- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಬಿ.ಸಿ.ರೋಡು ಯುವಕನ ಕೊಲೆಯತ್ನ ಪ್ರಕರಣ, ನೈಜ ಆರೋಪಿಗಳ ಪತ್ತೆಗೆ ಪೋಷಕರ ಆಗ್ರಹ

Ajjibettu [1]ಬಂಟ್ವಾಳ:  ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿ ಸಮೀಪದ ಅಜ್ಜಿಬೆಟ್ಟು ತಿರುವು ಬಳಿ ಇದೇ 4ರಂದು ರಾತ್ರಿ ಸುಮಾರು 7.30 ಗಂಟೆಗೆ ಅಪರಿಚಿತ ದುಷ್ಕರ್ಮಿಗಳಿಂದ ತಲೆಗೆ ಸೇರಿದಂತೆ ಕೆನ್ನೆ ಮತ್ತು ಕೈಗಳಿಗೆ ಹರಿತವಾದ ಕತ್ತಿಯಿಂದ ಹಲ್ಲೆಗೀಡಾದ ಮನೋಜ್ ಗಾಣಿಗ ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿದ್ದು, ಈ ಕೃತ್ಯದ ಹಿಂದಿರುವ ನೈಜ ಆರೋಪಿಗಳನ್ನು ಪೊಲೀಸರು ಕೂಡಲೇ ಬಂಧಿಸಬೇಕು ಗಾಯಾಳುವಿನ ತಂದೆ ಭೋಜ ಸಪಲ್ಯ ಬ್ರಹ್ಮರಕೂಟ್ಲು ಇವರು ಆಗ್ರಹಿಸಿದ್ದಾರೆ.

ಬಿ.ಸಿ.ರೋಡಿನಲ್ಲಿ ಮಂಗಳವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ ಕಳೆದ 10 ವರ್ಷಗಳಿಂದ ವಿದೇಶದಲ್ಲಿ ಎಂಜಿನಿಯರ್ ಆಗಿ ದುಡಿಯುತ್ತಿರುವ ಮನೋಜ್ ಗೆ ಮೇ ತಿಂಗಳು ವಿವಾಹ ನಡೆಯಲಿದೆ. ಇದಕ್ಕಾಗಿ ಕಳೆದ 6 ತಿಂಗಳ ಹಿಂದೆಯಷ್ಟೇ ಊರಿಗೆ ಬಂದು ನಮ್ಮ ಉಮನಗುಡ್ಡೆ ಮನೆಯಲ್ಲಿ ವಕ್ರ್ ಫ್ರಂ ಹೋಂ ಮಾಡುತ್ತಿದ್ದಾರೆ. ನನಗೆ ಒಬ್ಬ ಪುತ್ರ ಮತ್ತು ಇಬ್ಬರು ಪುತ್ರಿಯರು ಮಾತ್ರ ಇದ್ದಾರೆ. ಆದರೆ ಈ ಕೃತ್ಯ ನಡೆದ ರಾತ್ರಿಯೇ ಇದೊಂದು ಕೌಟುಂಬಿಕ ಕಲಹ, ಅಣ್ಣ ತಮ್ಮಂದಿರ ನಡುವಿನ ವೈಷಮ್ಯ ಮತ್ತಿತರ ಮಾನಹಾನಿಕರ ಕಟ್ಟು ಕಥೆ ಹೆಣೆದು ಕೆಲವೊಂದು ವೆಬ್ ನ್ಯೂಸ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಗಿದೆ. ಇದೊಂದು ಪೂರ್ವ ನಿಯೋಜಿತ ಕೃತ್ಯವಾಗಿದ್ದು, ಪೊಲೀಸರ ತನಿಖೆಯ ದಿಕ್ಕು ತಪ್ಪಿಸುವುದಕ್ಕಾಗಿ ಆರೋಪಿಗಳು ಈ ತಂತ್ರ ರೂಪಿಸಿದ್ದಾರೆ ಎಂದು ಆರೋಪಿಸಿದರು. ಇಂತಹ ಸುಳ್ಳು ಸುದ್ದಿ ಬಿತ್ತರಿಸಿ ನಮ್ಮ ಕುಟುಂಬದ ಗೌರವಕ್ಕೆ ಧಕ್ಕೆ ಉಂಟು ಮಾಡಿರುವವರ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ. ನೈಜ ಆರೋಪಿಗಳನ್ನು ಶೀಘ್ರವೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಇಂತಹ ಮಾನಹಾನಿಕರ ಮತ್ತು ಸುಳ್ಳು ಸುದ್ದಿ ಹರಡಿದವರ ವಿರುದ್ಧ ಸೈಬರ್ ಕ್ರೈಂ ಪೊಲೀಸರಿಗೆ ದೂರು ಸಲ್ಲಿಸಿ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಅವರು ಎಚ್ಚರಿಸಿದರು.

ಇಬ್ಬರು ಆರೋಪಿಗಳು ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಹಾಕಿಕೊಂಡು ಬಂದು ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದು, ಇವರ ವಾಹನ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ಪೊಲೀಸರು ತ್ವರಿತವಾಗಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿ ಶಾಸಕ ರಾಜೇಶ ನಾಯ್ಕ್ ಮತ್ತು ಎಸ್ಪಿ ಕಚೇರಿಗೆ ದೂರು ಸಲ್ಲಿಸಲಾಗಿದೆ ಎಂದು ಅವರು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಗಾಯಾಳು ಸಂಬಂಧಿಕರಾದ ಪೂವಪ್ಪ ಸಪಲ್ಯ ದರಿಬಾಗಿಲು, ರಾಜೇಂದ್ರ ಸಪಲ್ಯ, ಪುನೀತ್ ಗಾಣಿಗ, ಗಣೇಶ್ ಉಮನಗುಡ್ಡೆ ಇದ್ದರು.