- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕಾವೇರಿ ನದಿ ತೀರದಲ್ಲಿ ಸರ್ಕಾರದ ವತಿಯಿಂದ ಸಾಮೂಹಿಕ ಅಸ್ಥಿ ವಿಸರ್ಜನೆ

Asti [1]ಬೆಂಗಳೂರು  : ಕೋವಿಡ್ ನಿಂದ ಮೃತಪಟ್ಟವರ ಅಸ್ಥಿಗಳನ್ನು ಇಂದು ಮಳವಳ್ಳಿ ತಾಲೂಕಿನ ಬೆಳವಾಡಿಯಲ್ಲಿರುವ ಅನ್ನಪೂಣೇಶ್ವರಿ ಮತ್ತು ಕಾಶಿ ವಿಶ್ವನಾಥ ದೇವಸ್ಥಾನದ ಬಳಿಯ ಕಾವೇರಿ ನದಿ ತೀರದಲ್ಲಿ ಕಂದಾಯ ಇಲಾಖೆಯ ವತಿಯಿಂದ ಸಾಮೂಹಿಕವಾಗಿ ಸಾಂಪ್ರದಾಯಿಕ ವಿಧಿ ವಿಧಾನಗಳ ಮೂಲಕ ವಿಸರ್ಜನೆ ಮಾಡಲಾಯಿತು.

ಹಲವು ದಿನಗಳು ಕಳೆದರು ಚಿತಾಭಸ್ಮವನ್ನ ಕುಟುಂಬಸ್ಥರು ಕೊಂಡೊಯ್ಯದ ಕಾರಣ ಸರ್ಕಾರದ ಪರವಾಗಿ ಕಂದಾಯ ಸಚಿವ ಆರ್ ಅಶೋಕ್ ಅವರ ನೇತೃತ್ವದಲ್ಲಿ ಐದು ನೂರಕ್ಕೂ ಅಧಿಕ ಮೃತ ವ್ಯಕ್ತಿಗಳ ಅಸ್ಥಿಯನ್ನ ಸಂಗ್ರಹಿಸಿ ತರಲಾದ ಮಡಿಕೆಗಳನ್ನು ವೇದ ವಿದ್ವಾನ್ ಭಾನುಪ್ರಕಾಶ್ ನೇತೃತ್ವದ ಪುರೋಹಿತರು ವೇದ ಮಂತ್ರಗಳ ಘೋಷದೊಂದಿಗೆ ಸಾಂಪ್ರದಾಯಿಕ ವಿಧಿವಿಧಾನಗಳನ್ನ ನೆರವೇರಿಸಿ ಸಾಮೂಹಿಕವಾಗಿ ವಿಸರ್ಜನೆ ಮಾಡಲಾಯಿತು.

Asti [2]ಅಸ್ಥಿ ವಿಸರ್ಜನೆಯ ನಂತರ ಮಾತನಾಡಿದ ಸಚಿವ ಅಶೋಕ ಅವರು,”ಇದು ನನ್ನ ಜೀವನದ ಭಾವನಾತ್ಮಕ ಘಳಿಗೆ. ವ್ಯಕ್ತಿ ದೇಹ ತ್ಯಜಿಸಿದ ಮೂರು ದಿನಗಳಲ್ಲಿ ಅವರ ಅಸ್ಥಿಯನ್ನು ನದಿಗೆ ಬಿಡೋದು ಸಂಪ್ರದಾಯ. ಹಿಂದಿನಿಂದ ನಡೆದುಕೊಂಡು ಬಂದ ಸಂಪ್ರದಾಯ, ಪದ್ಧತಿ, ನಂಬಿಕೆಯಂತೆ ಇಂದು ಅಸ್ಥಿ ಬಿಡುವ ಪುಣ್ಯದ ಕೆಲಸ ನನ್ನ ಪಾಲಿಗೆ ಬಂದಿದೆ ಎಂದು ಭಾವಿಸಿದ್ದೇನೆ. ಹಲವು ದಿನಗಳ ನಂತರವು ಸೋಂಕಿನಿಂದ ಮೃತಪಟ್ಟವರ ಅಸ್ಥಿಯನ್ನು ಕುಟುಂಬದವರು ತೆಗೆದುಕೊಂಡು ಹೋಗಲಿಲ್ಲ. ಜಗತ್ತೆ ನಿನ್ನ ಕುಟುಂಬ ಎಂದು ತಿಳಿ ಎಂದು ದೊಡ್ಡವರು ಹೇಳಿದ್ದಾರೆ. ಆ ಮಾತನ್ನು ಕಾಯ -ವಾಚಾ- ಮನಸ್ಸಾ ಮಾಡಲು ಇಂದು ಅಸ್ಥಿ ಬಿಟ್ಟಿದ್ದೇನೆ. ಅಸ್ಥಿ ವಿಸರ್ಜನೆಯ ಮೂಲಕ ಅವರು ಶಿವನ ಸಾನಿಧ್ಯ ಸೇರಲಿ ಎನ್ನುವ ನಂಬಿಕೆಯಿಂದ ಸರ್ಕಾರದ ಭಾಗವಾಗಿ ನಾನೇ ಮುಂದೆ ನಿಂತು ಈ ದೇವರ ಕಾರ್ಯ ಮಾಡಿದ್ದೇನೆ. ನನ್ನ ಕರ್ತವ್ಯ ನಿಭಾಯಿಸಿದ್ದೇನೆ,” ಎಂದು ಹೇಳಿದರು.

ಈಗಾಗಲೇ ಗಂಗಾ ನದಿಯಲ್ಲಿ ಸೋಂಕಿನಿಂದ ಸಾವನ್ನಪ್ಪಿದವರ ಶವಗಳು ತೇಲಿಕೊಂಡು ಹೋಗುತ್ತಿರುವುದನ್ನ ಕಣ್ಣಾರೆ ಕಂಡಿದ್ದೇವೆ. ಈ ಸಂದರ್ಭದಲ್ಲಿ ಮಾನವೀಯತೆಯನ್ನ ಮರೆಯಬಾರದು. ಈ ಕಾರಣಕ್ಕೆ ಸರ್ಕಾರ ಇವರೆಲ್ಲರು ನಮ್ಮ ಬಂಧುಗಳು ಎಂದು ಭಾವಿಸಿ ಈ ಕಾರ್ಯಕ್ಕೆ ಮುಂದಾಗಿದೆ

ಈ ವೇಳೆ ಸರ್ಕಾರವೇ ಮುಂದೆ ನಿಂತು ಬಹು ಸಮಯದಿಂದ ಕುಟುಂಬಸ್ಥರು ತೆಗೆದುಕೊಂಡು ಹೋಗದ ಅಸ್ಥಿಗಳನ್ನು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಸರ್ಕಾರದ ವತಿಯಿಂದ ವಿಧಿವತ್ತಾಗಿ ವಿಸರ್ಜನೆ ಮಾಡುವ ನಿಟ್ಟಿನಲ್ಲಿ ಮುಂದಾಗಬೇಕು. ಇನ್ನು ಮುಂದೆ ಅನಾಥ ಶವಗಳನ್ನ ಕಂದಾಯ ಇಲಾಖೆ ವತಿಯಿಂದಲೇ ಅಂತ್ಯಕ್ರಿಯೆ ಮಾಡಲು ಸೂಚನೆ ನೀಡುತ್ತೇನೆ ಎಂದು ತಿಳಿಸಿದರು.

Asti [3]ಈಗಾಗಲೇ ಕೇಂದ್ರ ಸರ್ಕಾರ ಸಿ ಬಿ ಎಸ್ ಇ, ಐ ಸಿ ಎಸ್ ಇ ಪರೀಕ್ಷೆಗಳನ್ನ ರದ್ದುಗೊಳಿಸಿದಂತೆ ರಾಜ್ಯದಲ್ಲಿಯೂ ರದ್ದು ಮಾಡುವುದು ಒಳಿತು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಈ ಕುರಿತು ಶಿಕ್ಷಣ ಸಚಿವರ ಜೊತೆಗೆ ಚರ್ಚೆ ಮಾಡುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಮಳವಳ್ಳಿ ಶಾಸಕ, ಡಾ ಕೆ ಅನ್ನದಾನಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ನಾರಾಯಣಗೌಡರು, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಶ್ರೀ ಮಂಜುನಾಥ ಪ್ರಸಾದ್ ಉಪಸ್ಥಿತರಿದ್ದರು.

ವರದಿ : ಶಂಭು.
ಮೆಗಾಮೀಡಿಯಾ ನ್ಯೂಸ್‌ ಬ್ಯುರೋ.