- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಸುಲಿಗೆ, ಕಳ್ಳತನ ನಡೆಸುತ್ತಿದ್ದ 6 ಮಂದಿ ದರೋಡೆಕೋರರ ಬಂಧನ

Robbers [1]ಮಂಗಳೂರು: ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸುಲಿಗೆ, ಕಳ್ಳತನ ನಡೆಸುತ್ತಿದ್ದ 6 ಮಂದಿಯನ್ನು ಬಂಧಿಸಿದ್ದು, ಈ ಮೊದಲು  9 ಮಂದಿ ದರೋಡೆಕೋರರನ್ನು ಬಂಧಿಸಿದ್ದರು. ಇದೀಗ ಬಂಧಿತರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.

ಮಂಗಳೂರಿನ ಕೆ.ಸಿ ರೋಡ್ನ ಮುಹಮ್ಮದ್ ಝುಬೈರ್, ಬೆಳ್ತಂಗಡಿಯ ಇಬ್ರಾಹಿಂ ಲತೀಫ್,‌ ಮೂಡಬಿದಿರೆಯ ರಾಕೇಶ್, ಅರ್ಜುನ್, ಉಪ್ಪಿನಂಗಡಿಯ ಮೋಹನ್ ಮತ್ತು ಕೋಣಾಜೆ ಬೋಳಿಯಾರ್ನ ಮನ್ಸೂರ್ ಬಂಧಿತರು.

ಮಂಗಳೂರು ನಗರದಲ್ಲಿ 7 ಪ್ರಕರಣಗಳು, ದಕ್ಷಿಣ ಕನ್ನಡದಲ್ಲಿ 8, ಹಾಸನದಲ್ಲಿ 2, ಚಿಕ್ಕಮಗಳೂರಿನಲ್ಲಿ 3, ಕೊಡಗುವಿನಲ್ಲಿ 5, ಉಡುಪಿಯಲ್ಲಿ 2 ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ1 ಪ್ರಕರಣಗಳು ದಾಖಲಾಗಿದ್ದು ಒಟ್ಟು 28 ಪ್ರಕರಣಗಳನ್ನು ಈವರೆಗೆ ಬೇಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಆರೋಪಿಗಳಿಂದ 22 ಲಕ್ಷ ಮೌಲ್ಯದ ಇನ್ನೋವಾ ಕಾರು, 7 ಲಕ್ಷ ಮೌಲ್ಯದ ಕ್ರೆಟಾ ಕಾರು, 8 ಲಕ್ಷ ಮೌಲ್ಯದ ಒಂದು ಐ 20 ಕಾರು, 32,000 ರೂ.ಗಳ 8 ಮೊಬೈಲ್ ಫೋನ್, 2,20,000 ಲಕ್ಷ ಮೌಲ್ಯದ 54 ಗ್ರಾಂ ಚಿನ್ನ, 2,30,000 ರೂ.ಗಳ 3.5 ಕೆ.ಜಿ ಬೆಳ್ಳಿ ಮತ್ತು 2 ಕತ್ತಿ ಹೀಗೆ ಕೃತ್ಯಕ್ಕೆ ಬಳಸಿದ ಒಟ್ಟು 41.82 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿ ತೆಗೆದುಕೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಗಳೂರು ನಗರ ಪೊಲೀಸ್ ಕಮೀಷನರ್ ಶಶಿಕುಮಾರ್, ಮಾರ್ಚ್ 27ರಿಂದ ಏ. 1ರವರೆಗೆ ಮೂಡುಬಿದಿರೆಯಲ್ಲಿ ನಡೆದ ಸರಣಿ ದರೋಡೆ, ‌ಕಳ್ಳತನ ಪ್ರಕರಣ ಬೆನ್ನತ್ತಿದ್ದಾಗ ಒಂಭತ್ತು ಮಂದಿ ದರೋಡೆಕೋರರನ್ನು ಬಂಧಿಸಲು ಸಾಧ್ಯವಾಗಿತ್ತು. ಇವರು 4 ದೊಡ್ಡ ಗ್ಯಾಂಗ್ ಮೂಲಕ ದರೋಡೆ ನಡೆಸುತ್ತಿರುವುದು ತಿಳಿದು ಬಂದಿತ್ತು. ಇದೀಗ ಮತ್ತೆ ಆರು ಮಂದಿಯನ್ನು ಬಂಧಿಸಲಾಗಿದೆ. ಇದರಲ್ಲಿ ಮೂವರು ಪ್ರಮುಖ ಆರೋಪಿಗಳಾಗಿದ್ದಾರೆ ಎಂದರು.

ಮಂಗಳೂರಿನ ಫಳ್ನೀರ್ನಲ್ಲಿ ಕೆಲ ತಿಂಗಳ ಹಿಂದೆ ರೆಸ್ಟೋರೆಂಟ್ನಲ್ಲಿ ಸಮೋಸ ಬಿಸಿ ಇರಲಿಲ್ಲ ಎಂದು ನಡೆದ ವಾಗ್ವಾದದಲ್ಲಿ ವ್ಯಕ್ತಿಯೊಬ್ಬ ಪಿಸ್ತೂಲ್ನಿಂದ ಗುಂಡು ಹಾರಿಸಿದ್ದ. ಇದರಲ್ಲಿ ಬಳಕೆಯಾದ ಪಿಸ್ತೂಲನ್ನು ಹಾಸನದ ಹರೆಹಳ್ಳಿಯ ಮನೆ ದರೋಡೆ ವೇಳೆ ಕಳ್ಳತನ ಮಾಡಲಾಗಿತ್ತು. ಇಂದು ಬಂಧಿತರಾದ ದರೋಡೆಕೋರರಲ್ಲಿ ಓರ್ವನಾದ ಮನ್ಸೂರ್ ಬೋಳಿಯಾರ್ ಇದನ್ನು ಆ ವ್ಯಕ್ತಿಗೆ ಮಾರಾಟ ಮಾಡಿದ್ದ. ಗುಂಡು ಹಾರಿಸಿದ ಪ್ರಕರಣದಲ್ಲಿ ಆರೋಪಿಯನ್ನು ಈ ಮೊದಲೇ ಬಂಧಿಸಲಾಗಿತ್ತು.