- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಬ್ಲ್ಯಾಕ್ ಫಂಗಸ್ ಗೆ ಚಿಕಿತ್ಸೆ ನೀಡಲು ಬೌರಿಂಗ್ ಆಸ್ಪತ್ರೆಯಲ್ಲಿ 100 ಹಾಸಿಗೆ ಮೀಸಲು

R Ashoka [1]ಬೆಂಗಳೂರು : ಬ್ಲ್ಯಾಕ್ ಫಂಗಸ್ ಗೆ ತುತ್ತಾದವರಿಗೆ ಚಿಕಿತ್ಸೆ ನೀಡಲು ಬೌರಿಂಗ್ ಆಸ್ಪತ್ರೆಯಲ್ಲಿ ನೂರು ಹಾಸಿಗೆಗಳನ್ನ ಮೀಸಲಿಡಲಾಗುತ್ತದೆ ಎಂದು ಕಂದಾಯ ಸಚಿವ ಆರ್ ಅಶೋಕ ತಿಳಿಸಿದರು.

ಬೌರಿಂಗ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದರ ಜೊತೆಗೆ ಬ್ಲ್ಯಾಕ್ ಫಂಗಸ್‍ಗೆ ತುತ್ತಾದವರ ಜೊತೆ ವೀಡಿಯೋ ಸಂವಾದದ ಮೂಲಕ ಅವರ ಆರೊಗ್ಯ ವಿಚಾರಿಸಿದರು. ಆ ನಂತರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು,” ಮ್ಯೂಕೋರ್ ಮೈಕೊಸಿಸ್ ಕಾಯಿಲೆಗೆ ತುತ್ತಾದವರಿಗೆ ಚಿಕಿತ್ಸೆ ನೀಡಲು ಒಟ್ಟು 200 ಹಾಸಿಗೆಗಳನ್ನ ಮೀಸಲಿಡಲಾಗಿದೆ. ಅದರಲ್ಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ 100 ಹಾಸಿಗೆಗಳನ್ನ ಸೋಂಕಿತರಿಗೆ ಮೀಸಲಾಗಿಡಲಾಗುವುದು. ಹಾಗೆಯೇ ಸೋಂಕಿನಿಂದ ಗುಣಮುಖರಾದವರಿಗೆ ಬೌರಿಂಗ್ ಆಸ್ಪತ್ರೆಯಲ್ಲಿ 100 ಹಾಸಿಗೆಗಳನ್ನ ಮೀಸಲಿಡಲಾಗುತ್ತದೆ. ಮಹಾರಾಷ್ಟ್ರ ಹಾಗೂ ಗುಜರಾತ್ ನ ಪರಿಸ್ಥಿತಿಯನ್ನ ಗಮನದಲ್ಲಿಟ್ಟುಕೊಂಡು ಹೇಳುವುದಾದರೆ ಬ್ಲಾಕ್ ಫಂಗಸ್ ಗೆ ತುತ್ತಾದವರಿಗೆ ಚಿಕಿತ್ಸೆ ನೀಡಲು ಇನ್ನೂ ಹೆಚ್ಚಿನ ಬೆಡ್ ಗಳ ಅವಶ್ಯಕತೆಯಿದೆ,” ಎಂದು ತಿಳಿಸಿದರು.

ಬ್ಲಾಕ್ ಫಂಗಸ್ ಗೆ ತುತ್ತಾದವರಿಗೆ ನೀಡುವ ಔಷಧಿಯ ಕುರಿತಂತೆ ಉತ್ತರಿಸಿದ ಆರ್ ಅಶೋಕ, “ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷನಾಗಿ ಈ ಕಾಯಿಲೆಯ ಚಿಕಿತ್ಸೆಗೆ ಹೆಚ್ಚಿನ ಲಿಪೊಸೊಮಲ್ ಆಂಫೋಟೆರಿಸಿನ್ ಔಷಧಿಯ ಅವಶ್ಯಕತೆಯಿದೆ ಎಂದು ಕೇಂದ್ರ ಸಚಿವ ಸದಾನಂದಗೌಡ ಅವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದೇನೆ. ಒಬ್ಬ ರೋಗಿಗೆ ಕನಿಷ್ಠ 70 ವಯಲ್ ಗಳು ಬೇಕಾಗುತ್ತದೆ. ಅದು ಗರಿಷ್ಠ 360ಕ್ಕೂ ತಲುಪಬಹುದು. ಆ ನಿಟ್ಟಿನಲ್ಲಿ ಅಂದಾಜು ವಾರಕ್ಕೆ 9800 ವಯಲ್ ಗಳನ್ನ ನೀಡಬೇಕು ಎಂದು ಕೇಳಿಕೊಂಡಿದ್ದೇನೆ”, ಎಂದರು.

“ಮೂರನೇ ಅಲೆಯು ಮಕ್ಕಳಿಗೆ ಹೆಚ್ಚು ತಗುಲಬಹುದು ಎಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ ಮಕ್ಕಳ ಆಸ್ಪತ್ರೆಗಳನ್ನ ಸಿದ್ಧಪಡಿಸಲು ಪ್ರಯತ್ನಗಳು ಆರಂಭವಾಗಿವೆ. ಈಗಾಗಲೇ ಪದ್ಮನಾಭನಗರದಲ್ಲಿ ಸೋಂಕಿಗೆ ತುತ್ತಾದ ಮಕ್ಕಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆ ಸಿದ್ಧಪಡಿಸಲು ತಯಾರಿ ನಡೆಯುತ್ತಿದೆ. ಈ ರೀತಿಯ ಸೌಲಭ್ಯವನ್ನ ಬೆಂಗಳುರಿನ ವಿವಿಧ ಬಾಗಗಳಲ್ಲಿಯೂ ಕೈಗೊಳ್ಳುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರಿಗೆ ಸೂಚಿಸಿದ್ದೇನೆ”, ಎಂದರು.

ಸಧ್ಯ ಬೆಂಗಳೂರಿನಲ್ಲಿ ದಿನಕ್ಕೆ ಸರಿ ಸುಮಾರು 7000 ಪ್ರಕರಣಗಳು ದಾಖಲಾಗುತ್ತಿವೆ. ಮುಂದಿನ ಹತ್ತು ದಿನಗಳಲ್ಲಿ ಈ ಸಂಖ್ಯೆ 2000ಕ್ಕೆ ಇಳಿಯುವ ಸಾಧ್ಯತೆಯಿದೆ. ಕೋವಿಡ್ ಸೋಂಕು ನಿಯಂತ್ರಣಕ್ಕೆ ಬರುವವರೆಗೂ ನಾವು ಎಲ್ಲ ಅಗತ್ಯ ಕ್ರಮಗಳನ್ನ ಕೈಗೊಳ್ಳುತ್ತೇವೆ, ಎಂದು ಹೇಳಿದರು.

ವರದಿ : ಶಂಭು.
ಮೆಗಾಮೀಡಿಯಾ ನ್ಯೂಸ್ ಬ್ಯೂರೋ.