- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಉತ್ಸವಗಳು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಅನಾವರಣಗೊಳಿಸುತ್ತವೆ : ಸಿ.ಟಿ. ರವಿ

Karavali Utsav 2012 [1]ಮಂಗಳೂರು :ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಉನ್ನತ ಶಿಕ್ಷಣ ಸಚಿವ ಸಿ.ಟಿ. ರವಿ ಶುಕ್ರವಾರ ನಗರದ ಕರಾವಳಿ ಉತ್ಸವ ಮೈದಾನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ಹಬ್ಬ ಕರಾವಳಿ ಉತ್ಸವಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ದಕ್ಷಿಣ ಕನ್ನಡ ಜಿಲ್ಲೆಯು ಹಲವು ಸಾಂಸ್ಕೃತಿಕ ಆಚರಣೆಗಳನ್ನು ಹೊಂದಿರುವ ಪ್ರದೇಶವಾಗಿದ್ದು ಉತ್ಸವಗಳು ನಮ್ಮಲ್ಲಿ ಸಾಮುದಾಯಿಕ ಪ್ರಜ್ಞೆಯನ್ನು ಜಾಗೃತಗೊಳಿಸುತ್ತವೆ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಅನಾವರಣಗೊಳಿಸುತ್ತವೆ. ಈ ಉದ್ದೇಶದಿಂದಲೇ ನಮ್ಮ ಪೂರ್ವಿಕರು ಉತ್ಸವಗಳನ್ನು ಆಯೋಜಿಸಿದ್ದಾರೆ ಎಂದು ಅವರು ಹೇಳಿದರು.

ದ.ಕನ್ನಡ ಯಕ್ಷಗಾನ, ನಾಗಾರಾಧನೆ, ಭೂತಾರಾಧನೆ ಸೇರಿದಂತೆ ವಿವಿಧ ಆಚರಣೆ, ಉತ್ಸವ ಮೊದಲಾದ ಸಾಂಸ್ಕೃತಿಕ ವೈಭವ ಹೊಂದಿರುವ ನಾಡು. ತುಳು, ಕನ್ನಡ, ಬ್ಯಾರಿ, ಕೊಂಕಣಿ ಭಾಷೆಗಳೊಂದಿಗೆ ವೈವಿಧ್ಯತೆಯಲ್ಲಿ ಏಕತೆ ಹೊಂದಿರುವ ನೆಲ. ಇಲ್ಲಿನ ಸಾಂಸ್ಕೃತಿಕ ಪರಂಪರೆ ಉಳಿಸಿ, ಬೆಳೆಸುವ, ಜಗದಗಲಕ್ಕೂ ಪಸರಿಸುವ ನಿಟ್ಟಿನಲ್ಲಿ ಕರಾವಳಿ ಉತ್ಸವ ಪೂರಕವಾಗಿ ಮೆರೆಯಲಿ ಎಂದು ಅವರು ಹಾರೈಸಿದರು.

ಸಮಾರಂಭದಲ್ಲಿ ವಿಧಾನಸಭೆಯ ಉಪ ಸಭಾಧ್ಯಕ್ಷ ಎನ್‌. ಯೋಗೀಶ್‌ ಭಟ್‌, ಶಾಸಕರಾದ ಜೆ. ಕೃಷ್ಣ ಪಾಲೆಮಾರ್‌, ವಿಧಾನ ಪರಿಷತ್‌ ಶಾಸಕ ಕೆ. ಮೋನಪ್ಪ ಭಂಡಾರಿ, ಮೇಯರ್‌ ಗುಲ್ಜಾರ್‌ಭಾನು, ಉಪಮೇಯರ್‌ ಅಮಿತಕಲಾ, ಪ.ವಲಯ ಐಜಿಪಿ ಪ್ರತಾಪ್‌ ರೆಡ್ಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌. ರಮೇಶ್‌, ಮೀನುಗಾರಿಕಾ ನಿಗಮದ ಅಧ್ಯಕ್ಷ ನಿತಿನ್‌ ಕುಮಾರ್‌, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್‌, ಮನಪಾ ಆಯುಕ್ತ ಡಾ| ಹರೀಶ್‌ ಕುಮಾರ್‌, ಮಂಗಳೂರು ಸಹಾಯಕ ಆಯುಕ್ತ ಡಾ| ವೆಂಕಟೇಶ್‌ ಮೊದಲಾದವರು ಉಪಸ್ಥಿತರಿದ್ದರು.