- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು: ನೂತನ ಪ್ರಾಂಶುಪಾಲರಾಗಿ ಡಾ. ಅನಸೂಯಾ ರೈ ನೇಮಕ

Anusuya Rai [1]ಮಂಗಳೂರು ವಿಶ್ವವಿದ್ಯಾನಿಲಯದ ಅಧೀನ ಕಾಲೇಜಾದ ವಿಶ್ವವಿದ್ಯಾನಿಲಯ ಕಾಲೇಜಿನ ವಾಣಿಜ್ಯ ವಿಭಾಗದ ಹಿರಿಯ ಸಹಾಯಕ ಪ್ರಾಧ್ಯಾಪಿಕೆ ಡಾ. ಅನಸೂಯಾ ರೈ, ನೂತನ ಪ್ರಾಂಶುಪಾಲರಾಗಿ (ಪ್ರಭಾರ) ಮಾರ್ಚ್‌ 31 ರಂದು ಅಧಿಕಾರ ವಹಿಸಿಕೊಂಡಿದ್ದಾರೆ.

ಸುಮಾರು 35 ವರ್ಷಗಳಿಂದ ವಾಣಿಜ್ಯಶಾಸ್ತ್ರ ಬೋಧಿಸುತ್ತಿರುವ ಡಾ. ಅನಸೂಯಾ ರೈ, ದಿ.ಪಠೇಲ್‌ ಶ್ರೀ ಇಂದುಹಾಸ ರೈ- ಸುಲೋಚನಾ ರೈ ದಂಪತಿಯ ಪುತ್ರಿ. ತಮ್ಮ ಪ್ರಾಥಮಿಕ, ಪ್ರೌಢ ಮತ್ತು ಪದವಿ ಶಿಕ್ಷಣವನ್ನು ಸಂತ ಆಗ್ನೇಸ್‌ ವಿದ್ಯಾಸಂಸ್ಥೆಯಲ್ಲಿ ಪೂರೈಸಿದ್ದಾರೆ. ಕಲಿಕೆಯಲ್ಲಿ ಯಾವತ್ತೂ ಮುಂದಿದ್ದ ಅವರು ರಾಜ್ಯದಲ್ಲೇ 66ನೇ ರ‍್ಯಾಂಕ್ನೊಂದಿಗೆ ಕಾಲೇಜು ಶಿಕ್ಷಣಕ್ಕಾಗಿ ಕೇಂದ್ರ ಸರ್ಕಾರ ನೀಡುವ ರಾಷ್ಟ್ರಮಟ್ಟದ ಮೆರಿಟ್‌ ಸ್ಕಾಲರ್‌ಶಿಪ್‌ ಪಡೆದಿದ್ದರು.
ಮಂಗಳೂರು ವಿವಿಯಲ್ಲಿ ಎಂ.ಕಾಂ ಪೂರೈಸಿದ ಅವರು (1985) ಮೂಲ್ಕಿಯ ವಿಜಯಾ ಕಾಲೇಜು, ಬೆಳ್ತಂಗಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮತ್ತು ಮಡಿಕೇರಿಯ ಎಫ್‌.ಎಂ.ಕೆ.ಎಂ.ಸಿ ಕಾಲೇಜಿನಲ್ಲಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಯಾಗಿರುವ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯರವರ ಮಾರ್ಗದರ್ಶನದಲ್ಲಿ ಡಾಕ್ಟರೇಟ್‌ ಪೂರೈಸಿರುವ ಡಾ. ಅನಸೂಯಾ ರೈ, ಎಂ.ಕಾಂ ವಿಭಾಗದ ಸಂಯೋಜಕರಾಗಿ, ಮಂಗಳೂರು ವಿಶ್ವವಿದ್ಯಾನಿಲಯದ ವಿಶೇಷಾಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

ಈವರೆಗೆ ಅವರು 8 ಮಂದಿ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ. ತಮ್ಮ ಯಶಸ್ಸಿನಲ್ಲಿ ಪತಿ ದಿ. ಮಾಗಣ್ತಡಿ ಕಿಶೋರ್ ಕುಮಾರ್ ಶೆಟ್ಟಿ ಅವರ ಪಾತ್ರ ದೊಡ್ಡದು ಎನ್ನುವ ಡಾ. ಅನಸೂಯಾ ರೈ ಅವರಿಗೆ ಅಂಕುಶ್‌ ಶೆಟ್ಟಿ ಎಂಬ ಮಗನಿದ್ದಾರೆ.