- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

‌ ಶ್ರೀನಿವಾಸ್ ಕಾಲೇಜಿನಲ್ಲಿ ರ‍್ಯಾಗಿಂಗ್ – 9 ವಿದ್ಯಾರ್ಥಿಗಳ ಬಂಧನ

srinivas Students [1]ಮಂಗಳೂರು : ವಳಚ್ಚಿಲ್‌ ಶ್ರೀನಿವಾಸ್ ಕಾಲೇಜಿನ ಕಿರಿಯ ವಿದ್ಯಾರ್ಥಿಯೋರ್ವನಿಗೆ ರ‍್ಯಾಗಿಂಗ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ 9 ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ಶ್ರೀನಿವಾಸ್ ಕಾಲೇಜಿನ ಮೊದಲ ವರ್ಷದ ಬಿ- ಫಾರ್ಮಾ ಕಲಿಯುತ್ತಿದ್ದ ಕೇರಳ ಮೂಲದ ವಿದ್ಯಾರ್ಥಿ ರ‍್ಯಾಗಿಂಗ್ ಗೆ ಒಳಗಾಗಿದ್ದು, ಅದೇ ಕಾಲೇಜಿನ ದ್ವಿತೀಯ ಹಾಗೂ ತೃತೀಯ ವರ್ಷದ ಬಿ ಫಾರ್ಮಾ ವಿದ್ಯಾರ್ಥಿಗಳು ರ‍್ಯಾಗಿಂಗ್ ನಡೆಸಿದ್ದಾರೆ. ಆರೋಪಿಗಳೆಲ್ಲರೂ ಕೇರಳ ಮೂಲದ ವಿದ್ಯಾರ್ಥಿಗಳಾಗಿದ್ದಾರೆ ಎಂದಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ತೃತೀಯ ಬಿ ಫಾರ್ಮಾದ ಜಿಷ್ಣು(20), ಶ್ರೀಕಾಂತ ಪಿ.ವಿ. (20), ಅಶ್ವಂತ್ (20), ಸಯಂತ್ (22), ಅಭಿರತ್ ರಾಜೀವ್ (21), ದ್ವಿತೀಯ ಬಿ ಫಾರ್ಮಾದ ರಾಹುಲ್ ಪಿ. (21), ಜಿಷ್ಣು (20), ಮುಕ್ತಾರ್ ಅಲಿ (19), ಮುಹಮ್ಮದ್ ರಝೀಮ್ ಕೆ. (20) ಎಂಬವರನ್ನು ಬಂಧಿಸಲಾಗಿದೆ.

ಪ್ರಕರಣದಂತೆ  ಜ.10ರಂದು ತರಗತಿ ಮುಗಿಸಿ ಅಪರಾಹ್ನ 2 ಗಂಟೆಗೆ ತನ್ನ ಹಾಸ್ಟೆಲ್ ಕಡೆಗೆ ಹೋಗುತ್ತಿದ್ದ ಪ್ರಥಮ ವರ್ಷದ ವಿದ್ಯಾರ್ಥಿಯನ್ನು ಹಿರಿಯ ಈ ಆರೋಪಿತ ವಿದ್ಯಾರ್ಥಿಗಳು ತಲೆಕೂದಲು ಹಾಗೂ ಮೀಸೆ ತೆಗೆಸಿ ಬರುವಂತೆ ಗದರಿಸಿದ್ದಲ್ಲದೆ, ಓರ್ವ ಕೆನ್ನೆಗೆ ಬಾರಿಸಿದ್ದಾನೆ. ನಂತರ ಜ. 12ರಂದು ಅಪರಾಹ್ನ ಅದೇ ವಿದ್ಯಾರ್ಥಿಗಳು ಮೀಸೆ ಹಾಗೂ ತಲೆ ಕೂದಲು ತೆಗೆಯದೆ ಬಂದ ಕಾರಣ ಬೈದು, ಮೀಸೆ ತಲೆ ಕೂದಲು ತೆಗೆಯದಿದ್ದರೆ ತಾವೇ ಕತ್ತರಿಸುವುದಾಗಿ ಬೆದರಿಕೆ ಹಾಕಿದ್ದಾಗಿ ರ‍್ಯಾಗಿಂಗ್ಗೆ ಒಳಗಾದ ವಿದ್ಯಾರ್ಥಿ ಪೊಲೀಸ್ ದೂರು ನೀಡಿದ್ದನು. ಈ ಹಿನ್ನೆಲೆಯಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ರ‍್ಯಾಗಿಂಗ್‌ಗೆ ಒಳಗಾಗಿರುವ ವಿದ್ಯಾರ್ಥಿಯನ್ನು ಸುಮಾರು 2 ಲಕ್ಷ ರೂ. ಶುಲ್ಕ ಪಾವತಿಸಿ ಕಾಲೇಜಿಗೆ ದಾಖಲಿಸಲಾಗಿತ್ತು. ಈ ಕಿರಿಯ ವಿದ್ಯಾರ್ಥಿಯನ್ನು ಹಿರಿಯ ವಿದ್ಯಾರ್ಥಿಗಳು ಪಿಜಿಗೆ ಕರೆಸಿಕೊಂಡು ಅನುಚಿತವಾಗಿ ನಡೆಸಿಕೊಂಡು ಹಲ್ಲೆ ನಡೆಸಿರುವ ಸಂದರ್ಭ ಅವನ ಜತೆ ಇತರ ನಾಲ್ವರು ಕಿರಿಯ ವಿದ್ಯಾರ್ಥಿಗಳನ್ನೂ ರ‍್ಯಾಗಿಂಗ್‌ಗೆ ಒಳಪಡಿಸಿದ್ದಾರೆಂದು ತಿಳಿದು ಬಂದಿದ್ದು, ಈ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ ಎಂದವರು ಹೇಳಿದರು.

ಈ ಪ್ರಕರಣದಲ್ಲಿ ವಿದ್ಯಾರ್ಥಿ ಪೋಷಕರು ಡಿಸಿಪಿಗೆ ಕರೆ ಮಾಡಿ ತಮ್ಮ ಮಗ ಏಕಾಏಕಿ ಕಾಲೇಜು ಬಿಟ್ಟು ಬಂದಿದ್ದು, ಮತ್ತೆ ಹೋಗಲು ಹಿಂಜರಿಯುತ್ತಿದ್ದಾನೆ. ಆತನು ಹಾಸ್ಟೆಲ್ ಶಿಕ್ಷಣಕ್ಕಾಗಿ ಪಾವತಿಸಿರುವ 2 ಲಕ್ಷ ರೂ. ವಾಪಸ್ ಕೊಡಿಸುವಲ್ಲಿ ಸಹಕರಿಸುವಂತೆಯೂ ಕೋರಿದ್ದರು. ಈ ಬಗ್ಗೆ ಮಾಹಿತಿ ಕಲೆ ಹಾಕಿದಾಗ ವಿದ್ಯಾರ್ಥಿಗಳಿಗೆ ಐದಾರು ದಿನಗ ಕಾಲ ರ್ಯಾಗಿಂಗ್ ನಡೆಸಿರುವುದು ತಿಳಿದು ಬಂದಿದೆ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಡಿಸಿಪಿಗಳಾದ ಹರಿರಾಂ ಶಂಕರ್, ವಿನಯ್ ಗಾಂವ್ಕರ್ ಉಪಸ್ಥಿತರಿದ್ದರು.