- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಮಂಗಳೂರು – ಮಂತ್ರಾಲಯ ಸ್ಲೀಪರ್ ಕ್ಲಾಸ್ ಬಸ್ ಸೇವೆಗೆ ಶಾಸಕ ಡಿ.ವೇದವ್ಯಾಸ ಕಾಮತ್‌ ಚಾಲನೆ

Mantralaya Bus [1]ಮಂಗಳೂರು: ಮಂಗಳೂರಿನಿಂದ ವಿವಿಧ ಮಾರ್ಗಗಳಿಗೆ ನೂತನವಾಗಿ ಬಸ್‌ ಕಾರ್ಯಾಚರಣೆ ಆರಂಭಗೊಂಡಿದ್ದು, ಮಂಗಳೂರಿನಿಂದ ರಾತ್ರಿ 8.50ಕ್ಕೆ ಹೊರಟು ಹಾಸನ ಬೆಂಗಳೂರು ಮಾರ್ಗವಾಗಿ ತಿರುಪತಿಗೆ ಕ್ಲಬ್‌ ಕ್ಲಾಸ್‌ ವೋಲ್ವೋ, ಮಂಗಳೂರಿನಿಂದ ರಾತ್ರಿ 9 ಗಂಟೆಗೆ ದೇರಳಕಟ್ಟೆ, ಕಾಸರಗೋಡು, ಕೋಜಿಕೋಡ್‌ ಮಾರ್ಗವಾಗಿ ಎರ್ನಾಕುಲಂಗೆ ಕ್ಲಬ್‌ ಕ್ಲಾಸ್‌ ವೋಲ್ವೋ, ಮಂಗಳೂರಿನಿಂದ ರಾತ್ರಿ 8.01ಕ್ಕೆ ಕುಂದಾಪುರ, ಹುಬ್ಬಳ್ಳಿ ಮಾರ್ಗವಾಗಿ ಬೆಳಗಾವಿಗೆ ನಾನ್‌ ಎಸಿ ಸ್ಲೀಪರ್‌, ಮಂಗಳೂರು ಬಸ್‌ ನಿಲ್ದಾಣದಿಂದ ರಾತ್ರಿ 8.01ಕ್ಕೆ ಕುಂದಾಪುರ, ತೀರ್ಥಹಳ್ಳಿ, ಶಿವಮೊಗ್ಗ ಮಾರ್ಗವಾಗಿ ರಾಯಚೂರಿಗೆ ನಾನ್‌ ಎಸಿ ಸ್ಲೀಪರ್‌, ಮಂಗಳೂರಿನಿಂದ ಸಂಜೆ 5 ಗಂಟೆಗೆ ಕುಂದಾಪುರ, ತೀರ್ಥಹಳ್ಳಿ, ಶಿವಮೊಗ್ಗ ಮಾರ್ಗವಾಗಿ ಬಳ್ಳಾರಿಗೆ ನಾನ್‌ ಎಸಿ ಸ್ಲೀಪರ್‌, ಮಂಗಳೂರಿನಿಂದ ಸಂಜೆ 7.45ಕ್ಕೆ ಬಜ್ಪೆ, ಕಟೀಲು, ಕಿನ್ನಿಗೋಳಿ, ಮೂಡುಬಿದಿರೆ, ವೇಣೂರು, ಬೆಳ್ತಂಗಡಿ, ಉಜಿರೆ, ಧರ್ಮಸ್ಥಳ ಮಾರ್ಗವಾಗಿ ಬೆಂಗಳೂರಿಗೆ ನಾನ್‌ ಎಸಿ ಸ್ಲೀಪರ್ ಮತ್ತು ಮಂಗಳೂರುನಿಂದ ಸಂಜೆ 7.31ಕ್ಕೆ ವಾಮಂಜೂರು, ಗಂಜಿಮಠ, ಗುರುಪುರ, ಮೂಡುಬಿದಿರೆ, ವೇಣೂರು, ಬೆಳ್ತಂಗಡಿ, ಉಜಿರೆ, ಧರ್ಮಸ್ಥಳ ಮಾರ್ಗವಾಗಿ ಬೆಂಗಳೂರಿಗೆ ರಾಜಹಂಸ ಕಾರ್ಯಾಚರಣೆ ನಡೆಸಲಿದೆ.

ಕೆಎಸ್ಸಾರ್ಟಿಸಿ ಮಂಗಳೂರು ವಿಭಾಗದಿಂದ ಉಡುಪಿ ಮಾರ್ಗವಾಗಿ ಮಂತ್ರಾಲಯಕ್ಕೆ ನಾನ್‌ ಎಸಿ ಸ್ಲೀಪರ್ ನೂತನ ಸಾರಿಗೆಗೆ ಗುರುವಾರದಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಶಾಸಕ ಡಿ.ವೇದವ್ಯಾಸ ಕಾಮತ್‌ ಅವರು ಚಾಲನೆ ನೀಡಿದರು.

ನೂತನ ಬಸ್‌ ಮಂಗಳೂರು ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದಿಂದ ಮಧ್ಯಾಹ್ನ 3.30ಕ್ಕೆ ಹೊರಡಲಿದ್ದು, 4.45ಕ್ಕೆ ಉಡುಪಿ, 5.30ಕ್ಕೆ ಕುಂದಾಪುರ ಮುಖೇನ ಮರುದಿನ ಬೆಳಗ್ಗೆ 6 ಗಂಟೆಗೆ ಮಂತ್ರಾಲಯಕ್ಕೆ ತಲುಪಲಿದೆ. ಮಂತ್ರಾಲಯದಿಂದ ಸಂಜೆ 5.30ಕ್ಕೆ ಹೊರಟ ಬಸ್‌ ಮರುದಿನ ಬೆಳಗ್ಗೆ 8.30ಕ್ಕೆ ಮಂಗಳೂರು ಬಸ್‌ ನಿಲ್ದಾಣ ತಲುಪಲಿದೆ.

ಮಂಗಳೂರಿನಿಂದ ಮಂತ್ರಾಲಯಕ್ಕೆ ಒಬ್ಬ ಪ್ರಯಾಣಿಕನಿಗೆ 950 ರೂ., ಉಡುಪಿಯಿಂದ 900 ರೂ., ಕುಂದಾಪುರದಿಂದ 850 ರೂ. ಮತ್ತು ಮಂಗಳೂರಿನಿಂದ ಬಳ್ಳಾರಿಗೆ 750 ರೂ. ನಿಗದಿಪಡಿಸಲಾಗಿದೆ. ಈ ಬಸ್ಸು ಉಡುಪಿ, ಕುಂದಾಪುರ, ಹಾಲಾಡಿ, ಸಿದ್ದಾಪುರ, ಮಾಸ್ತಿಕಟ್ಟೆ, ತೀರ್ಥಹಳ್ಳಿ, ಶಿವಮೊಗ್ಗ, ಚೆನ್ನಗಿರಿ, ಹೊಳಲ್ಕೆರೆ, ಚಿತ್ರದುರ್ಗ, ಚಳ್ಳೆಕೆರೆ, ರಾಂಪುರ, ಬಳ್ಳಾರಿ, ಆಲೂರು, ಆದೋನಿ ಮಾಧವರಂ ಕ್ರಾಸ್‌ ಮಾರ್ಗವಾಗಿ ಮಂತ್ರಾಲಯ ಸಂಚರಿಸಲಿದೆ.

ಇದೇ ವೇಳೆ ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗದ ಸಂಚಾರಾಧಿಕಾರಿ ಕಮಲ್‌ ಕುಮಾರ್‌, ಮಂಗಳೂರು 2ನೇ ಘಟಕದ ಹಿರಿಯ ವ್ಯವಸ್ಥಾಪಕ ನಾಗೇಶ್‌ ಪ್ರಸನ್ನ, ಮಂಗಳೂರು 1ನೇ ಘಟಕದ ಹಿರಿಯ ವ್ಯವಸ್ಥಾಪಕ ದಿವಾಕರ್‌, ಸಹಾಯಕ ಸಂಚಾರ ಅಧೀಕ್ಷಕ ಮಂಜುನಾಥ್‌, ಸಹಾಯಕ ಸಂಚಾರ ವ್ಯವಸ್ಥಾಪಕರಾದ ನಿರ್ಮಲಾ ಇದ್ದರು.