- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ಪಡಿತರದಾರರಿಗೆ ಸ್ಥಳೀಯ ಕೆಂಪು ಕುಚ್ಚಲಕ್ಕಿ ಸರಬರಾಜು : ಉಮೇಶ್ ಕತ್ತಿ

UmeshKatti [1]ಮಂಗಳೂರು : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಪಡಿತರ ಅಕ್ಕಿ ಪಡೆಯುವ ಜನ ಸಾಮಾನ್ಯರಿಗೆ ಪಡಿತರದ ಮೂಲಕ ಸ್ಥಳೀಯ ಕೆಂಪು ಕುಚ್ಚಲಕ್ಕಿ ವಿತರಿಸಬೇಕೆಂದು ಪ್ರಸ್ತಾವನೆ ಬಂದ ಹಿನ್ನೆಲೆಯಲ್ಲಿ, ಇಂದು ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಸಚಿವರಾದ ಉಮೇಶ್ ಕತ್ತಿಯವರ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆಯಿತು.

ಅವಳಿ ಜಿಲ್ಲೆಗಳ ಒಟ್ಟು ಕೆಂಪು ಕುಚ್ಚಲಕ್ಕಿಯ ಬೇಡಿಕೆ, ಸುಮಾರು ವಾರ್ಷಿಕ 12 ಲಕ್ಷ ಕ್ವಿಂಟಾಲ್ ಆಗಿದ್ದು, ಕೆಂಪು ಕುಚ್ಚಲಕ್ಕಿ ಪೂರೈಸಲು ರಾಜ್ಯದ ಬತ್ತದ ತಳಿಗಳಾದ ಒಔ 4, ಜಯ, ಅಭಿಲಾಷ, ಭದ್ರ ಕಜೆ, ಜ್ಯೋತಿ ಮುಂತಾದ ತಳಿಗಳನ್ನು ಖರೀದಿಸಲು ಕೇಂದ್ರ ಸರ್ಕಾರದ ಅನುಮತಿಗಾಗಿ ಸಭೆ ಸುದೀರ್ಘ ಚರ್ಚೆ ನಡೆಸಿ ಕೇಂದ್ರದ ಅನುಮತಿ ಪಡೆಯಲು ಅಗತ್ಯ ಪ್ರಸ್ಥಾವನೆ ಸಲ್ಲಿಸುವ ಕುರಿತು ನಿರ್ಣಯ ಕೈಗೊಂಡಿತು.

ಅವಳಿ ಜಿಲ್ಲೆಗಳ ಕೆಂಪು ಕುಚ್ಚಲಕ್ಕಿ ಬೇಡಿಕೆಯನ್ನು ಪೂರೈಸಲು ಸುಮಾರು 20 ಲಕ್ಷ ಕ್ವಿಂಟಾಲ್ ಭತ್ತದ ಪೂರೈಕೆ ಆಗಬೇಕಾಗಿದ್ದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಹೊರತಾಗಿಯೂ ಮಂಡ್ಯ, ಮೈಸೂರು, ರಾಮನಗರ, ಬೆಳಗಾವಿ ಜಿಲ್ಲೆಗಳಿಂದ ಭತ್ತ ಖರೀದಿಸಲು ಸಭೆಯಲ್ಲಿ ಚರ್ಚೆ ನಡೆಯಿತು. ಕೇಂದ್ರದ ಅನುಮತಿ ಪಡೆದು ನವೆಂಬರ್ ತಿಂಗಳಿಂದ ಸ್ಥಳೀಯ ಅಕ್ಕಿ ಗಿರಣಿಗಳ ಮೂಲಕ ಕೆಂಪು ಕುಚ್ಚಲಕ್ಕಿ ಉತ್ಪಾದಿಸಿ ಪಡಿತರದ ಮೂಲಕ ಜನಸಾಮಾನ್ಯರಿಗೆ ಹಂಚಲು ಕ್ರಮಕೈಗೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯಯವರು ತಿಳಿಸಿದರು.

ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉತ್ಪಾದನೆಯಾಗಿ ಪೂರೈಕೆ ಆಗಬಹುದಾದ ಭತ್ತದ ಪ್ರಮಾಣ ಕಡಿಮೆಯಾದಲ್ಲಿ, ಇತರ ಜಿಲ್ಲೆಗಳಿಂದ ಬತ್ತವನ್ನು ಖರೀದಿಸಲಾಗುವುದು ಎಂದು ಕರ್ನಾಟಕ ಆಹಾರ ಮತ್ತು ನಾಗರೀಕ ಪೂರೈಕೆ ಸರಬರಾಜು ನಿಗಮ ನಿಯಮಿತದ ಉಪಾಧ್ಯಕ್ಷರಾದ  ಕಿರಣ್ ಕುಮಾರ್ ಕೊಡ್ಗಿಯವರು ತಿಳಿಸಿದರು.

ಸಭೆಯಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಸಚಿವರ ಆಪ್ತ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.