- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕರ್ನಾಟಕದ ಕೋವಿಡ್ ಲಾಕ್ ಡೌನ್ ಪ್ಯಾಕೇಜ್ ಇಲ್ಲಿದೆ ನೋಡಿ

yedyurappa [1]ಬೆಂಗಳೂರು: ಕೊರೋನಾ ಎರಡನೇ ಅಲೆ ತೀವ್ರವಾಗಿ ಹೆಚ್ಚಳವಾಗಿದ್ದರಿಂದ ಲಾಕ್ ಡೌನ್ ಮಾಡುವುದು ಅನಿವಾರ್ಯವಾಗಿತ್ತು. ಈ ಲಾಕ್ ಡೌನ್ ನಿಂದ ಹಲವು ಅಸಂಘಟಿತ ವಲಯಗಳಿಗೆ, ರೈತರಿಗೆ, ದಿನಗೂಲಿ ನೌಕರರಿಗೆ, ಬಡವರು-ನಿರ್ಗತಿಕರಿಗೆ ತೀವ್ರ ಸಂಕಷ್ಟವಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಸುಮಾರು 1,250 ಕೋಟಿ ರೂಪಾಯಿಗೂ ಅಧಿಕ ವಿಶೇಷ ಪರಿಹಾರ ಪ್ಯಾಕೇಜ್ ನ್ನು ವಿವಿಧ ವರ್ಗಗಳ ಹಿತರಕ್ಷಣೆಗೆ ಬಿಡುಗಡೆ ಮಾಡಿದೆ.

ಮುಖ್ಯಮಂತ್ರಿಗಳು ಇಂದು ಪ್ರಕಟಿಸಿದ ಪರಿಹಾರ ಪ್ಯಾಕೇಜ್  ಇಲ್ಲಿದೆ ನೋಡಿ. 

*ಹೂವು ಬೆಳೆಯುವ ರೈತರಿಗೆ ಹಾನಿ ಆಗಿದ್ದರೆ ಹೆಕ್ಟೇರ್‌ಗೆ ₹10,000 ನೀಡಲಾಗುವುದು. ಇದರಿಂದ 20 ಸಾವಿರ ರೈತರಿಗೆ ಅನುಕೂಲವಾಗಲಿದ್ದು, ₹12.73 ಕೋಟಿ ಖರ್ಚಾಗುತ್ತದೆ.

*ಹಣ್ಣು–ತರಕಾರಿ ಬೆಳೆಯುವ ರೈತರು ಹಾನಿಗೆ ಒಳಗಾಗಿದ್ದರೆ ಹೆಕ್ಟೇರ್‌ಗೆ ₹10,000 ಪರಿಹಾರ ನೀಡಲಾಗುವುದು. ಸುಮಾರು 69 ಸಾವಿರ ರೈತರಿಗೆ ಪ್ರಯೋಜನ ಆಗಲಿದ್ದು, ಇದಕ್ಕೆ ₹69 ಕೋಟಿ ಖರ್ಚಾಗಲಿದೆ.

*ಆಟೋ, ಟ್ಯಾಕ್ಸಿ, ಮ್ಯಾಕ್ಷಿಕ್ಯಾಬ್‌ಗಳ ಚಾಲಕರಿಗೆ ತಲಾ ₹3,000. ಇದಕ್ಕೆ ₹63 ಕೋಟಿ ಖರ್ಚಾಗಲಿದೆ.

*ಕಟ್ಟಡ ಕಾರ್ಮಿಕರಿಗೆ ತಲಾ ₹3,000 ನೀಡಲಾಗುವುದು. ಇದಕ್ಕೆ ₹494 ಕೋಟಿ ಖರ್ಚಾಗುತ್ತದೆ.

*ಅಸಂಘಟಿತ ವಲಯದ ಕಾರ್ಮಿಕರಿಗೆ ತಲಾ ₹2,000 ನೀಡಲಾಗುವುದು. ಇದರಲ್ಲಿ ಅಗಸರು, ಕ್ಷೌರಿಕರು ಸೇರಿ ಹಲವು ಕಸುಬುಗಳನ್ನು ಗುರುತಿಸಲಾಗಿದೆ. ಸುಮಾರು 3.04 ಲಕ್ಷ ಜನರಿಗೆ ಇದರ ಪ್ರಯೋಜನ ಸಿಗಲಿದ್ದು, ₹60.89 ಕೋಟಿ ಖರ್ಚಾಗಲಿದೆ

* ಬೀದಿ ವ್ಯಾಪಾರಿಗಳಿಗೆ ₹ 2,000 ನೀಡಲಾಗುವುದು. 2.20 ಲಕ್ಷ ಇದರ ಪ್ರಯೋಜನ ಸಿಗಲಿದ್ದು, ₹44 ಕೋಟಿ ನೀಡಲಾಗುವುದು.

*ಕಲಾವಿದರು ಮತ್ತು ಕಲಾತಂಡಗಳಿಗೆ ₹3,000 ನೀಡಲಾಗುವುದು. 16,100 ಜನರಿಗೆ ಇದರ ಪ್ರಯೋಜನ ಸಿಗಲಿದೆ. ₹4.82 ಕೋಟಿ ಖರ್ಚಾಗಲಿದೆ.

*ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಪಡೆದಿರುವ ಅಲ್ಪಾವಧಿ ಮತ್ತು ದೀರ್ಘಾವಧಿ ಸಾಲ ಕಂತಿನ ಮರುಪಾವತಿಯನ್ನು 31.07.21 ರವರೆಗೆ ಅಂದರೆ ಮೂರು ತಿಂಗಳು ವಿಸ್ತರಿಸಲಾಗಿದೆ. ಈ ಅವಧಿಯಲ್ಲಿನ ಬಡ್ಡಿ ಮೊತ್ತವನ್ನು ಸರ್ಕಾರವೇ ಪಾವತಿಸಲಿದೆ. ಇದಕ್ಕೆ ₹134.38 ಕೋಟಿ ಖರ್ಚಾಗಲಿದೆ.

*ಪಿಎಂ ಗರೀಬ್ ಕಲ್ಯಾಣ್‌ ಅನ್ನ ಯೋಜನೆ ಅಡಿ ಬಿಪಿಎಲ್‌ ಪಡಿತರ ಚೀಟಿ ಹೊಂದಿರುವವರಿಗೆ ಮೇ ಮತ್ತು ಜೂನ್‌ ತಿಂಗಳು ತಲಾ 5 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುವುದು.

*ರಾಜ್ಯ ಸರ್ಕಾರದ ವತಿಯಿಂದ ಬಿಪಿಎಲ್‌ ಪಡಿತರ ಚೀಟಿ ಹೊಂದಿರುವವರಿಗೆ ತಲಾ 10 ಕೆ.ಜಿ ಧಾನ್ಯ ಮತ್ತು ಎಪಿಎಲ್‌ ಕಾರ್ಡ್‌ದಾರರಿಗೆ ₹15 ರ ದರದಲ್ಲಿ 10 ಕೆ.ಜಿ ಆಹಾರಧಾನ್ಯವನ್ನು ನೀಡಲಾಗುವುದು.

* ಬಿಬಿಎಂಪಿ ವ್ಯಾಪ್ತಿಯಲ್ಲಿ ಇಂದಿರಾ ಕ್ಯಾಂಟೀನ್‌ನಲ್ಲಿ ಬಡವರಿಗೆ ಉಚಿತ ಆಹಾರ ವಿತರಿಸಲಾಗುವುದು. ಪ್ರತಿ ದಿನ 6 ಲಕ್ಷ ಜನರಿಗೆ ಇದರ ಪ್ರಯೋಜನ ಸಿಗಲಿದೆ. ಇದಕ್ಕೆ ₹25 ಕೋಟಿ ಖರ್ಚಾಗಲಿದೆ

* ಕೋವಿಡ್‌ ಮೊದಲ ಮತ್ತು ಎರಡನೇ ಅಲೆಯ ಸಂದರ್ಭದಲ್ಲಿ ರಾಜ್ಯ ಸರ್ಕಾರ 2.06 ಲಕ್ಷ ಕೋವಿಡ್‌ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗಿದ್ದು, ಸರ್ಕಾರ ₹956 ಕೋಟಿ ಭರಿಸಿದೆ.

*18 ರಿಂದ 44 ವರ್ಷದವರಿಗೆ ಲಸಿಕೆ ಉಚಿತವಾಗಿ ನೀಡಲಿದ್ದು, ಇದಕ್ಕಾಗಿ 3 ಕೋಟಿ ಡೋಸ್‌ ಲಸಿಕೆಗೆ ಬೇಡಿಕೆ ಸಲ್ಲಿಸಲಾಗಿದ್ದು, ₹1000 ಕೋಟಿ ಖರ್ಚು ಮಾಡಲಾಗುತ್ತಿದೆ. 45 ವರ್ಷ ಮೇಲ್ಪಟ್ಟವರಿಗೆ ಕೇಂದ್ರ ಸರ್ಕಾರವೇ ಉಚಿತವಾಗಿ ಲಸಿಕೆ ನೀಡುತ್ತದೆ.

*ಎಸ್‌ಡಿಆರ್‌ಎಫ್‌ ಹಣದಲ್ಲಿ ಪ್ರತಿ ಗ್ರಾಮ ಪಂಚಾಯತಿಗೆ ₹50 ಸಾವಿರ ನೀಡಲಾಗುತ್ತಿದ್ದು, ಒಟ್ಟು 6000 ಗ್ರಾಮ ಪಂಚಾಯತಿಗಳಿಗೆ ಇದರ ಲಾಭ ಸಿಗಲಿದೆ.

ಇನ್ನು ಮೂರು ದಿನಗಳಲ್ಲಿ 2150 ವೈದ್ಯರನ್ನು ನೇಮಕ ಮಾಡಲು ತೀರ್ಮಾನಿಸಲಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು.

ಲೈನ್‌ಮನ್‌ಗಳು, ಗ್ಯಾಸ್‌ ಸಿಲಿಂಡರ್‌ ಮನೆಗಳಿಗೆ ಸಾಗಿಸುವವರು ಮತ್ತು ಶಿಕ್ಷಕರನ್ನು ಕೊರೊನಾ ಮುಂಚೂಣಿ ಕಾರ್ಯಕರ್ತರು ಎಂದು ಪರಿಗಣಿಸಿ ಅವರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದೇ ಇದ್ದರೂ ಸಂಕಷ್ಟದಲ್ಲಿ ಇರುವವರ ನೆರವಿಗೆ ಬಂದಿದ್ದೇವೆ. ನಿಮ್ಮ ಜತೆ ನಾವಿದ್ದೇವೆ. ಯಾರೂ ಧೈರ್ಯಗೆಡಬೇಕಿಲ್ಲ. ಫಲಾನುಭವಿಗಳ ಬ್ಯಾಂಕ್‌ ಖಾತೆಗಳಿಗೆ ಹಣವನ್ನು ನೇರವಾಗಿ ಪಾವತಿ ಮಾಡಲಾಗುವುದು ಎಂದರು.

ಮೇ 24 ರ ನಂತರ ಲಾಕ್‌ಡೌನ್ ಮುಂದುವರಿಸುವ ಬಗ್ಗೆ ಮೇ 23 ರಂದು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದೂ ಅವರು ಹೇಳಿದರು.