ಮಂಗಳೂರು : ಕೇಂದ್ರ ಸರ್ಕಾರದ ಉಡಾನ್ ಯೋಜನೆಯಡಿ ಬೈಂದೂರು ಮತ್ತು ಕಾರವಾರದಲ್ಲಿ ವಿಮಾನ ನಿಲ್ದಾಣಗಳನ್ನು ತೆರೆಯುವ ಯೋಜನೆ ಇದೆ ಮತ್ತು ಇದಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ರಾಜ್ಯ ಮಧ್ಯಮ ಮತ್ತು ಭಾರಿ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಮಾರ್ಚ್ 21, ಭಾನುವಾರದಂದು ಮಂಗಳೂರಿನ ಟಿಎಂಎ ಪೈ ಕನ್ವೆನ್ಷನ್ ಹಾಲ್‌ನಲ್ಲಿ ಎಫ್‌ಐಸಿಸಿಐ ಆಯೋಜಿಸಿದ್ದ ಕರ್ನಾಟಕ ಕೋಸ್ಟ್‌ಲೈನ್ ಬಿಸಿನೆಸ್ ಕಾನ್ಕ್ಲೇವ್ ಉದ್ಘಾಟಿಸಿದ ನಂತರ ಅವರು ಮಾತನಾಡುತ್ತಾ ರಾಜ್ಯದಲ್ಲಿ ಹೊಸದಾಗಿ ಐದಾರು ಕೈಗಾರಿಕಾ ಟೌನ್ ಶಿಪ್ ಮಾಡುವ ಗುರಿ ಇದೆ. ಈ ಬಗ್ಗೆ ಸಿಎಂ ಹಾಗೂ ನಗರಾಭಿವೃದ್ಧಿ ಇಲಾಖೆಯೊಂದಿಗೆ ಚರ್ಚೆ ನಡೆಸಿದ್ದೇನೆ. ಅವರೂ ಒಪ್ಪಿಕೊಂಡಿದ್ದಾರೆ. ಸಿಎಂ ಅವರು ಪೀಣ್ಯಾ ಟೌನ್‌ಶಿಪ್ ಮಾಡೋದಾಗಿ ಬಜೆಟ್ನಲ್ಲಿಯೂ ಘೋಷಿಸಿದ್ದಾರೆ ಎಂದರು.
ಕನಿಷ್ಟ ಐದಾರು ಟೌನ್‌ಶಿಪ್ಗಳನ್ನು ಮಾಡುವ ಗುರಿ ಇದೆ. ಈ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ. ರಾಜ್ಯದಲ್ಲಿ ಕಳೆದ ಒಂದು ವರ್ಷದಲ್ಲಿ 382 ಯೋಜನೆಗಳ 76,376 ಕೋಟಿ ರೂ. ಮೊತ್ತದ ಬಂಡವಾಳ ಹೂಡಿಕೆ ಪ್ರಸ್ತಾವನೆ ಬಂದಿದೆ. ಇದರಿಂದ 1,77,700 ಮಂದಿಗೆ ಉದ್ಯೋಗಾವಕಾಶ ದೊರೆಯಲಿದೆ ಎಂದು ಹೇಳಿದರು.
ಬೆಂಗಳೂರಿನಂತೆ ಮಂಗಳೂರಿನಲ್ಲಿಯೂ ಇಲೆಕ್ಟ್ರಾನಿಕ್ ಸಿಟಿ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದೆ ಸಲ್ಲಿಕೆಯಾಗಿತ್ತು ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶೆಟ್ಟರ್, ಈಗಾಗಲೇ ಹೂಡಿಕೆದಾರರು ಹೂಡಿಕೆ ಮಾಡಲು ಮುಂದೆ ಬಂದಿದ್ದಾರೆ.
ಈ ಬಗ್ಗೆ ಕಾರ್ಯಪ್ರವೃತ್ತರಾಗಲು ನಾವು ತಯಾರಿದ್ದೇವೆ. ಈಗಾಗಲೇ ಮಂಗಳೂರಿನಲ್ಲಿ ಪ್ಲಾಸ್ಟಿಕ್ ಪಾರ್ಕ್ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಆದಷ್ಟು ಶೀಘ್ರದಲ್ಲಿ ನಿರ್ಮಾಣವಾಗಲಿದೆ ಎಂದರು.ಕೈಗಾರಿಕಾ ಬಂಡವಾಳ ಹೂಡಲು ವಿಶೇಷ ಸಾಲಸೌಲಭ್ಯ ಕೊಡುವ ಬಗ್ಗೆ ಮೂರು ಸೆಕ್ಟರ್ ಮಾಡಿಕೊಳ್ಳಲಾಗಿದೆ. ಶಿವಮೊಗ್ಗ, ಕಲಬುರಗಿ ಹಾಗೂ ಹುಬ್ಬಳ್ಳಿ-ಧಾರವಾಡದಲ್ಲಿ ಮೊದಲ ಹಂತದಲ್ಲಿ ಯೋಜನೆ ಹಾಕಿಕೊಳ್ಳಲಾಗಿದೆ.
ಇದರ ಫಲಿತಾಂಶ ನೋಡಿಕೊಂಡು ಈ ಯೋಜನೆಯನ್ನು ಬೇರೆ ಜಿಲ್ಲೆಗಳಿಗೂ ವಿಸ್ತರಣೆ ಮಾಡಲಿದ್ದೇವೆ. ಇದೇ ವಿಭಾಗದಲ್ಲಿ ಕೋಸ್ಟಲ್ ಭಾಗಕ್ಕೆ ಬೇರೆಯದೇ ಒಂದು ಝೋನ್ ಮಾಡುತ್ತೇವೆ ಎಂದು ಶೆಟ್ಟರ್ ಹೇಳಿದರು.
Click this button or press Ctrl+G to toggle between Kannada and English