ಬೆಂಗಳೂರು: ರಾಜ್ಯದ ವಿವಿಧೆಡೆಗಳಲ್ಲಿ ಇರುವ ಇಎಸ್‌ಐ ಆಸ್ಪತ್ರೆಗಳಲ್ಲಿ ಕೋವಿಡ್-19 ಸೋಂಕಿತರಿಗೆ ಆದ್ಯತೆ ಮೇಲೆ ಚಿಕಿತ್ಸೆ ನೀಡಲಾಗುತ್ತಿದ್ದು, ಆಸ್ಪತ್ರೆಗಳ ಅಗತ್ಯತೆಗಳ ಪೂರೈಕೆಗೆ ಅನುವಾಗುವಂತೆ ಜಿಲ್ಲಾ ಮಟ್ಟದ ಸಮಿತಿಗಳನ್ನು ನೇಮಿಸುವಂತೆ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬುಧವಾರ ನಗರದ ಇಂದಿರಾನಗರದಲ್ಲಿ ಇರುವ 300 ಹಾಸಿಗೆಗಳ ಇಎಸ್‌ಐ ಆಸ್ಪತ್ರೆಗೆ ಭೇಟಿ ನೀಡಿ ಕೋವಿಡ್-19 ಸೋಂಕಿತರಿಗೆ ನೀಡಲಾಗುತ್ತಿರುವ ಚಿಕಿತ್ಸೆ ಬಗ್ಗೆ ಪರಿಶೀಲನೆ ನಡೆಸಿದ ಅವರು, ವಿವಿಧ ಜಿಲ್ಲೆಗಳಲ್ಲಿ ಇರುವ ಇಎಸ್‌ಐ ಆಸ್ಪತ್ರೆಗಳಲ್ಲಿ ಪ್ರಸ್ತುತ ಲಭ್ಯ ಇರುವ ಸೌಕರ್ಯಗಳನ್ನು ಬಳಸಿಕೊಂಡು ಕರೋನಾ ಸೋಂಕಿತರಿಗೆ ಉತ್ತಮ ಚಿಕಿತ್ಸೆ ನೀಡಬೇಕು ಮತ್ತು ಅಗತ್ಯ ಇರುವ ವೈದ್ಯಕೀಯ ವ್ಯವಸ್ಥೆ ಬಗ್ಗೆ ಸಮಿತಿಗಳ ಮೂಲಕ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸೂಚಿಸಿದರು.
ಕೋವಿಡ್ ಜಾಗತಿಕ ಸಾಂಕ್ರಾಮಿಕ ಹಿನ್ನೆಲೆಯಲ್ಲಿ ಅಗತ್ಯ ಔಷಧ ಖರೀದಿಗೆ ತೊಡಕಾಗಬಾರದು ಎಂದು ಖಡಕ್ ಸೂಚನೆ ನೀಡಿದ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್, ಇಂದಿನ ಪರಿಸ್ಥಿತಿಗೆ ಅನುಗುಣವಾಗಿ ಔಷಧ ಖರೀದಿ ಪ್ರಕ್ರಿಯೆಯನ್ನು ಸುಲಭಗೊಳಿಸಿ ಇಎಸ್‌ಐ ಆಸ್ಪತ್ರೆ ರೋಗಿಗಳಿಗೆ ಶೀಘ್ರ ಔಷಧ ದೊರಕಿಸಲು ಅನುವಾಗುವಂತೆ ಅಗತ್ಯ ಔಷಧ ಖರೀದಿ ಅಧಿಕಾರವನ್ನು ನಿರ್ದೇಶಕರಿಗೆ ನೀಡಿರುವುದಾಗಿ ಪ್ರಕಟಿಸಿದರು.
ಇಂದಿನ ಆದ್ಯತೆ ಕೋವಿಡ್-19 ಸೋಂಕಿತರಿಗೆ ಉತ್ತಮ ಚಿಕಿತ್ಸೆ ನೀಡಿ ಗುಣಮುಖರನ್ನಾಗಿ ಮಾಡುವುದು ಆಗಿರಬೇಕು, ಸರ್ಕಾರ ಇದಕ್ಕೆ ಅಗತ್ಯ ಕ್ರಮಗಳನ್ನು ವಹಿಸಲಿದೆ ಎಂದು ಹೇಳಿದ ಕಾರ್ಮಿಕ ಸಚಿವರು, ಇಎಸ್‌ಐ ಆಸ್ಪತ್ರೆ ವೈದ್ಯರು ಮತ್ತು ದಾದಿಯರ ಕಾರ್ಯವೈಖರಿಯನ್ನು ಶ್ಲಾಘಿಸಿದರು.
ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ರೋಗಿಗಳ ಆರೈಕೆಗೆ ಶ್ರಮಿಸುತ್ತಿದ್ದು, ಕರೋನಾ ಎರಡನೇ ಅಲೆ ಸಂದರ್ಭದಲ್ಲಿ ಉತ್ತಮ ಕಾರ್ಯ ಮಾಡುತ್ತಿದ್ದು, ಎದೆಗುಂದದೆ ತಮ್ಮ ಕರ್ತವ್ಯ ನಿರ್ವಹಿಸಬೇಕು, ಸರ್ಕಾರ ನಿಮ್ಮೊಂದಿಗೆ ಇದೆ ಎಂದು ಅವರಿಗೆ ಆತ್ಮಸ್ಥೆöÊರ್ಯ ತುಂಬಿದರು.
ಕಾರ್ಮಿಕರಿಗೆ ಸಹಾಯಧನ ತಲುಪಿಸಲು ಸೂಚನೆ:
ಈ ನಡುವೆ, ರಾಜ್ಯ ಸರ್ಕಾರವು ಕೋವಿಡ್ ಸಂಕಷ್ಟದಲ್ಲಿರುವ ಕಟ್ಟಡ ಕಾರ್ಮಿಕರು ಮತ್ತು ಅಸಂಘಟಿತ ಕಾರ್ಮಿಕರಿಗೆ ಸಹಾಯಧನ ಘೋಷಿಸಿದ ಹಿನ್ನೆಲೆಯಲ್ಲಿ, ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಅವರು ವಿಕಾಸಸೌಧದ ಕಛೇರಿಯಲ್ಲಿ ಈ ಕುರಿತು ಇಲಾಖೆಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಸಭೆಯಲ್ಲಿ ಸರ್ಕಾರ ಘೋಷಿಸಿರುವ ಸಹಾಯಧನವು ಕಾರ್ಮಿಕರಿಗೆ ಸಮರ್ಪಕ ರೀತಿಯಲ್ಲಿ ಶೀಘ್ರವಾಗಿ ತಲುಪಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕೋವಿಡ್ ಸಂಕಷ್ಟಕ್ಕೆ ತುತ್ತಾಗಿರುವ ಕಟ್ಟಡ ಕಾರ್ಮಿಕರು ಮತ್ತು ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಹಮ್ಮಿಕೊಳ್ಳಬಹುದಾದಂತಹ ಯೋಜನೆಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಅಪರ ಮುಖ್ಯಕಾರ್ಯದರ್ಶಿ ಕಲ್ಪನಾ, ಕಾರ್ಮಿಕ ಆಯುಕ್ತರಾದ ಅಕ್ರಂ ಪಾಷ ಹಾಗೂ ಇಲಾಖೆಯ ಉಪ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ : ಶಂಭು.
ಮೆಗಾಮೀಡಿಯಾ ನ್ಯೂಸ್ ಬ್ಯೂರೋ.
Click this button or press Ctrl+G to toggle between Kannada and English