- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಬಿಜೆಪಿ ಪಕ್ಷ ಸೇರ್ಪಡೆಗೆ 15 ರಿಂದ 20 ಕಾಂಗ್ರೆಸ್ ಶಾಸಕರು ಸಿದ್ಧರಿದ್ದಾರೆ : ನಳಿನ್ ಕುಮಾರ್ ಕಟೀಲ್

nalin-kumar [1]ಮಂಗಳೂರು  : ಬಿಜೆಪಿ ಪಕ್ಷ ಸೇರ್ಪಡೆಗೆ 15 ರಿಂದ 20 ಕಾಂಗ್ರೆಸ್ ಶಾಸಕರು ನಮ್ಮ ಸಂಪರ್ಕದಲ್ಲಿದ್ದು ಸದ್ಯ ಸರಕಾರಕ್ಕೆ ಯಾವುದೇ ಧಕ್ಕೆ ಇಲ್ಲದ ಕಾರಣ ಅವರ ಸಂಪರ್ಕ ಮಾತ್ರ ಹೊಂದಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಕೆಲ ದಿನಗಳ ಹಿಂದೆ ಸಚಿವ ರಮೇಶ್‌ ಜಾರಕಿಹೊಳಿ ಕಾಂಗ್ರೆಸ್ ಐದಾರು ಶಾಸಕರು ರಾಜೀನಾಮೆ ಕೊಡಿಸುವ ಬಗ್ಗೆ ಮಾತನಾಡಿದ್ದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಅವರು ಹೇಳಿದ್ದು ಕೇವಲ 4-5 ಶಾಸಕರನ್ನು ರಾಜೀನಾಮೆ ಕೊಡಿಸುವ ಶಕ್ತಿಯಿದೆ ಎಂದು. ಆದರೆ, ಕಾಂಗ್ರೆಸ್ ಪಕ್ಷದ ನಡವಳಿಕೆಯಿಂದ ಬೇಸತ್ತ 15 ರಿಂದ 20 ಶಾಸಕರು ನಮ್ಮ ಪಕ್ಷಕ್ಕೆ ಸೇರಲು ಸಿದ್ಧವಿರುವುದಾಗಿ ತಿಳಿಸಿದ್ದಾರೆ ಎಂದರು.

ಮುಂಬರುವ ಉಪ ಚುನಾವಣೆಯ ಸಿದ್ಧತೆ ಆರಂಭಗೊಂಡಿದೆ. ಶಾಸಕ ಎಂಸಿ ಮನಗೂಳಿ ಅವರ ನಿಧನದ ನಂತರ ತೆರವಾದ ಶಾಸಕ ಸ್ಥಾನಕ್ಕೆ ನಡೆಯುವ ಉಪ ಚುನಾವಣೆಯಲ್ಲಿ ಪಕ್ಷದಿಂದ ಯಾರನ್ನು ಕಣಕ್ಕೆ ಇಳಿಸುತ್ತೇವೆ ಎನ್ನುವ ಬಗ್ಗೆ ಇನ್ನೂ ಪೂರ್ಣ ಚರ್ಚೆ ನಡೆದಿಲ್ಲ. ಡಿಸಿಎಂ ಲಕ್ಷ್ಮಣ ಸವದಿ ಸ್ಪರ್ಧೆ ಖಚಿತವಾಗಿಲ್ಲ. ಇನ್ನೂ ಸಮಯವಿದೆ. ನಂತರ ಮುಖಂಡರ, ಸ್ಥಳೀಯ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸಿಎಂ ಬಿಎಸ್‌ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಅವರ ಕುಟುಂಬದ ವಿರುದ್ಧ ನಿರಂತರ ಟೀಕೆ ಮಾಡುತ್ತಿರುವ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರಿಗೆ ಕಾರಣ ಕೇಳಿ, ಕೇಂದ್ರ ಶಿಸ್ತು ಸಮಿತಿ ಶೋಕಾಸ್ ನೋಟಿಸ್ ನೀಡಿದೆ. ನೋಟಿಸ್ ಈಗಾಗಲೇ ಯತ್ನಾಳ್ ಅವರಿಗೆ ನೀಡಲಾಗಿದ್ದು, ಇಲ್ಲಿಯವರೆಗೆ ಅವರಿಂದ ಉತ್ತರ ಬಂದಿಲ್ಲ ಎಂದರು.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹಣೆ ಕುರಿತು ಪ್ರತಿಪಕ್ಷದ ನಾಯಕರು ಮಾಡುತ್ತಿರುವ ಟೀಕೆಗೆ ತೀಕ್ಷ ಪ್ರತಿಕ್ರಿಯೆ ನೀಡಿದ ಕಟೀಲ್, ಅವರಿಗೆ ಸಂವಿಧಾನದ ಮೇಲೆ ನಂಬಿಕೆ ಇರಬೇಕು. ರಾಮ ಮಂದಿರ ನಿರ್ಮಾಣಕ್ಕೆ ಸರ್ವೋಚ್ಛ ನ್ಯಾಯಾಲಯ ಅನುಮತಿ ನೀಡಿದೆ. ಹೀಗಿರುವಾಗ ಅದರ ಬಗ್ಗೆ ಅನವಶ್ಯಕ ಹೇಳಿಕೆ ನೀಡುವುದು ಸರಿಯಲ್ಲ. ದೇಣಿಗೆಯನ್ನು ಒತ್ತಾಯಪೂರ್ವಕವಾಗಿ ಸಂಗ್ರಹಿಸುತ್ತಿಲ್ಲ. ದೇಣಿಗೆ ನೀಡುವುದು, ಬಿಡುವುದು ಸಿದ್ದರಾಮಯ್ಯ ಅವರಿಗೆ ಬಿಟ್ಟ ವಿಷಯ ಎಂದು ಹೇಳಿದರು.