- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ರಾಜ್ಯಕ್ಕೆ ಅಪ್ಪಳಿಸಲಿರುವ ‘ತೌಕ್ತೇ’ ಚಂಡಮಾರುತ: ಅನಾಹುತ ತಪ್ಪಿಸಲು ಸರ್ಕಾರದಿಂದ ಹೈ ಅಲರ್ಟ್

R Ashoka [1]ಬೆಂಗಳೂರು : ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾಗಿರುವ ತೌಕ್ತೇ ಚಂಡಮಾರುತವು ರಾಜ್ಯದ ಕಡೆಗೆ ಆಗಮಿಸಲಿದ್ದು, ಈ ಕುರಿತಂತೆ ಸಂಭವನೀಯ ಅನಾಹುತ ತಪ್ಪಿಸುವ ನಿಟ್ಟಿನಲ್ಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷರಾದ ಕಂದಾಯ ಸಚಿವ ಆರ್ ಅಶೋಕ್ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ತುರ್ತು ಸಭೆ ಕರೆದು ಮುನ್ನೆಚ್ಚರಿಕಾ ಕ್ರಮಗಳ ಕುರಿತಂತೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ನಂತರ ಸುದ್ದಿಗಾರರೊಂದಿಗೆ ಸಭೆಯ ವಿವರಗಳನ್ನ ಹಂಚಿಕೊಂಡು ಸಚಿವ ಆರ್ ಅಶೋಕ್ ಅವರು,”ರಾಜ್ಯದಿಂದ ಕೇವಲ 200 ಕಿ.ಮೀ. ದೂರದಲ್ಲಿರುವ ಚಂಡಮಾರುತ ತೌಕ್ತೇ ರಾಜ್ಯಕ್ಕೆ ಇಂದು ರಾತ್ರಿ ಪ್ರವೇಶಿಸಲಿದೆ. ಹವಾಮಾನ ಕೇಂದ್ರವು ಪ್ರತಿ ನಿಮಿಷ ಇದರ ಮಾನಿಟರ್ ಮಾಡುತ್ತಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡಕ್ಕೆ ಈ ಚಂಡಮಾರುತ ಅಪ್ಪಳಿಸಲಿದ್ದು, ಮೇ 18ರ ವರೆಗೂ ಇದರ ಪ್ರಭಾವ ಇರಲಿದೆ ಎಂದು ಅಂದಾಜಿಸಲಾಗಿದೆ. ಈ ನಿಟ್ಟಿನಲ್ಲಿ ಮೇ 18ರ ವರೆಗೂ ಈ ಭಾಗದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ”, ಎಂದು ತಿಳಿಸಿದರು.

“ಅದೇ ರೀತಿ ತಗ್ಗು ಪ್ರದೇಶದ ಜನರನ್ನ ತಕ್ಷಣ ಸ್ಥಳಾಂತರ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಲಾಗಿದೆ. ಕಳೆದ ಮೂರು ದಿನಗಳಿಂದ ಕಂದಾಯ ಇಲಾಖೆಯು ಆ ಭಾಗದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಈ ಕುರಿತಂತೆ ಮಾಹಿತಿ ಹಾಗೂ ದಿನದ ಅಲರ್ಟ್ ನೀಡುತ್ತಿತ್ತು. ಈಗಾಗಲೇ ಈ ಮೂರು ಜಿಲ್ಲೆಗಳಲ್ಲಿ 8 ರಿಲೀಫ್ ಕ್ಯಾಂಪ್ ಗಳನ್ನ ತೆರೆಯಲಾಗಿದೆ. ಇಲ್ಲಿ 10 ಸಾವಿರ ಜನರು ಉಳಿದುಕೊಳ್ಳಬಹುದಾಗಿದೆ. ಎನ್ ಡಿ ಆರ್ ಎಫ್ ನಿಧಿಯಿಂದ ನಿರ್ಮಿಸಲಾಗಿರುವ ಸುಸಜ್ಜಿತ ಭವನಗಳು ಇವುಗಳಾಗಿದ್ದು, ಈಗಾಗಲೇ ನಿರಾಶ್ರಿತರಿಗೆ ಬೇಕಾದ ಎಲ್ಲಾ ಸೌಕರ್ಯಗಳನ್ನ ಒದಗಿಸಲು ತಯಾರಿ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ”, ಎಂದರು.

ಈಗಾಗಲೇ ಎರಡು ಎನ್ ಡಿ ಆರ್ ಎಫ್ ತಂಡಗಳು ಬಂದಿಳಿದಿದ್ದು, ದಕ್ಷಿಣ ಕನ್ನಡ ಹಾಗೂ ಕೊಡಗಿನಲ್ಲಿ ಸನ್ನದ್ಧವಾಗಿವೆ. ಎಸ್ ಡಿ ಆರ್ ಎಫ್ ತಂಡವಾದ ಪೊಲೀಸ್, ಅಗ್ನಿಶಾಮಕ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸಿದ್ಧವಾಗಿರುವಂತೆ ಸೂಚನೆ ನೀಡಲಾಗಿದ್ದು,ಈ ಮೂರು ಜಿಲ್ಲೆಯ ಎಲ್ಲಾ ಸರ್ಕಾರಿ ಅಧಿಕಾರಿಗಳ ರಜೆಗಳನ್ನ ರದ್ದುಗೊಳಿಸಲಾಗಿದೆ. ಯಾವುದೇ ಅನಾಹುತವಾಗದಂತೆ ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲಾ ಮುನ್ನೆಚ್ಚರಿಕೆಗಳನ್ನ ತೆಗೆದುಕೊಂಡಿದ್ದು, ಇದಕ್ಕಾಗಿ ಅಗತ್ಯವಿರುವ ಹಣವನ್ನ ಮೀಸಲಿಡಲಾಗಿದೆ. ಉಡುಪಿಯಲ್ಲಿ 23 ಕೋಟಿ, ಉತ್ತರ ಕನ್ನಡದಲ್ಲಿ 60 ಕೋಟಿ ಹಾಗೂ ದಕ್ಷಿಣ ಕನ್ನಡದಲ್ಲಿ 12 ಕೋಟಿ ಹಣ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಮೀಸಲಿದೆ. ಇದನ್ನ ಬಳಸಿಕೊಂಡು ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಲ್ಲಾ ಅಗತ್ಯಕ್ರಮಗಳನ್ನ ತೆಗೆದುಕೊಳ್ಳಬೇಕು ಎಂದು ಆದೇಶ ನೀಡಲಾಗಿದೆ”, ಎಂದು ತಿಳಿಸಿದರು.

ವರದಿ: ಶಂಭು.
ಮೆಗಾಮೀಡಿಯಾ ನ್ಯೂಸ್‌ ಬ್ಯೂರೋ.