- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಬ್ಯಾಂಕ್‌ ಎಟಿಎಂಗಳಲ್ಲಿ ಹಣ ವಂಚಿಸುವ ಬೃಹತ್ ಜಾಲದ ನಾಲ್ವರ ಬಂಧನ

scimming [1]ಮಂಗಳೂರು : ಸ್ಕಿಮ್ಮಿಂಗ್ ಯಂತ್ರದ ಉಪಕರಣ ಅಳವಡಿಸಿ ಬ್ಯಾಂಕ್‌ ಗಳ ಎಟಿಎಂಗಳಲ್ಲಿ ಹಣ ವಂಚಿಸುವ ಬೃಹತ್ ಜಾಲವನ್ನು ಭೇದಿಸಿದ ಮಂಗಳೂರು ಸೈಬರ್ ಕ್ರೈಂ ಪೊಲೀಸರು ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ.

ಈ ಮಧ್ಯೆ ಕೃತ್ಯ ಎಸಗಿ ಪರಾರಿಯಾಗುವ ಯತ್ನದಲ್ಲಿ ಬಿದ್ದು ಗಾಯಗೊಂಡಿರುವ ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.

ಬಂಧಿತರಿಂದ ಕಾರು, ನಕಲಿ ಎಟಿಎಂ ಕಾರ್ಡ್‌ಗಳು, ಮೊಬೈಲ್ ವಶಪಡಿಸಲಾಗಿದೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೊಲೀಸ್ ಆಯುಕ್ತ ಶಶಿಕುಮಾರ್ ಕಳೆದ ವರ್ಷದ ನವೆಂಬರ್‌ನಿಂದ ಈವರೆಗೆ ನಗರದ ವಿವಿಧ ಎಟಿಎಂಗಳಲ್ಲಿ ಸ್ಕಿಮ್ಮಿಂಗ್ ಯಂತ್ರ ಅಳವಡಿಸಿ ಹಣವನ್ನು ದೋಚಿದ ಕೇರಳದ ತ್ರಿಶ್ಯೂರ್ ಜಿಲ್ಲೆಯ ಚಲಕಾಡಿಯ ಗ್ಲಾಡಿವಿನ್ ಜಿಂಟೋ ಜೋಯ್ (37), ದಿಲ್ಲಿಯ ಪ್ರೇಮ್‌ನಗರದ ದಿನೇಶ್ ಸಿಂಗ್ ರಾವತ್ (44), ಕಾಸರಗೋಡು ಜಿಲ್ಲೆಯ ಅಬ್ದುಲ್ ಮಜೀದ್ (27), ಆಲಪ್ಪುಝ ಜಿಲ್ಲೆಯ ರಾಹುಲ್ ಟಿ.ಎಸ್. (27) ಎಂಬವರನ್ನು ಬಂಧಿಸಲಾಗಿದೆ. ಈ ಕೃತ್ಯದಲ್ಲಿ ಪಾಲ್ಗೊಂಡು ತಪ್ಪಿಸಿಕೊಳ್ಳುವ ಸಂದರ್ಭ ಬಿದ್ದು ಗಾಯಗೊಂಡಿರುವ ಕಾಸರಗೋಡಿನ ಅಝ್ಮಾಲ್ ಎಂಬಾತನಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಆರೋಪಿಗಳು ಕುಳಾಯಿಯ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ, ಚಿಲಿಂಬಿ ಮತ್ತು ನಾಗುರಿ ಹಾಗೂ ಕಪಿತಾನಿಯೋದಲ್ಲಿರುವ ಕೆನರಾ ಬ್ಯಾಂಕ್‌ನ ಎಟಿಎಂ, ಮಂಗಳಾದೇವಿಯ ಎಸ್‌ಬಿಐ ಎಟಿಎಂಗಳಲ್ಲಿ ಸ್ಕಿಮ್ಮಿಂಗ್ ಡಿವೈಎಸ್ ಅಳವಡಿಸಿ ಗ್ರಾಹಕರ ಡಾಟಾ ವನ್ನು ಪಡೆದುಕೊಂಡು ನಕಲಿ ಎಟಿಎಂ ಕಾರ್ಡ್‌ಗಳನ್ನು ತಯಾರಿಸಿ ದೆಹಲಿ, ಬೆಂಗಳೂರು, ಮೈಸೂರು, ಮಡಿಕೇರಿ, ಗೋವಾ ಮತ್ತಿತರ ಕಡೆ ಗ್ರಾಹಕರ ಗಮನಕ್ಕೆ ಬಾರದಂತೆ ಹಣವನ್ನು ವಿಡ್ರಾ ಮಾಡಿದ್ದಾರೆ. ಮಂಗಳೂರಿನಲ್ಲೇ ಸುಮಾರು 22 ಪ್ರಕರಣದಲ್ಲಿ ಹಣವನ್ನು ದೋಚಿರುವ ಈ ಆರೋಪಿಗಳು ದೇಶಾದ್ಯಂತ ಸುಮಾರು 60ಕ್ಕೂ ಅಧಿಕ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ಇದೆ ಎಂದರು.

ಆರೋಪಿಗಳಿಂದ ಸ್ಕಿಮ್ಮಿಂಡ್ ಡಿವೈಸ್, ಕೃತ್ಯಕ್ಕೆ ಬಳಸಿದ ಕಾರು, 2 ನಕಲಿ ಎಟಿಎಂ ಕಾರ್ಡ್‌ಗಳು, 5 ಮೊಬೈಲ್, 25 ಸಾವಿರ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.