅನಿಲ ಕೊಳವೆ ಮಾರ್ಗವನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಂಗಳವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು.

ಒಂದು ದೇಶ ಒಂದು ಅನಿಲ ಜಾಲ ರೂಪಿಸುವುದರತ್ತ ಈ ಸಮಾರಂಭವು ಮಹತ್ವದ ಮೈಲುಗಲ್ಲು ಆಗಿತ್ತು. ಕರ್ನಾಟಕ, ಕೇರಳದ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳು, ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಕರ್ನಾಟಕ ಮತ್ತು ಕೇರಳವನ್ನು ನೈಸರ್ಗಿಕ ಅನಿಲದ ಪೈಪ್‌ಲೈನ್ ಮೂಲಕ ಜೋಡಿಸಿರುವುದರಿಂದ ಎರಡೂ ರಾಜ್ಯಗಳ ಜನರ ಬದುಕಿನಲ್ಲಿ ಇದೊಂದು ಮಹತ್ವದ ಮೈಲುಗಲ್ಲು ಆಗಿದೆ. ಎರಡೂ ರಾಜ್ಯಗಳ ಆರ್ಥಿಕ ಪ್ರಗತಿ ಮೇಲೆ ಈ ಪೈಪ್‌ಲೈನ್ ಸಕಾರಾತ್ಮಕ ಪರಿಣಾಮ ಬೀರಲಿದೆ. ಭಾರತವು ಸ್ವಾವಲಂಬನೆ ಸಾಧಿಸಲು ನೈಸರ್ಗಿಕ ಅನಿಲ ಆಧರಿತ ಆರ್ಥಿಕತೆಯ ತ್ವರಿತ ಮತ್ತು ವ್ಯಾಪಕ ವಿಸ್ತರಣೆಯು ತುಂಬ ಅಗತ್ಯವಾಗಿದೆ. ಇದೇ ಕಾರಣಕ್ಕೆ ಕೇಂದ್ರ ಸರ್ಕಾರವು ಒಂದು ದೇಶ ಒಂದು ಅನಿಲ ಜಾಲ ಕಾರ್ಯಗತಗೊಳಿಸಲು ಹೆಚ್ಚು ಒತ್ತು ನೀಡುತ್ತಿದೆ ಎಂದು ಹೇಳಿದರು.

ಈ ಕೊಳವೆ ಮಾರ್ಗದ ಪ್ರಯೋಜನಗಳನ್ನು ಪಟ್ಟಿ ಮಾಡಿದ ಪ್ರಧಾನಿ, ಎರಡೂ ರಾಜ್ಯಗಳ ಜನರ ಸುಲಲಿತ ಜೀವನವನ್ನು ಇದು ಸುಧಾರಿಸಲಿದೆ. ಎರಡೂ ರಾಜ್ಯಗಳ ಬಡವರು, ಮಧ್ಯಮ ವರ್ಗದವರು ಮತ್ತು ಉದ್ಯಮಿಗಳ ಮೇಲಿನ ಹೊರೆ ತಗ್ಗಿಸಲಿದೆ. ದೇಶದ ಹಲವಾರು ನಗರಗಳಲ್ಲಿನ ನೈಸರ್ಗಿಕ ಅನಿಲ ವಿತರಣಾ ವ್ಯವಸ್ಥೆ ಬಲಪಡಿಸಲು ಮತ್ತು ಸಾಂದ್ರೀಕೃತ ನೈಸರ್ಗಿಕ ಅನಿಲ (ಸಿಎನ್‌ಜಿ) ಆಧರಿಸಿದ ಸಾರಿಗೆ ವ್ಯವಸ್ಥೆ ಅಳವಡಿಸಲು ಕೂಡ ಇದು ಆಧಾರವಾಗಿರಲಿದೆ. ಮಂಗಳೂರಿನ ತೈಲಾಗಾರಕ್ಕೆ ಈ ಪೈಪ್‌ಲೈನ್ ಶುದ್ಧ ಇಂಧನ ಪೂರೈಸಲಿದೆ. ಎರಡೂ ರಾಜ್ಯಗಳಲ್ಲಿನ ಪರಿಸರ ಮಾಲಿನ್ಯ iಟ್ಟವನ್ನು ತಗ್ಗಿಸಲೂ ಇದು ಪ್ರಮುಖ ಪಾತ್ರ ನಿರ್ವಹಿಸಲಿದೆ. ಪರಿಸರ ಮಾಲಿನ್ಯ ತಗ್ಗಲಿರುವುದು, ಲಕ್ಷಾಂತರ ಮರಗಿಡಗಳನ್ನು ಬೆಳೆಸುವುದರಿಂದ ಆಗುವಂತಹ ಪರಿಸರ ಪ್ರಯೋಜನಗಳನ್ನು ಒದಗಿಸಿ ಪರಿಸರದ ಮೇಲೆ ನೇರ ಪರಿಣಾಮ ಬೀರಲಿದೆ. ಇದರಿಂದ ಜನರ ಆರೋಗ್ಯ ಮಟ್ಟ ಸುಧಾರಣೆಯಾಗಲಿದೆ. ಆರೋಗ್ಯಕ್ಕೆ ಸಂಬಂಧಿಸಿದ ವೆಚ್ಚಗಳನ್ನು ತಗ್ಗಿಸಲೂ ನೆರವಾಗಲಿದೆ. ಕಡಿಮೆ ಪ್ರಮಾಣದ ಮಾಲಿನ್ಯ ಮತ್ತು ಶುದ್ಧ ಗಾಳಿಯು ನಗರಗಳಿಗೆ ಹೆಚ್ಚೆಚ್ಚು ಪ್ರವಾಸಿಗರನ್ನು ಸೆಳೆಯಲಿವೆ. ಈ ಪೈಪ್‌ಲೈನ್ ನಿರ್ಮಾಣ ಕಾಮಗಾರಿಯು ೧೨ ಲಕ್ಷ ಮಾನವ ದಿನಗಳ ಉದ್ಯೋಗ ಅವಕಾಶ ಕಲ್ಪಿಸಿದೆ. ಈ ಯೋಜನೆ ಕಾರ್ಯಗತಗೊಂಡ ನಂತರ ರಸಗೊಬ್ಬರ, ಪೆಟ್ರೊ ಕೆಮಿಕಲ್ಸ್ ಮತ್ತು ವಿದ್ಯುತ್ ಕ್ಷೇತ್ರಗಳಲ್ಲಿ ಉದ್ಯೋಗ ಅವಕಾಶಗಳು ಮತ್ತು ಸ್ವಯಂ ಉದ್ಯೋಗದ ಹೊಸ ವ್ಯವಸ್ಥೆ ರೂಪುಗೊಳ್ಳಲಿದೆ. ಸಾವಿರಾರು ಕೋಟಿ ರೂಪಾಯಿಗಳ ಮೊತ್ತದ ವಿದೇಶಿ ವಿನಿಮಯ ಉಳಿಸಲೂ ಈ ಯೋಜನೆಯು ದೇಶಕ್ಕೆ ನೆರವಾಗಿದೆ ಎಂದು ವಿವರಿಸಿದರು.

21ನೇ ಶತಮಾನದಲ್ಲಿ ಸಂಪರ್ಕ ಮತ್ತು ಶುದ್ಧ ಇಂಧನ ಬಳಕೆಗೆ ಹೆಚ್ಚು ಮಹತ್ವ ನೀಡುವ ದೇಶಗಳು ಹೊಸ ಎತ್ತರಕ್ಕೆ ತಲುಪಲಿವೆ ಎಂದು ವಿಶ್ವದ ಎಲ್ಲೆಡೆಯಲ್ಲಿನ ಪರಿಣತರು ಅಭಿಪ್ರಾಯಪಟ್ಟಿದ್ದಾರೆ. ಸಂಪರ್ಕ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ಸದ್ಯಕ್ಕೆ ದೇಶದಲ್ಲಿ ನಡೆಯುತ್ತಿರುವ ಕಾಮಗಾರಿಗಳು ಈ ಹಿಂದಿನ ದಶಕಗಳಲ್ಲಿ ಯಾವತ್ತೂ ಕಂಡಿರಲಿಲ್ಲ ಎಂದೂ ಪ್ರಧಾನಿ ನುಡಿದರು. 2014 ರ ಮುಂಚಿನ 27ವರ್ಷಗಳಲ್ಲಿ ಕೇವಲ 15 ಸಾವಿರ ಕಿಲೊಮೀಟರ್‌ಗಳಷ್ಟು ಉದ್ದದ ನೈಸರ್ಗಿಕ ಅನಿಲ ಕೊಳವೆ ಮಾರ್ಗ ನಿರ್ಮಿಸಲಾಗಿತ್ತು. ಆದರೆ, ಈಗ ದೇಶದಾದ್ಯಂತ 16 ಸಾವಿರ ಕಿಲೊಮೀಟರ್‌ಗಳಷ್ಟು ಉದ್ದದ ನೈಸರ್ಗಿಕ ಅನಿಲ ಪೈಪ್‌ಲೈನ್ ಅಳವಡಿಕೆ ಕಾಮಗಾರಿಗಳು ಜಾರಿಯಲ್ಲಿ ಇವೆ. ಈ ಕಾಮಗಾರಿಗಳು ಮುಂದಿನ 5 ರಿಂದ 6 ವರ್ಷಗಳಲ್ಲಿ ಪೂರ್ಣಗೊಳ್ಳಲಿವೆ ಎಂದು ನುಡಿದರು.

ಕೇಂದ್ರ ಸರ್ಕಾರವು ಸಿಎನ್‌ಜಿ ಇಂಧನ ಕೇಂದ್ರಗಳು, ಪಿಎನ್‌ಜಿ ಸಂಪರ್ಕಗಳು ಮತ್ತು ಎಲ್‌ಪಿಜಿ ಸಂಪರ್ಕಗಳ ಸಂಖ್ಯೆ ಹೆಚ್ಚಿಸುವಲ್ಲಿ ಗಮನಾರ್ಹ ಸಾಧನೆ ಮಾಡಿದೆ. ಇಂತಹ ಬೆಳವಣಿಗೆ ಈ ಹಿಂದೆ ಯಾವತ್ತೂ ಆಗಿರಲಿಲ್ಲ. ಈ ಸಂಪರ್ಕಗಳಲ್ಲಿನ ಹೆಚ್ಚಳದಿಂದಾಗಿ ಸೀಮೆಎಣ್ಣೆಯ ಕೊರತೆ ತಗ್ಗಿದೆ. ಅನೇಕ ಕೇಂದ್ರಾಡಳಿತ ಮತ್ತು ರಾಜ್ಯ ಸರ್ಕಾರಗಳು ಸೀಮೆಎಣ್ಣೆ ಮುಕ್ತವಾಗಿರುವುದಾಗಿ ಘೋಷಿಸಿಕೊಂಡಿವೆ ಎಂದು ಹೇಳಿದರು.

2014 ರಿಂದೀಚೆಗೆ ಕೇಂದ್ರ ಸರ್ಕಾರವು ತೈಲ ಮತ್ತು ನೈಸರ್ಗಿಕ ಅನಿಲ ಕ್ಷೇತ್ರಗಳಲ್ಲಿ ತೈಲ ನಿಕ್ಷೇಪಗಳ ಶೋಧ ಮತ್ತು ಉತ್ಪಾದನೆ, ಮಾರುಕಟ್ಟೆ ಹಾಗೂ ವಿತರಣೆಯಲ್ಲಿ ಹಲವಾರು ಸುಧಾರಣಾ ಕ್ರಮಗಳನ್ನು ಜಾರಿಗೆ ತಂದಿದೆ ಎಂದರು.

ಒಂದು ದೇಶ ಒಂದು ಅನಿಲ ಜಾಲ ಸಾಧಿಸಲು ಮತ್ತು ನೈಸರ್ಗಿಕ ಅನಿಲವು ಪರಿಸರ ಸಂಬಂಧಿ ಹಲವಾರು ಪ್ರಯೋಜನಗಳನ್ನು ಒಳಗೊಂಡಿರುವುದರಿಂದ ನೈಸರ್ಗಿಕ ಅನಿಲ ಆಧರಿತ ಆರ್ಥಿಕತೆಗೆ ಬದಲಾಗಲು ಕೇಂದ್ರ ಸರ್ಕಾರ ಕಾರ್ಯಕ್ರಮ ಹಾಕಿಕೊಂಡಿದೆ ಎಂದು ಪ್ರಧಾನಿ ಪ್ರಕಟಿಸಿದರು.

ದೇಶದ ಇಂಧನ ಬಳಕೆಯಲ್ಲಿ ನೈಸರ್ಗಿಕ ಅನಿಲದ ಪಾಲನ್ನು ಸದ್ಯದ ಶೇ 6 ರಿಂದ ಶೇ 15ಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರವು ಕಾರ್ಯಪ್ರವೃತ್ತವಾಗಿದೆ. ಭಾರತದ ಅನಿಲ ಪ್ರಾಧಿಕಾರದ ಗೇಲ್‌ನ ಕೊಚ್ಚಿ ಮಂಗಳೂರು ನೈಸರ್ಗಿಕ ಅನಿಲ ಕೊಳವೆ ಮಾರ್ಗವು, ಒಂದು ದೇಶ ಒಂದು ಅನಿಲ ಜಾಲ ನಿರ್ಮಾಣದತ್ತ ನಮ್ಮ ಪಯಣವಾಗಿದೆ. ಉತ್ತಮ ಭವಿಷ್ಯಕ್ಕೆ ಶುದ್ಧ ಇಂಧನ ಬಳಕೆಯು ಅತ್ಯಂತ ಮಹತ್ವದ್ದಾಗಿದೆ. ಈ ಕೊಳವೆ ಮಾರ್ಗವು ಶುದ್ಧ ಇಂಧನದ ಲಭ್ಯತೆಯನ್ನು ಗಮನಾರ್ಹವಾಗಿ ಸುಧಾರಿಸಲಿದೆ ಎಂದು ಪ್ರಧಾನಿ ನುಡಿದರು.

ದೇಶದ ಭವಿಷ್ಯದ ಇಂಧನ ಅಗತ್ಯಗಳನ್ನು ಈಡೇರಿಸಿಕೊಳ್ಳುವ ನಿಟ್ಟಿನಲ್ಲಿನ ಪ್ರಯತ್ನಗಳು ಮುಂದುವರೆದಿವೆ. ಈ ಗುರಿ ಸಾಧಿಸಲು ಒಂದೆಡೆ ನೈಸರ್ಗಿಕ ಅನಿಲ ಬಳಕೆಗೆ ಆದ್ಯತೆ ನೀಡಲಾಗುತ್ತಿದೆ. ಇನ್ನೊಂದೆಡೆ ಇಂಧನ ಸಂಪನ್ಮೂಲಗಳನ್ನು ವೈವಿಧ್ಯಮಯವಾಗಿ ಬಳಸಲಾಗುತ್ತಿದೆ. ಗುಜರಾತ್‌ನಲ್ಲಿ ಕಾರ್ಯಾರಂಭ ಮಾಡಲಿರುವ ಉದ್ದೇಶಿತ ವಿಶ್ವದ ಅತಿದೊಡ್ಡ ಪುನರ್ ಬಳಕೆ ಇಂಧನ ಘಟಕದ ನಿದರ್ಶನ ನೀಡಿದ ಪ್ರಧಾನಿ, ಜೈವಿಕ ಇಂಧನಗಳ ಬಳಕೆಗೆ ಒತ್ತು ನೀಡಿದರು.

ಭತ್ತ ಮತ್ತು ಕಬ್ಬಿನಿಂದ ಇಥೆನಾಲ್ ಪಡೆಯುವ ನಿಟ್ಟಿನಲ್ಲಿ ನಿರಂತರವಾಗಿ ಪ್ರಯತ್ನಿಸಲಾಗುತ್ತಿರುವುದನ್ನು ಅವರು ಸಭಿಕರ ಗಮನಕ್ಕೆ ತಂದರು. ಮುಂದಿನ 10 ವರ್ಷಗಳಲ್ಲಿ ಪೆಟ್ರೋಲ್‌ನಲ್ಲಿ ಇಥೆನಾಲ್ ಮಿಶ್ರಣ ಮಾಡುವ ಪ್ರಮಾಣವನ್ನು ಶೇ 20ರವರೆಗೆ ಹೆಚ್ಚಿಸಲು ಗುರಿ ನಿಗದಿಪಡಿಸಲಾಗಿದೆ. ದೇಶದ ಪ್ರತಿಯೊಬ್ಬ ಪ್ರಜೆಗೆ ಕೈಗೆಟುಕುವ, ಮಾಲಿನ್ಯ ಮುಕ್ತ ಇಂಧನ ಮತ್ತು ವಿದ್ಯುತ್ ಒದಗಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.

ಪ್ರಧಾನಿ ಅವರು ಎರಡು ಕರಾವಳಿ ರಾಜ್ಯಗಳನ್ನು ಉದ್ದೇಶಿಸಿ ಮಾತನಾಡುವಾಗ, ಕರಾವಳಿ ತೀರ ಪ್ರದೇಶದ ತ್ವರಿತ ಹಾಗೂ ಸಮತೋಲನದ ಅಭಿವೃದ್ಧಿ ಕುರಿತ ತಮ್ಮ ಮುನ್ನೋಟವನ್ನು ಹಂಚಿಕೊಂಡರು. ಕರ್ನಾಟಕ, ಕೇರಳ ಒಳಗೊಂಡಂತೆ ಸಮುದ್ರದ ನಂಟು ಹೊಂದಿರುವ ದಕ್ಷಿಣದ ಇತರ ರಾಜ್ಯಗಳ ಸಾಗರ ಸಂಪನ್ಮೂಲ ಆಧರಿಸಿದ (ನೀಲಿ ಆರ್ಥಿಕತೆ – Blue economy) ಆರ್ಥಿಕತೆಯ ಸಮಗ್ರ ಅಭಿವೃದ್ಧಿ ಯೋಜನೆಯು ಸದ್ಯಕ್ಕೆ ಕಾರ್ಯಗತಗೊಳ್ಳುತ್ತಿದೆ. ಸಾಗರ ಸಂಪನ್ಮೂಲ ಆಧರಿಸಿದ ಆರ್ಥಿಕತೆಯು ಆತ್ಮನಿರ್ಭರ ಭಾರತದ ಪ್ರಮುಖ ಮೂಲವಾಗಿರಲಿದೆ. ಬಂದರುಗಳು ಮತ್ತು ಕರಾವಳಿ ಪ್ರದೇಶದ ರಸ್ತೆಗಳನ್ನು ಬಹು ಬಗೆಯ ಸಂಪರ್ಕಕ್ಕೆ ಆದ್ಯತೆ ನೀಡುವ ಬಗೆಯಲ್ಲಿ ಸಂಪರ್ಕಿಸಲಾಗುವುದು. ಸುಲಲಿತ ಜೀವನಕ್ಕೆ ಮತ್ತು ಸುಗಮ ರೀತಿಯಲ್ಲಿ ಉದ್ದಿಮೆ – ವಹಿವಾಟು ನಡೆಸುವುದಕ್ಕೆ ಆದರ್ಶವಾಗಿರುವ ಬಗೆಯಲ್ಲಿ ಕರಾವಳಿ ತೀರ ಪ್ರದೇಶವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯಪ್ರವೃತ್ತವಾಗಿದೆ ಎಂದು ನರೇಂದ್ರ ಮೋದಿ ಹೇಳಿದರು.

ಕರಾವಳಿ ತೀರ ಪ್ರದೇಶದಲ್ಲಿ ವಾಸಿಸುವ ಮೀನುಗಾರಿಕೆ ಸಮುದಾಯಗಳ ಬಗ್ಗೆ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ ಪ್ರಧಾನಿ, ಮೀನುಗಾರರು ತಮ್ಮ ಜೀವನೋಪಾಯಕ್ಕೆ ಸಾಗರ ಸಂಪತ್ತನ್ನೇ ಅವಲಂಬಿಸಿರುವುದರ ಜತೆಗೆ ಅವರು ಸಾಗರ ಸಂಪತ್ತಿನ ಕಾವಲುಗಾರರೂ ಹೌದು ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಇದೇ ಕಾರಣಕ್ಕೆ ಸರ್ಕಾರವು ಕರಾವಳಿ ಪ್ರದೇಶದ ಪರಿಸರ ಸಂರಕ್ಷಿಸಲು ಮತ್ತು ಅದನ್ನು ಸಮೃದ್ಧಗೊಳಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಆಳ ಸಮುದ್ರ ಮೀನುಗಾರಿಕೆಗೆ ಉತ್ತೇಜನ, ಪ್ರತ್ಯೇಕ ಮೀನುಗಾರಿಕೆ ಇಲಾಖೆ, ಅಗ್ಗದ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಮತ್ತು ಜಲಚರಗಳ ಸಾಕಾಣಿಕೆಯಲ್ಲಿ ತೊಡಗಿರುವವರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣೆ ಮತ್ತಿತರ ಸೌಲಭ್ಯಗಳು ಉದ್ಯಮಿಗಳು ಮತ್ತು ಸಾಮಾನ್ಯ ಮೀನುಗಾರಿಗೆ ನೆರವಾಗುತ್ತಿವೆ ಎಂದು ಹೇಳಿದರು.

ಇತ್ತೀಚೆಗೆ ಆರಂಭಿಸಲಾಗಿರುವ ಮತ್ಸ್ಯ ಸಂಪದ ಯೋಜನೆ ಬಗ್ಗೆಯೂ ಪ್ರಸ್ತಾಪಿಸಿದ ಪ್ರಧಾನಿ, ಇದು ಕರ್ನಾಟಕ ಮತ್ತು ಕೇರಳದ ಲಕ್ಷಾಂತರ ಮೀನುಗಾರರಿಗೆ ನೇರವಾಗಿ ಪ್ರಯೋಜನ ಕಲ್ಪಿಸಲಿದೆ. ಮೀನುಗಳ ರಫ್ತಿಗೆ ಸಂಬಂಧಿಸಿದಂತೆ ಭಾರತವು ತ್ವರಿತವಾಗಿ ಪ್ರಗತಿ ದಾಖಲಿಸುತ್ತಿದೆ. ಭಾರತವನ್ನು ಗುಣಮಟ್ಟದ ಸಂಸ್ಕರಿತ ಸಾಗರ ಆಹಾರ ಉತ್ಪಾದನಾ ಕೇಂದ್ರವನ್ನಾಗಿ ಬದಲಿಸಲು ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಡಲ ಕಳೆಗೆ ಹೆಚ್ಚುತ್ತಿರುವ ಬೇಡಿಕೆ ಪೂರೈಸುವುದರಲ್ಲಿ ಭಾರತ ಪ್ರಮುಖ ಪಾತ್ರ ನಿರ್ವಹಿಸಲಿದೆ. ಇದಕ್ಕಾಗಿ ಸಾಗರ ಕಳೆ ಬೆಳೆಯುವುದಕ್ಕೆ ರೈತರನ್ನು ಉತ್ತೇಜಿಸಲಾಗುತ್ತಿದೆ ಎಂದೂ ಪ್ರಧಾನಿ ನರೇಂದ್ರ ಮೋದಿ ಹೇಳಿದರು.