- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಉಡುಪಿ ಜಿಲ್ಲೆಯಲ್ಲಿ ಜೂ.7ರ ವರೆಗೆ ಮದುವೆಗೆ ಅನುಮತಿ ಇಲ್ಲ

Udupi-DC [1]ಉಡುಪಿ :   ಮೇ 25ರಿಂದ ಜೂ.7ರ ವರೆಗೆ  ಉಡುಪಿ ಜಿಲ್ಲೆಯಲ್ಲಿ ಮದುವೆಗೆ ಅನುಮತಿ ನೀಡುವುದಿಲ್ಲ. ಈವರೆಗೆ ಅನುಮತಿ ನೀಡಿದ ಮದುವೆಗಳು ಮಾತ್ರ ನಡೆಯಲಿವೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉಸ್ತುವಾರಿ ಸಚಿವರೊಂದಿಗೆ ನಡೆಸಿದ ವೀಡಿಯೊ ಕಾನ್ಫರೆನ್ಸ್ ನಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಮದುವೆಯಿಂದ ಕೊರೋನ ಸೋಂಕು ಹೆಚ್ಚಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿಈ ನಿರ್ಧಾರ ಕೈಗೊಳ್ಳಲಾಗಿದೆ.  ಮದುವೆ ಆಗಲು ನಿರ್ಧಾರ ಮಾಡಿದವರು ಅದನ್ನು ಮುಂದೂಡಬೇಕು. ಸಾರ್ವಜನಿಕರು ಸಹಕಾರ ನೀಡಬೇಕು. ಈ ಸಂಬಂಧ ತಹಶೀಲ್ದಾರರುಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ರೀತಿ ಮೆಹಂದಿ, ಬೀಗರ ಊಟ ಕಾರ್ಯಕ್ರಮಗಳನ್ನು ಮಾಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು.  ಮದುವೆಗೆ ನೀಡಿದ ಅನುಮತಿಯಲ್ಲಿ ನಿಶ್ಚಿತಾರ್ಥ ಮಾಡಲು  ಅವಕಾಶ ಇರುವುದಿಲ್ಲ. ಅದೇ ಕ್ರಿಮಿನಲ್ ಮೊಕದ್ದಮೆ ಕಾರ್ಯಕ್ರಮ ಆಯೋಜಕರ ವಿರುದ್ಧ ಮಾತ್ರವಲ್ಲ ಅದರಲ್ಲಿ ಭಾಗವಹಿಸಿದವರ ವಿರುದ್ಧವೂ ಹಾಕಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಚಂಡಮಾರುತದ ಪರಿಣಾಮ ಜಿಲ್ಲೆಯಲ್ಲಿ ಇಲೆಕ್ಟ್ರಿಕಲ್ ಸೊತ್ತುಗಳಿಗೆ ಸಾಕಷ್ಟು ಹಾನಿಯಾಗಿದ್ದು, ಈ ಹಿನ್ನೆಲೆಯಲ್ಲಿ ಮೇ 26ರಂದು ಬೆಳಗ್ಗೆ 6ಗಂಟೆಯಿಂದ 10 ಗಂಟೆಯವರೆಗೆ ಇಲೆಕ್ಟ್ರಿಕಲ್ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಗಾಳಿಮಳೆಯಿಂದ ವಿದ್ಯುತ್ ಪರಿಕರಗಳು ಹಾನಿಯಾಗಿದ್ದರೆ ಆ ದಿನ ಅವುಗಳನ್ನು ಅಂಗಡಿಗಳಿಂದ ಖರೀದಿಸಬಹುದಾಗಿದೆ. ಇಲೆಕ್ಟ್ರಾನಿಕ್ಸ್ ಅಂಗಡಿ ತೆರೆಯಲು ಅವಕಾಶ ಇಲ್ಲ ಎಂದರು.

ಜೂ.7ರವರೆಗೆ ವಿನಾಕಾರಣ ಓಡಾಡುವವರ ವಾಹನಗಳನ್ನು ಮುಟ್ಟು ಗೋಲು ಹಾಕಲಾಗುವುದು. ಅಗತ್ಯ ವಸ್ತುಗಳ ನೆಪದಲ್ಲಿ ಯಾರು ಕೂಡ ಹೊರಗಡೆ ಬರಬಾರದು. ಅಂತವರ ವಿರುದ್ಧ ಕಠಿಣ ಕ್ರಮ ಜರಗಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.