- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮುಡಿಪು ಅಕ್ರಮ ಗಣಿಗಾರಿಕಾ ಪ್ರದೇಶಕ್ಕೆ ಸಚಿವ ಸಿ.ಸಿ. ಪಾಟೀಲ್ ಭೇಟಿ

CC Pateel [1]ಕೊಣಾಜೆ : ಕರ್ನಾಟಕ ಸರ್ಕಾರದ ಗಣಿ ಮತ್ತು ಭೂ ವಿಜ್ಞಾನ ಸಚಿವರಾದ ಸಿ.ಸಿ. ಪಾಟೀಲ್ ರವರು ಮುಡಿಪು ಸಮೀಪದ ಬಾಳೆಪುಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಂಡಿಕಟ್ಟ ಗಣಿಗಾರಿಕೆ ಚಟುವಟಿಕೆ ಪ್ರದೇಶಕ್ಕೆ  ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದು ಗ್ರಾಮೀಣ ಪ್ರದೇಶವಾಗಿದ್ದು, ಈಗಾಗಲೇ ಈ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಿಲ್ಲಿಸಲಾಗಿದೆ. ನೆಲಸಮತಟ್ಟು ಮಾಡಲು ಪರವಾನಿಗೆ ಪಡೆದುಕೊಂಡು ಅದಕ್ಕಿಂತ ವಿಸ್ತಾರವಾದ ಜಾಗದಲ್ಲಿ ಸಮತಟ್ಟು ಮಾಡಿ, ಮಣ್ಣು ಸಾಗಾಟ ಮಾಡಿದ ಆರೋಪ‌ ಕೇಳಿ ಬಂದಿದೆ. ಅದಕ್ಕಾಗಿ ಕಾನೂನು ಕ್ರಮ ತೆಗೆದುಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು  ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕುಮಾರ್ ಸಚಿವರಿಗೆ ವಿವರಿಸಿದರು.

ಉತ್ತರ ಕನ್ನಡ, ಬೀದರ್, ಉಡುಪಿ,‌ ದಕ್ಷಿಣ ಕನ್ನಡದಲ್ಲಿ ಇಂತಹ ಗಣಿಗಾರಿಕೆ ವಿಷಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಿವೆ. ಗಣಿಗಾರಿಕೆ ವಿವಾದ, ಸಮಸ್ಯೆಗಳಿಗೆ ಸಂಬಂಧಿಸಿದಂತೆ ನ್ಯಾಯಯುತಾಗಿ ಕ್ರಮ ತೆಗೆದುಕೊಂಡು ಮುನ್ನಡೆಯಬೇಕಿದೆ ಎಂದು  ಸಚಿವ ಸಿ.ಸಿ.ಪಾಟೀಲ್  ಹೇಳಿದರು.

ಈ ಸಂದರ್ಭದಲ್ಲಿ ಮಂಗಳೂರು ಉಪವಿಭಾಗಾಧಿಕಾರಿ ಮದನ್ ಮೋಹನ್, ತಹಶಿಲ್ದಾರ್ ಗುರುಪ್ರಸಾದ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪ್ರಭಾರ ಉಪನಿರ್ದೇಶಕ ನಿರಂಜನ್, ಭೂ ಹಾಗೂ ಗಣಿ ಇಲಾಖೆಯ ಎಂಜಿನಿಯರ್ ಸುಷ್ಮಾ, ಬಾಳೆಪುಣಿ ಗ್ರಾಮ ಪಂಚಾಯಿತಿ ಪಿಡಿಒ ಸುನೀಲ್, ಕೊಣಾಜೆ ಠಾಣೆಯ ಪಿಎಸ್ಐ ಯೋಗೀಶ್ವರನ್ ಮೊದಲಾದವರು ಉಪಸ್ಥಿತರಿದ್ದರು.