ದಿ.ದೊರೆಸ್ವಾಮಿ ಪತ್ರ ಬರೆದ ಕುರಿತು ವಿಪ ಸಭಾಪತಿ ಹೊರಟ್ಟಿ ಸಿಎಂ ಗೆ ಮನವಿ

1:30 PM, Saturday, May 29th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

doreswamyಹುಬ್ಬಳ್ಳಿ: ಶತಾಯುಷಿ, ಮಹಾತ್ಮ ಗಾಂಧೀಜಿಯವರ ತಲೆಮಾರಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಹಲವು ಸಾಮಾಜಿಕ ಚಳವಳಿಗಳ ಮುಂಚೂಣಿಯಲ್ಲಿದ್ದ ಹಿರಿಯ ಗಾಂಧಿವಾದಿ ದಿ. ಎಚ್.ಎಸ್.ದೊರೆಸ್ವಾಮಿ ಅವರ ಮನೆಯಲ್ಲಿ 10-04-2021 ರಂದು ಅವರ ಮನೆಯಲ್ಲಿ ಖುದ್ದಾಗಿ ಭೇಟಿಯಾಗಿ ಅವರ ಜನ್ಮದಿನಾಚರಣೆಯ ಶುಭಾಶಯ ಸಲ್ಲಿಸಲು ಹೋದಾಗ ರೈತರ ಅಕ್ರಮ ಸಕ್ರಮ ಜಮೀನು ಕುರಿತ ವಿಷಯವನ್ನು ನನ್ನೊಂದಿಗೆ ಸುದೀರ್ಘವಾಗಿ ಚರ್ಚಿಸಿದ್ದರು ಎಂದು ವಿಧಾನ ಪರಿಷತ್‌ ಸಭಾಪತಿ ಹೇಳಿದ್ದಾರೆ.

ಇದೇ ವಿಷಯವಾಗ ಸಭಾಪತಿ ಹೊರಟ್ಟಿಯವರು ಸಿಎಂ ಯಡಿಯೂರಪ್ಪನವರಿಗೆ ಮನವಿ ಸಲ್ಲಿಸದ್ದಾರೆ.

ಅವರ ಪತ್ರದ ವಿವರ ಈ ಕೆಳಗಿನಂತಿದೆ.

ಬಹುವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ರೈತರ ನ್ಯಾಯಯುತ ಬೇಡಿಕೆ ಈಡೇರಿಸುವ ಮೂಲಕ ಅಗಲಿದ ಮಹಾನ್ ಚೇತನಕ್ಕೆ ತಮ್ಮ ನೇತೃತ್ವದ ಸರಕಾರ ನಿಜವಾದ ಅರ್ಥಪೂರ್ಣ ಶ್ರದ್ಧಾಂಜಲಿ ಸಲ್ಲಿಸಬೇಕೆಂದು ತಮ್ಮನ್ನು ಆಗ್ರಹಪೂರ್ವಕವಾಗಿ ಕೋರುತ್ತಾ ದಿವಂಗತ ದೊರೆಸ್ವಾಮಿಯವರ ಆಶಯದಂತೆ ಈ ಕೆಳಕಂಡ ಅಂಶಗಳನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ.

ಸರಕಾರ ಅಕ್ರಮ ಸಕ್ರಮ ಅರ್ಜಿಗಳನ್ನು ಕರೆಯಲು ತೀರ್ಮಾನ ತೆಗೆದುಕೊಂಡು ಹಲವು ವರ್ಷಗಳೇ ಕಳೆದಿವೆ. ಅರ್ಜಿ ಸ್ವೀಕರಿಸಲು ಕೊನೆಯ ದಿನಾಂಕವನ್ನು ಹಿಂದಿನ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದೊಡನೇ ಒಂದೆರಡು ವರ್ಷಗಳ ಕಾಲ ವಿಸ್ತರಿಸುತ್ತ ಹೋಯಿತು.. ಅಕ್ರಮ ಸಕ್ರಮ ಅರ್ಜಿಗಳನ್ನು ಸ್ವೀಕರಿಸಿ ಅಕ್ರಮವಾದವುಗಳನ್ನು ತಿರಸ್ಕರಿಸಿ ಸಕ್ರಮವಾಗಿರುವುದನ್ನು ಅಂಗೀಕರಿಸಲು ಸರಕಾರ ಜಿಲ್ಲಾಧಿಕಾರಿಗಳಿಗೆ ಅನುಮತಿ ನೀಡಿತ್ತು. ಇದಕ್ಕಾಗಿ ಪ್ರತಿ ತಾಲೂಕಿನಲ್ಲಿ ಸರಕಾರ ಒಂದು ಸಮಿತಿಯನ್ನು ರಚಿಸಿದ್ದು ಈ ಸಮಿತಿಯ ಸಂಚಾಲಕ ಸದಸ್ಯರು ತಾಲೂಕಿನ ತಹಶೀಲ್ದಾರರು. ಅಲ್ಲಿಯ ಶಾಸಕರು ಮತ್ತು ಒಬ್ಬ ಖಾಸಗಿ ವ್ಯಕ್ತಿ ಈ ಸಮಿತಿಗೆ ಸದಸ್ಯರು. ಈ ಸಮಿತಿ ಪ್ರತಿ ಶನಿವಾರ ಸಭೆ ನಡೆಸಿ ಅರ್ಜಿಗಳನ್ನು ಪರಿಶೀಲಿಸಿ ತೀರ್ಮಾನಕ್ಕೆ ಬರುವ ಅಧಿಕಾರವನ್ನು ಹೊಂದಿದೆ.

ಆದರೆ ಅನೇಕ ತಾಲೂಕುಗಳಲ್ಲಿ ಅಲ್ಲಿಯ ಶಾಸಕರ ನಿರ್ಲಕ್ಷ್ಯದಿಂದ ಸಮಿತಿಯ ಸಭೆಗಳೇ ನಡೆಸಿಲ್ಲ. ಇದನ್ನು ಗಮನಿಸಿದ ಹಿಂದಿನ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರ ಸರಕಾರದಲ್ಲಿ ಕಂದಾಯ ಸಚಿವರಾಗಿದ್ದ ಶ್ರೀ ಕಾಗೋಡು ತಿಮ್ಮಪ್ಪನವರು ರೋಸಿ ಹೋಗಿ, ಶನಿವಾರದ ಸಭೆಗಳಿಗೆ ಇಬ್ಬರು ಸದಸ್ಯರು ಹಾಜರಾದರೂ ಸಾಕು ಸಭೆ ನಡೆಸಬೇಕೆಂದು ತಹಶೀಲ್ದಾರರಿಗೆ ಪತ್ರ ಬರೆದು ಸೂಚಿಸಿದರು. ಅದೂ ಕಾರ್ಯಗತವಾಗಲಿಲ್ಲ. ಈ ಜಮೀನನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಬಡ ರೈತರ ಕೆಲಸವನ್ನು ಆದ್ಯತೆಯಿಂದ ಮಾಡಿ ಕೊಡಬೇಕು ಎಂದು ಈ ಬಹುತೇಕ ಶಾಸಕರಿಗೆ ಅನ್ನಿಸಲೇ ಇಲ್ಲ ಎನ್ನುವುದು ವಿಷಾದದ ಸಂಗತಿ, ಇಂದಿಗೂ ಈ ಪರಿಸ್ಥಿತಿ ಮುಂದುವರೆಯುತ್ತಿದೆ. ಬಡ ರೈತರು ತಾವು ಹೊಂದಿರುವ ಸರಕಾರದ ಜಮೀನನ್ನು ತಮ್ಮ ಹೆಸರಿಗೆ ಪಟ್ಟಾ ಮಾಡಿಕೊಡುವಂತೆ ಒತ್ತಾಯಿಸಿ ತಾಲೂಕು ತಹಸೀಲ್ದಾರ್ ಕಚೇರಿಗೆ ಅಲೆದಾಡಿ ಹತಾಶರಾಗಿದ್ದಾರೆ. ಮಾನ್ಯ ಶಾಸಕರಿಗೆ ಈ ಬಡ ಜನರ ಬವಣೆ ಗೊತ್ತಿದ್ದರೂ ಅವರನ್ನು ಅಲಕ್ಷ್ಯ ಮಾಡಿದ ಆರೋಪವಿದ್ದು, ಇದು ಬಡ ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಕೆಲವು ತಾಲೂಕುಗಳಲ್ಲಿ ಶಾಸಕರು ಮುತುವರ್ಜಿ ವಹಿಸಿ, ಸಭೆಗಳನ್ನು ನಡೆಸಿ, ಅಕ್ರಮ ಸಕ್ರಮ ಅರ್ಜಿಗಳನ್ನು ಪರಿಶೀಲಿಸಿ ಅರ್ಹವಾದದ್ದು ಯಾವುದು, ಅನರ್ಹರಾದ್ದು ಯಾವುದು ಎಂದು ಪರಿಶೀಲಿಸಿ ಈಗಾಗಲೇ ಪಟ್ಟಿ ಮಾಡಿದ್ದಾರೆ. ಗೌರಿಬಿದನೂರಿನ ಶಾಸಕರು ಅರ್ಹರಾದವರಿಗೆ ಜಮೀನು ಕೊಡಿಸಿದ್ದಾರೆ. ಅಲೆಮಾರಿ ಹಕ್ಕಿಪಿಕ್ಕಿ ಜನಾಂಗದವರಿಗೆ ಪಟ್ಟಾ ಹಂಚುವ ಸಮಾರಂಭಕ್ಕೆ ಅಲ್ಲಿನ ಆಗಿನ ಶಾಸಕರು ದೊರೆಸ್ವಾಮಿಯವರನ್ನು ಆಹ್ವಾನಿಸಿದ್ದರು ಮತ್ತು ಅವರು ಸಮಾರಂಭದಲ್ಲಿ ಪಾಲ್ಗೊಂಡಿದ್ದು ಇಲ್ಲಿ ಉಲ್ಲೇಖನೀಯ.

ಕೆಲವು ತಾಲೂಕುಗಳಲ್ಲಿ ಒಟ್ಟು 4 ಲಕ್ಷ ಅರ್ಜಿಗಳು ಬಂದಿದ್ದು, ಅವುಗಳ ಪೈಕಿ ಸಮಿತಿ 2.5 ಲಕ್ಷ ಅರ್ಜಿಗಳನ್ನು ಮಾನ್ಯಮಾಡಿ ಅರ್ಜಿದಾರರಿಗೆ ಪಟ್ಟಾ ಮಾಡಿಕೊಡಬಹುದೆಂದು ಶಿಫಾರಸು ಮಾಡಿದೆ.

ಕಾರಣ, ಚಾತಕ ಪಕ್ಷಿಗಳಂತೆ ಜಮೀನು ಪಟ್ಟಕ್ಕಾಗಿ ಕಾಯುತ್ತಿರುವ ಈ ಬಡ ರೈತರಿಗೆ ಕೂಡಲೇ ಸಮಿತಿಯಿಂದ ತೀರ್ಮಾನಗೊಂಡ ಅರ್ಹ ಅರ್ಜಿದಾರರಿಗೆ ಪಟ್ಟವನ್ನು ಕೂಡಲೇ ಹಂಚಲು ಸರಕಾರ ಸುತ್ತೋಲೆ ಹೊರಡಿಸಬೇಕು. ಜಿಲ್ಲಾಧಿಕಾರಿಗಳ ಉಸ್ತುವಾರಿಯಲ್ಲಿ ಈ ಅರ್ಹ ಅರ್ಜಿದಾರರಿಗೆ ಪಟ್ಟ ಮಾಡಿಕೊಡಲು ಅನುಮತಿ ನೀಡಬೇಕು. ಈ ಪ್ರಕ್ರಿಯೆ ಕೂಡಲೇ ಕಾರ್ಯಗತಗೊಳ್ಳಲು ಸೂಚಿಸಿ, ಆರು ತಿಂಗಳೊಳಗೆ ಅರ್ಹ ಅರ್ಜಿದಾರರಿಗೆ ಪಟ್ಟಾ ದೊರೆಯುವಂತೆ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ನಾನು ಕೋರುತ್ತೇನೆ.

ಸರಕಾರ ಬಡ ರೈತರ ಕಾತರ, ಹತಾಶೆಯನ್ನು ಅರ್ಥ ಮಾಡಿಕೊಳ್ಳಬೇಕು. ಈ ರೈತರು ತಹಶೀಲ್ದಾರರ ಕಚೇರಿಗೆ ನೂರಾರು ಸಲ ಅಲೆದಾಡಿ ಬೇಸತ್ತಿದ್ದಾರೆ. ಸರಕಾರ ಇರುವುದು ಬಡ ರೈತರ ತಾಳ್ಮೆಯನ್ನು ಪರೀಕ್ಷಿಸುವುದಕ್ಕಲ್ಲ, ಅವರ ಕಣ್ಣೀರು ಒರೆಸುವುದಕ್ಕೆ, ಸಾಂತ್ವನ ಹೇಳುವುದಕ್ಕೆ, ಈ ಬಗ್ಗೆ ಸರಕಾರ ತ್ವರಿತಗತಿಯಿಂದ ಕಾರ್ಯೋನ್ಮುಖವಾಗಬೇಕೆಂದು ತಮ್ಮಲ್ಲಿ ಒತ್ತಾಯಿಸುತ್ತೇನೆ.

ಮತ್ತೊಂದು ಪ್ರಮುಖ ಅಂಶವನ್ನು ತಮಗೆ ತಿಳಿಸಬಯಸಿದ್ದು, ಹಿಂದೆ ಎರಡನೇ ಮಹಾಯುದ್ಧದ ಸಮಯದಲ್ಲಿ ಮತ್ತು ಸ್ವಾತಂತ್ರ್ಯ ಪ್ರಾಪ್ತವಾದ ಹೊಸದರಲ್ಲಿ ಆಹಾರ ಧಾನ್ಯಗಳ ಕೊರತೆಯಿಂದ ಬಡಜನರು ಗೋಳಾಡುವುದನ್ನು ಗಮನಿಸಿದ ಅಂದಿನ ಸರಕಾರ ಭೂಹೀನ ಬಡರೈತರಿಗೆ ಸರ್ಕಾರಿ ಜಮೀನಿನಲ್ಲಿ ಬೆಳೆ ಬೆಳೆದುಕೊಳ್ಳಲು ಅನುಮತಿ ನೀಡಿತು. ಇದಕ್ಕಾಗಿ ಸರಕಾರ “ಗ್ರೋ ಮೋರ್ ಫುಡ್ ಕ್ಯಾಂಪೇನ್ “ಆರಂಭ ಮಾಡಿತು. ಸಹಸ್ರಾರು ಬಡರೈತರು ಒಂದು ಎಕರೆ, ಎರಡು ಎಕರೆ ಸರ್ಕಾರಿ ಜಮೀನಿನಲ್ಲಿ ವ್ಯವಸಾಯ ಮಾಡಲು ಆರಂಭಿಸಿದರು. ಈ ಮೂಲಕ ಈ ಬಡ ರೈತರು ತಮ್ಮ ಮನೆಗೆ ಬೇಕಾದಷ್ಟನ್ನು ಬೆಳೆದುಕೊಂಡು ಸ್ವಾವಲಂಬಿಗಳಾದರು. ಆಹಾರ ಧಾನ್ಯವನ್ನು ಜನರಿಗೆ ಒದಗಿಸುವ ಹೊಣೆಗಾರಿಕೆಯಿಂದ ಸ್ವಲ್ಪ ಮಟ್ಟಿಗೆ ಪಾರಾಗಲು ಗ್ರೊ ಮೋರ್ ಫುಡ್ ಯೋಜನೆ” ಸಹಕಾರಿಯಾಯಿತು.

ಈ ರೈತರೂ ಕೂಡ ತಮ್ಮ ಜಮೀನಿಗೆ ಸರಕಾರ ಪಟ್ಟಾ ಕೊಡುವುದೆಂದು ಅಂದಿನಿಂದ ಕಾಯುತ್ತಿದ್ದಾರೆ. ಹಲವು ದಶಕಗಳಿಂದ ಹೋರಾಟ ಮಾಡುತ್ತಿದ್ದಾರೆ. ಸರ್ಕಾರವೇ ಸರ್ಕಾರಿ ಜಮೀನನ್ನು ಆಹಾರ ಧಾನ್ಯ ಬೆಳೆದುಕೊಳ್ಳುವುದಕ್ಕಾಗಿ ರೈತರಿಗೆ ಕೊಟ್ಟಿರುವುದರಿಂದ ಈ ಜಮೀನು ಅಕ್ರಮ ಸಕ್ರಮದಡಿಯಲ್ಲಿ ಪರಿಶೀಲಿಸಲು ಬರುವುದಿಲ್ಲ.

ಆದ್ದರಿಂದ ಈ ರೈತರು ಬೇರೆ ಜಮೀನನ್ನು ಹೊಂದಿರದಿದ್ದರೆ, ಅಂಥವರಿಗೆ ನೇರವಾಗಿ ಪಟ್ಟ ನೀಡಲು ತಹಶೀಲ್ದಾರರುಗಳಿಗೆ ಅಧಿಕಾರ ನೀಡಬೇಕು. ಇಂಥವರು ಸಕ್ರಮ ಅಕ್ರಮದಡಿ ಅರ್ಜಿ ಸಲ್ಲಿಸಿದ್ದರೆ ಅದನ್ನು ಬೇರ್ಪಡಿಸಿ ಈ ರೈತರಿಗೆ ಕೂಡಲೇ ಪಟ್ಟಾ ಮಾಡಿಕೊಡಬೇಕು.

ಈ ಕುರಿತಾಗಿ ದಿವಂಗತ ದೊರೆಸ್ವಾಮಿಯವರು ಹಲವು ವರ್ಷಗಳಿಂದ ಹೋರಾಟ ನಡೆಸಿದ್ದನ್ನು ಸ್ಮರಿಸುತ್ತಾ ಈಗಲಾದರೂ ತಮ್ಮ ಸರಕಾರ ಈ ಕುರಿತು ಗಂಭೀರ ಚಿಂತನೆ ನಡೆಸಿ ಮೇಲೆ ಉಲ್ಲೇಖಿಸಲಾದ ರೈತ ಸಮುದಾಯದ ಜಮೀನುಗಳ ಪಟ್ಟಾ ವಿತರಿಸಿ ತಮ್ಮ ರೈತಪರ ಕಾಳಜಿ ಹಾಗೂ ಬದ್ಧತೆಯನ್ನು ಪ್ರದರ್ಶಿಸಿ ಕನ್ನಡನಾಡಿನ ಸಾಕ್ಷಿಪ್ರಜ್ಞೆಯಂತಿದ್ದ ದಿವಂಗತ ದೊರೆಸ್ವಾಮಿಯವರ ಬಹುಕಾಲದ ಹೋರಾಟಕ್ಕೆ ಇತಿಃ ಶ್ರೀ ಹಾಡಿ ಕಣ್ಮರೆಯಾದ ಹಿರಿಯ ಜೀವಕ್ಕೆ ನೈಜ ಶ್ರದ್ಧಾಂಜಲ್ಲಿ ಸಲ್ಲಿಸುವಂತೆ ಮತ್ತೊಮ್ಮೆ ತಮ್ಮಲ್ಲಿ ಕೋರಿಕೊಳ್ಳುತ್ತೇನೆ.

ವರದಿ : ಶಂಭು.
ಮೆಗಾಮೀಡಿಯಾ ನ್ಯೂಸ್‌, ಹುಬ್ಬಳ್ಳಿ ಬ್ಯುರೋ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English