- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಸರಕಾರದಲ್ಲಿ18 ವಯಸ್ಸಿನವರಿಗೆ ಲಸಿಕೆ ಇಲ್ಲ, ಖಾಸಗಿ ಆಸ್ಪತ್ರೆಯಲ್ಲಿ 850 ರೂ.ಗೆ ಸಿಗುತ್ತದೆ : ಲುಕ್ಮಾನ್

lukman [1]ಮಂಗಳೂರು : ಸರಕಾರ 18ರಿಂದ 44ರ ವಯೋಮಾನದವರಿಗೆ ಲಸಿಕೆ ನೀಡುವುದನ್ನು ಸ್ಥಗಿತ ಮಾಡಿದೆ. ಆದರೆ ಖಾಸಗಿ ಆಸ್ಪತ್ರೆಯಲ್ಲಿ ದುಬಾರಿ ದರದಲ್ಲಿ ಲಸಿಕೆ ನೀಡಲಾಗುತ್ತಿದೆ ಇದು ಮೋದಿ ಸರಕಾರ  ಶ್ರೀಮಂತರಿಗೆ ಮಾಡಿಕೊಟ್ಟ ಸವಲತ್ತು ಎಂದು ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲುಕ್ಮಾನ್ ಬಂಟ್ವಾಳ ಹೇಳಿದ್ದಾರೆ.

ಮಂಗಳವಾರ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವಜನರಿಗೆ, ಗ್ರಾಮೀಣ ಪ್ರದೇಶದ ಜನತೆಗೆ, ಬಡವರಿಗೆ ಕೋವಿಡ್ ಲಸಿಕೆ ದೊರೆಯುತ್ತಿಲ್ಲ. ಬಿಜೆಪಿ ಸರಕಾರ ಕೇವಲ ಶ್ರೀಮಂತರಿಗೆ ಮಾತ್ರ ಲಸಿಕೆ ಪೂರೈಸುವ ನೀತಿಯನ್ನು ಅನುಸರಿಸುತ್ತಿದೆ. ಜನ ವಿರೋಧಿ ಲಸಿಕೆ ನೀತಿ ಹೊಂದಿರುವ ಕೇಂದ್ರ ಸರಕಾರದ ವಿರುದ್ಧ ನಮಗೂ ಲಸಿಕೆ ಬೇಕು ಎಂಬ ಆಂದೋಲನವನ್ನು ಕಾಂಗ್ರೆಸ್ ನಡೆಸಲಿದೆ ಎಂದು ಲುಕ್ಮಾನ್ ಹೇಳಿದರು.

ಕೊರೋನ ಸೋಂಕು ನಿಯಂತ್ರಣ ಮಾಡಲು ಪ್ರಮುಖ ಆಯುಧವಾದ ಲಸಿಕೆ ನೀತಿ ಸಂಪೂರ್ಣ ವೈಫಲ್ಯವಾಗಿದ್ದು, ಲಸಿಕೆಯ ದರ ನೀತಿ ಜನವಿರೋಧಿ ಆಗಿದೆ ಎಂದು ಅವರು ಹೇಳಿದರು.

ಲಸಿಕೆ ಖರೀದಿ ಮಾಡುವಾಗ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಖರೀದಿಸಲು ಮೂರು ವಿಧದ ದರಗಳನ್ನು ವಿಧಿಸಿದೆ. ಕೇಂದ್ರ ಸರಕಾರಕ್ಕೆ 150, ರಾಜ್ಯ ಸರಕಾರ 400 ರೂ. (ಕೊವಿಶೀಲ್ಡ್) ದರಗಳನ್ನು ನಿಗದಿ ಮಾಡಿರುವುದರಿಂದ ವ್ಯಾಪಕ ಭ್ರಷ್ಟಾಚಾರಕ್ಕೆ ಕಾರಣವಾಗಲಿದೆ. ಮಾತ್ರವಲ್ಲದೆ, ಬಡವರು, ಕಾರ್ಮಿಕರು ಮತ್ತು ಮಧ್ಯಮ ವರ್ಗದವರಿಗೆ ಲಸಿಕೆ ದೊರೆಯದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

ನರೇಂದ್ರ ಮೋದಿ ಸರಕಾರದ ಲಸಿಕೆ ನೀತಿಯೇ ದೇಶದಲ್ಲಿ ಕೊರೋನ ಎರಡನೇ ಅಲೆಯೂ ಹೆಚ್ಚಿನ ಸಂಕಷ್ಟವನ್ನು ಉಂಟು ಮಾಡಲು ಕಾರಣವಾಗಿದೆ. ಸಕಾಲದಲ್ಲಿ ಲಸಿಕೆ ಉತ್ಪಾದನೆಗೆ ಅನುದಾನ ಮತ್ತು ಉತ್ತೇಜನ ನೀಡಲು ವಿಫಲವಾಗಿರುವುದರಿಂದ ಸಾವಿರಾರು ಮಂದಿ ಜೀವ ಕಳೆದುಕೊಂಡಿದ್ದು, ಇದರ ಜವಾಬ್ದಾರಿಯನ್ನು ಯಾರು ಹೊರುತ್ತಾರೆ ಎಂದು ಲುಕ್ಮಾನ್ ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸರ್ಫರಾಜ್ ನವಾಝ್, ಆಶಿತ್ ಪಿರೇರ, ಸುಳ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಶಾಹುಲ್ ಹಮೀದ್, ಜಿಲ್ಲಾ ಇಂಟಕ್ ಪ್ರಧಾನ ಕಾರ್ಯದರ್ಶಿ ಚಿತ್ತರಂಜನ್ ಶೆಟ್ಟಿ, ಎನ್‌ಎಸ್‌ಯುಐ ರಾಷ್ಟ್ರೀಯ ಸಂಯೋಜಕ ಅನ್ವೀತ್ ಕಟೀಲ್, ನವಾಲ್ ಉಪ್ಪಿನಂಗಡಿ, ಎಂ. ತೌಫೀಕ್, ದೀಕ್ಷಿತ್ ಅತ್ತಾವರ, ರೋಷನ್ ರೈ, ಪ್ರಸಾದ್ ಗಾಣಿಗ, ಹಸನ್ ಡೀಲ್ಸ್, ಮೀನಾ ತೆಲ್ಲಿಸ್, ಇಸ್ಮಾಯೀಲ್ ಸಿದ್ದೀಕ್, ಅರ್ಷದ್ ಮುಲ್ಕಿ, ಫಯಾಝ್ ಅಮೆಮಾರ್, ಅಲ್ಫಾಝ್, ಶಾಫಿ ಕೈಕಂಬ, ಇಮ್ರಾನ್ ಶಾಂತಿಅಂಗಡಿ ಉಪಸ್ಥಿತರಿದ್ದರು.

‘ಕೋವಿಡ್ ನಿಯಂತ್ರಣ ಲಸಿಕೆ ನಮಗೂ ಬೇಕು’ ಎಂಬ ಆಂದೋಲನವನ್ನು ದ.ಕ. ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಆರಂಭಿಸುವುದಾಗಿ ಅವರು ಹೇಳಿದ್ದಾರೆ.