- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಇಬ್ಬರು ಯುವತಿಯರನ್ನಿಟ್ಟು ಕೊಂಡು ಪುರುಷರನ್ನು ಮನೆಗೆ ಆಹ್ವಾನಿಸಿ ದೋಚುತ್ತಿದ್ದ ತಂಡದ ಬಂಧನ

Honeytrap [1]ಮಂಗಳೂರು : ಇಬ್ಬರು ಯುವತಿಯರನ್ನಿಟ್ಟು ಕೊಂಡು ಸಾಮಾಜಿಕ ಜಾಲತಾಣದ ಮೂಲಕ ಪರಿಚಯ ಮಾಡಿಕೊಂಡು ಸ್ನೇಹ ಬೆಳೆಸಿ ಮನೆಗೆ ಆಹ್ವಾನಿಸಿ ಬ್ಲಾಕ್‌ಮೇಲ್ ಮಾಡಿ ಹಣ ದೋಚುತ್ತಿದ್ದ ಹನಿಟ್ರಾಪ್ ಜಾಲವೊಂದನ್ನು ಸುರತ್ಕಲ್ ಪೊಲೀಸರು ಬೇಧಿಸಿದ್ದಾರೆ.

ಜಾಲದ ಆರೋಪಿಗಳಾದ ರೇಶ್ಮಾ ಯಾನೆ ನೀಮಾ (32), ಇಕ್ಲಾಬ್ ಮುಹಮ್ಮದ್ ಯಾನೆ ಇಕ್ಬಾಲ್(35), ಝೀನ್ ಯಾನೆ ಝೀನತ್ ಮುಬೀನ್(28), ನಾಸಿಫ್ ಯಾನೆ ಅಬ್ದುಲ್ ಖಾದರ್ ನಾಝಿಫ್(34) ಎಂಬವರು ಬಂಧಿತರು.

ಇನ್ನೂ ನಾಲ್ಕೈದು ಆರೋಪಿಗಳು ಈ ಜಾಲದಲ್ಲಿರುವ ಅನುಮಾನವಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಆರೋಪಿಗಳ ಪೈಕಿ ರೇಶ್ಮಾ ಮತ್ತು ಝೀನತ್ ಸಾಮಾಜಿಕ ಜಾಲತಾಣದ ಮೂಲಕ ಪರಿಚಯ ಮಾಡಿಕೊಂಡು ಸ್ನೇಹ ಬೆಳೆಸಿ ಅವರನ್ನು ಒಬ್ಬಂಟಿಯಾಗಿರುವುದಾಗಿ ನಂಬಿಸಿ ಮನೆಗೆ ಆಹ್ವಾನಿಸುತ್ತಿದ್ದರು. ಮನೆಗೆ ಬಂದವರನ್ನು ಇಕ್ಬಾಲ್ ಹಾಗೂ ಅಬ್ದುಲ್ ಖಾದರ್ ನಾಸಿಫ್ ಸಹಾಯದಿಂದ ಬೆದರಿಸಿ ಹಲ್ಲೆ ನಡೆಸಿ ಬ್ಲಾಕ್ ಮೇಲ್ ಮಾಡಿ ಅವರಿಂದ ಹಣ ವಸೂಲು ಮಾಡಲಾಗುತ್ತಿತ್ತು ಎಂದು ಪೊಲೀಸ್ ಆಯುಕ್ತರು ಹೇಳಿದರು.

ಐದಾರು ಮಂದಿ ಇವರ ಬ್ಲಾಕ್‌ಮೇಲ್ ತಂತ್ರಕ್ಕೆ ಒಳಗಾಗಿರುವುದು ತಿಳಿದುಬಂದಿದೆ.  ಹನಿಟ್ರ್ಯಾಪ್ ಗೆ ಒಳಗಾದ ಓರ್ವ ಸಂತ್ರಸ್ತನಿಂದ ಮಾಹಿತಿ ದೊರಕಿದ್ದು, ಮಾರ್ಯಾದೆಗೆ ಅಂಜಿ ಹೆಚ್ಚಿನವರು ದೂರು ನೀಡಲು ಮುಂದಾಗುವುದಿಲ್ಲ. ಇದನ್ನೇ ಆರೋಪಿಗಳು ಬಂಡವಾಳವಾಗಿಸಿ ಮತ್ತಷ್ಟು ಜನರನ್ನು ತಮ್ಮ ಬಲೆಗೆ ಬೀಳಿಸಲು ಪ್ರಯತ್ನಿಸುತ್ತಾರೆ. ಆದ್ದರಿಂದ ಈ ರೀತಿ ಹನಿಟ್ರ್ಯಾಪ್‌ಗೆ ಒಳಾಗದವರು ಅಂಜಿಕೆ ಇಲ್ಲದೆ ಪೊಲೀಸರಿಗೆ ಮಾಹಿತಿಯನ್ನು ಗೌಪ್ಯವಾಗಿ ನೀಡುವ ಮೂಲಕ ಆರೋಪಿಗಳನ್ನು ಪತ್ತೆ ಹಚ್ಚಿ ಇನ್ನಷ್ಟು ಅಮಾಯಕರು ಇಂತಹ ಆರೋಪಿಗಳ ಕೃತ್ಯಕ್ಕೆ ಬಲಿಯಾಗುವುದನ್ನು ತಡೆಯಬಹುದು ಎಂದು ಕಮಿಷನರ್ ಶಶಿಕುಮಾರ್ ತಿಳಿಸಿದರು.

ಬಂಧಿತ ಆರೋಪಿಗಳಿಂದ ನಾಲ್ಕು ಮೊಬೆಲ್ ಫೋನ್‌ಗಳು, ಎಟಿಎಂ ಸೇರಿ ಐದು ಕ್ರೆಡಿಟ್ ಕಾರ್ಡ್‌ಗಳ, ಕೃತ್ಯಕ್ಕೆ ಬಳಸಿದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಝೀನ್ ಹಾಗೂ ಆಕೆಯ ಗಂಡ ಆರೋಪಿ ಇಕ್ಬಾಲ್ ಕಾನ- ಕಟ್ಲಾ ಪರಿಸರದ ಫ್ಲೋರೆಂಟೈನ್ ಅಪಾರ್ಟ್‌ಮೆಂಟ್‌ನಲ್ಲಿ ವಾಸ್ತವ್ಯವಿದ್ದಾರೆ. ಆರೋಪಿ ನಾಸಿಫ್ ಸೂರಿಂಜೆ ಮೂಲದವನಾಗಿದ್ದು, ಸದ್ಯ ಚೊಕ್ಕಬೆಟ್ಟು ಪರಿಸರದಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದಾರೆ ಎಂದು ಶಶಿಕುಮಾರ್ ವಿವರ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಡಿಸಿಪಿ ಹರಿರಾಂ ಶಂಕರ್, ಉಪ ಪೊಲೀಸ್ ಆಯುಕ್ತ ವಿನಯ್ ಗಾಂವ್ಕರ್ ಉಪಸ್ಥಿತರಿದ್ದರು.