- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

107 ವರ್ಷದ ಈ ಅಜ್ಜಿ ಕೊರೊನಾ ಜಯಿಸಿದ್ದು ಹೇಗೆ ಗೊತ್ತಾ?

kalamma [1]ಬೆಂಗಳೂರು : ಚಿಕ್ಕಬಳ್ಳಾಪುರ ಮೂಲದ 107 ವರ್ಷದ ವೃದ್ಧೆಯೊಬ್ಬರು ಸೋಂಕಿನ ವಿರುದ್ಧ ಹೋರಾಡಿ ಸಂಪೂರ್ಣ ಗುಣಮುಖರಾಗಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟತಾಲೂಕಿನ ಯನ್ನೂರು ಗ್ರಾಮದ ಕಾಳಮ್ಮ (107) ಸೋಂಕು ಗೆದ್ದವರು.

ನಗರದ ಶೇಷಾದ್ರಿಪುರದ ಅಪೋಲೋ ಆಸ್ಪತ್ರೆಯಲ್ಲಿ ಶತಾಯುಷಿ ಕಾಳಮ್ಮ ಅವರಿಗೆ ಚಿಕಿತ್ಸೆ ನೀಡಿದ್ದು, ಸೋಂಕಿನಿಂದ ಸಂಪೂರ್ಣ ಗುಣಮುಖರಾದ ಹಿನ್ನೆಲೆಯಲ್ಲಿ ಸೋಮವಾರ ಆಸ್ಪತ್ರೆಯಿಂದ ಡಿಸ್ಚಾಜ್‌ ಮಾಡಿ ಮನೆಗೆ ಕಳುಹಿಸಲಾಯಿತು. ವೈದ್ಯರ ಚಿಕಿತ್ಸೆ ಹಾಗೂ ಇಚ್ಛಾಶಕ್ತಿಯಿಂದ ಸೋಂಕಿನ ವಿರುದ್ಧ ಹೋರಾಡಿ ಗುಣಮುಖರಾಗಿರುವ ಕಾಳಮ್ಮ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ.

ಯನ್ನೂರಿನಲ್ಲಿ ನೆಲೆಸಿರುವ ಕಾಳಮ್ಮ ಅವರಿಗೆ ಏ.23ರಂದು ಜ್ವರ ಕಾಣಿಸಿಕೊಂಡಿತ್ತು.  ಡಾ.ವಿ.ಶಂಕರ್‌ ಸೂಚನೆ ಮೇರೆಗೆ ಕುಟುಂಬದ ಸದಸ್ಯರು ಡೋಲೋ ಮಾತ್ರೆ ನೀಡಿದ್ದಾರೆ. ಜ್ವರದ ನಡುವೆಯೂ ಐದಾರು ದಿನ ಲವಲವಿಕೆಯಿಂದ ಇದ್ದ ಕಾಳಮ್ಮ ಅವರಿಗೆ ಬಳಿಕ ಆಕ್ಸಿಜನ್‌ ಸ್ಯಾಚುರೇಶನ್‌ 72ಕ್ಕೆ ಇಳಿಕೆಯಾಗಿದೆ. ತಕ್ಷಣ ಅವರನ್ನು ಯನ್ನೂರಿನಿಂದ ಅಪೋಲೋ ಆಸ್ಪತ್ರೆಗೆ ಕರೆತಂದಿದ್ದು, ಆಕ್ಸಿಜನ್‌ ಪೂರೈಸಲಾಗಿತ್ತು.

ಡಾ.ವಿ.ಶಂಕರ್‌ ಬೇರೆ ಯಾರು ಅಲ್ಲ ಶತಾಯುಷಿ ಕಾಳಮ್ಮ ಅವರ ಮಗನೆ ಆಗಿದ್ದರು.  ಅವರಿಗೆ ಅಪೋಲೋ ಆಸ್ಪತ್ರೆಯ ಹಿರಿಯ ವೈದ್ಯ ಡಾ.ವಿ.ಶಂಕರ್‌ ಸೇರಿದಂತೆ ಎಂಟು ಮಕ್ಕಳು.

ಅಪೋಲೋ ಆಸ್ಪತ್ರೆಯಲ್ಲಿ ಆರೋಗ್ಯದಲ್ಲಿ ತೀವ್ರ ಏರುಪೇರು ಉಂಟಾದ ಹಿನ್ನೆಲೆಯಲ್ಲಿ 10 ದಿನಗಳ ಕಾಲ ಐಸಿಯುನಲ್ಲಿರಿಸಿ ಚಿಕಿತ್ಸೆ ನೀಡಿದ್ದರು. ದಿನ ಕಳೆದಂತೆ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರ ಮಾಡಲಾಗಿತ್ತು. ಇದಾದ 10 ದಿನಗಳ ಬಳಿಕ ಕಾಳಮ್ಮ ಅವರು ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ.

ಮೊದಲಿನಿಂದಲೂ ಅವರು ಹಳ್ಳಿಯಲ್ಲೇ ಇದ್ದುದರಿಂದ ಆರೋಗ್ಯವಾಗಿದ್ದರು. ರೋಗನಿರೋಧಕ ಶಕ್ತಿ ಹೆಚ್ಚಿದ್ದರಿಂದ ಬೇಗ ಸೋಂಕಿನಿಂದ ಗುಣಮುಖರಾಗಿದ್ದಾರೆ. ನಮ್ಮ ತಾಯಿಗೆ ಎಂಟು ಮಕ್ಕಳು. ಮೊಮ್ಮಕ್ಕಳು, ಮರಿ ಮಕ್ಕಳು ಸೇರಿದಂತೆ ಒಟ್ಟು 38 ಸದಸ್ಯರ ಕುಟುಂಬ. ಅವರು  ಸೋಂಕಿನಿಂದ ಗುಣಮುಖರಾಗಿದ್ದು ಇಡೀ ಕುಟುಂಬಕ್ಕೆ ಸಂತಸ ತಂದಿದೆ.

ಈ ಮೂಲಕ ರಾಜ್ಯದಲ್ಲಿ ಕೊರೋನಾ ಜಯಿಸಿದ ಎರಡನೇ ಹಿರಿಯ ವ್ಯಕ್ತಿ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಸೋಂಕು ಜಯಿಸಿದ್ದ ಚಿತ್ರದುರ್ಗ ಮೂಲದ ಸಿದ್ದಮ್ಮ (110) ಎಂಬುವವರು ರಾಜ್ಯದ ಅತಿ ಹಿರಿಯ ವ್ಯಕ್ತಿಯಾಗಿದ್ದಾರೆ.