- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕೇರಳದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾದ ಹಿನ್ನೆಲೆ ; ಕರ್ನಾಟಕ ಪ್ರವೇಶ ನಿರ್ಬಂಧ

keralagate [1]ಮಂಗಳೂರು  : ಕೇರಳದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ವಯನಾಡ್ ಮತ್ತು ಕಾಸರಗೋಡು ಜಿಲ್ಲೆಯಲ್ಲಿರುವ 13  ಪ್ರವೇಶ ದ್ವಾರಗಳನ್ನು ಮುಚ್ಚಲು ನಿರ್ಧರಿಸಲಾಗಿದೆ. ಗಡಿಭಾಗ ತಲಪಾಡಿಯಲ್ಲಿ ಆರೋಗ್ಯ ಅಧಿಕಾರಿಗಳ ಪರಿಶೀಲನಾ ಕೇಂದ್ರ ಇಂದಿನಿಂದ ಮತ್ತೆ ಆರಂಭಗೊಂಡಿದ್ದು, ಆರ್ಟಿಪಿಸಿಆರ್ ವರದಿ ಇದ್ದರೆ ಮಾತ್ರ ನಾಳೆಯಿಂದ ಕರ್ನಾಟಕ ಪ್ರವೇಶಕ್ಕೆ ಅವಕಾಶ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲಾ ಆರೋಗ್ಯ ಅಧಿಕಾರಿ ರಾಮಕೃಷ್ಣ ಬಾಯರಿ, ತಹಶೀಲ್ದಾರ್ ಗುರುಪ್ರಸಾದ್ ನೇತೃತ್ವದ ತಂಡ ತಲಪಾಡಿ ಗಡಿಭಾಗದಲ್ಲಿ ನಿಂತು ಕೇರಳದಿಂದ ಬರುವವರನ್ನು ತಡೆದು ಟೆಸ್ಟ್ ವರದಿ ನೀಡುವಂತೆ ಸೂಚಿಸಿದರು. ನಾಳೆಯಿಂದ ಕಡ್ಡಾಯವಾಗಿ ಆರ್ಟಿಪಿಸಿಆರ್ ವರದಿ ತರುವಂತೆ ಸೂಚಿಸಿದರು. ವರದಿ ಇಲ್ಲದಿದ್ದಲ್ಲಿ ಮಂಗಳೂರಿಗೆ ಪ್ರವೇಶವಿರುವುದಿಲ್ಲ ಎಂದು ಎಚ್ಚರಿಸಿದರು.

ಕೇಂದ್ರ ಸರ್ಕಾರ ಜನವರಿ ತಿಂಗಳಲ್ಲಿ ಜಾರಿಗೊಳಿಸಿರುವ ಆದೇಶದಲ್ಲಿ ಅಂತಾರಾಜ್ಯ ಗಡಿಗಳಲ್ಲಿ ಯಾವುದೇ ವಾಹನಗಳಿಗೆ ತಡೆಯೊಡ್ಡಬಾರದು ಎಂದು ಸ್ಪಷ್ಟವಾಗಿ ತಿಳಿಸಿದೆ. ಆದರೆ ಕೇಂದ್ರದ ಆದೇಶವನ್ನು ರಾಜ್ಯ ಸರ್ಕಾರ ಪಾಲಿಸದಿರುವುದು ದುರದೃಷ್ಟಕರ. ಈ ಆದೇಶವನ್ನು ಮುಂದಿಟ್ಟುಕೊಂಡು ನ್ಯಾಯಾಲಯದ ಮೆಟ್ಟಿಲೇರುತ್ತೇವೆ. ಭಾನುವಾರ ಉತ್ತರಪ್ರದೇಶದ ಮುಖ್ಯಮಂತ್ರಿ ಬರುವ ಸಂದರ್ಭದಲ್ಲಿ ಯಾವುದೇ ಕಾನೂನುಗಳನ್ನು ಜಾರಿ ಮಾಡಿಸಿಲ್ಲ, ಇದೀಗ ಏಕಾಏಕಿ ಜನರ ಮೇಲೆ ದಬ್ಬಾಳಿಕೆ ನಡೆಸುತ್ತಿರುವುದು ರಾಜಕೀಯ ಷಡ್ಯಂತ್ರ ಎಂದು ಕಾಸರಗೋಡು ಜಿ.ಪಂ. ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಆರೋಪಿಸಿದರು.

ಕೇರಳದಿಂದ ಬರುವ ವಾಹನಗಳಿಗೆ ಅವಕಾಶ ಮಾಡಿಕೊಡದ ಹಿನ್ನೆಲೆಯಲ್ಲಿ ಮಂಗಳೂರಿನಿಂದ ಕೇರಳಕ್ಕೆ ತೆರಳುವ ವಾಹನಗಳನ್ನು ಗಡಿನಾಡು ಪ್ರದೇಶದ ಮಂದಿ ರಾಷ್ಟ್ರೀಯ ಹೆದ್ದಾರಿಯಲ್ಲಿ ತಡೆದು ಕೆಲ ಕಾಲ ಕೇರಳಿಗರು ಪ್ರತಿಭಟನೆ ನಡೆಸಿದರು.