- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಸಚಿವರ ಅಭಿನಂದನಾ ಸಮಾರಂಭಕ್ಕೆ ತೆರಳುತ್ತಿದ್ದ ರಿಟ್ಜ್ ಕಾರು ಢಿಕ್ಕಿ, ಓರ್ವ ಮೃತ್ಯು

Naveen Martiz [1]ಕಡಬ : ಸಚಿವ ಅಂಗಾರರಿಗೆ ಅಭಿನಂದನಾ ಸಮಾರಂಭಕ್ಕೆ ತೆರಳುತ್ತಿದ್ದ  ರಿಟ್ಝ್ ಕಾರು ಹಾಗೂ ಮಹೀಂದ್ರ ಬೊಲೆರೋ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಓರ್ವ ಮೃತಪಟ್ಟು, ನಾಲ್ವರು ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಪದವು ಎಂಬಲ್ಲಿ ಜನವರಿ  24 ರ ಭಾನುವಾರ ನಡೆದಿದೆ.

ಮೃತಪಟ್ಟವರನ್ನು ರಿಟ್ಜ್ ಕಾರು ಚಾಲಕ ಅಲಂಗೇರಿ ಹೊಸ್ಮಠದ  ನವೀನ ಮಾರ್ಟಿಜ್ (30) ಎಂದು ಗುರುತಿಸಲಾಗಿದೆ

ಉಪ್ಪಿನಂಗಡಿಯಿಂದ ಕಡಬ ಕಡೆಗೆ ಬರುತ್ತಿದ್ದ ರಿಟ್ಝ್ ಕಾರು ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಬೊಲೆರೋ ವಾಹನಕ್ಕೆ ಢಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ. ಘಟನೆಯಲ್ಲಿ ರಿಟ್ಝ್ ಚಾಲಕ ನವೀನ ಮಾರ್ಟಿಜ್  ಮೃತಪಟ್ಟಿದ್ದು, ನಾಲ್ವರು ಗಂಭೀರ ಗಾಯಗೊಂಡಿದ್ದಾರೆ.

ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರು  ಗಾಯಾಳುವನ್ನು ತನ್ನ ವಾಹನದಲ್ಲಿ ಆಸ್ಪತ್ರೆಗೆ ಸೇರಿಸಿದ್ದಾರೆ.

ನಾಲ್ವರು ಗಂಭೀರ ಗಾಯಗೊಂಡಿದ್ದರು. ಮೂವರನ್ನು 108 ಅಂಬ್ಯುಲೆನ್ಸ್ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಉಳಿದ ಓರ್ವ ಮಹಿಳೆಯನ್ನು ಗ್ರಾಮಾಂತರ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆಯವರು ಪೊಲೀಸ್ ವಾಹನದಲ್ಲಿ ಉಪ್ಪಿನಂಗಡಿ ವರೆಗೆ ಕರೆದೊಯ್ದಿದ್ದು, ಆ ಬಳಿಕ ಉಪ್ಪಿನಂಗಡಿ ಠಾಣಾ ಉಪ ನಿರೀಕ್ಷಕರ ವಾಹನದಲ್ಲಿ ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಸಚಿವರ ಕಾರ್ಯಕ್ರಮಕ್ಕೆ ತೆರಳುತ್ತಿರುವುದರ ನಡುವೆಯೂ ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ದ ಸರ್ಕಲ್ ಇನ್ಸ್‌ಪೆಕ್ಟರ್ ಉಮೇಶ್ ಉಪ್ಪಳಿಕೆಯವರ ಮಾನವೀಯ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.