- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಸ್ಥಳೀಯರಿಗೆ ಉದ್ಯೋಗದಲ್ಲಿ ತೊಂದರೆ ಕೊಟ್ಟರೆ ಹುಶಾರ್ – MRPL ಅಧಿಕಾರಿಗಳಿಗೆ ಎಚ್ಚರಿಕೆ ಕೊಟ್ಟ ಶಾಸಕ ಡಾ.ಭರತ್ ಶೆಟ್ಟಿ

Bharath Shetty [1]ಮಂಗಳೂರು  : MRPL ನಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಸ್ಥಳೀಯ ಯುವಕನೊಬ್ಬನ ಮೊಬೈಲ್ ಫೋನ್ ಅನ್ನು ಬಲವಂತವಾಗಿ ತೆಗೆದುಕೊಂಡು ಅದರಲ್ಲಿರುವ ಫೋಟೋಸ್, ದಾಖಲೆಗಳನ್ನು ತಡಕಾಡಿ ಆರು ಜನ ಅಧಿಕಾರಿಗಳು ತೀವ್ರತರ ತನಿಖೆ ಮಾಡಿ ಯುವಕನಿಗೆ ಮಾನಸಿಕ ದೌರ್ಜನ್ಯ ನಡೆಸಿರುವ ಘಟನೆ ಶುಕ್ರವಾರ ರಾತ್ರಿ ನಡೆದಿತ್ತು. ಇದು ಶಾಸಕ ಡಾ.ವೈ ಭರತ್ ಶೆಟ್ಟಿಯವರ ಗಮನಕ್ಕೆ ಬಂದ ಕೂಡಲೇ ಶನಿವಾರ ಬೆಳಿಗ್ಗೆ MRPL ಅತಿಥಿ ಗೃಹಕ್ಕೆ ತೆರಳಿದ ಡಾ.ಭರತ್ ಶೆಟ್ಟಿಯವರು ಅಲ್ಲಿ ಅಧಿಕಾರಿಗಳನ್ನು ಕರೆಸಿ ಎಚ್ಚರಿಕೆ ನೀಡಿದ್ದಾರೆ.

ಅಧಿಕಾರಿಗಳು ಪೊಲೀಸರ ಕೆಲಸ ಮಾಡಬಾರದು. ಮೊಬೈಲ್ ಕಸಿದು ಒಳಗಿನ ಮಾಹಿತಿ ಪರಿಶೀಲಿಸುವುದು ಉದ್ಯೋಗಿಯ ಖಾಸಗಿತನದ ಮೇಲೆ ಪ್ರಹಾರ ಮಾಡಿದಂತೆ. ಕೆಲಸದ ವೇಳೆಯಲ್ಲಿ ಉದ್ಯೋಗಿಗಳು ಮೊಬೈಲ್ ತೆಗೆದುಕೊಂಡು ಹೋಗಿದ್ದು ತಪ್ಪಾಗಿದ್ದಲ್ಲಿ ದಂಡ ಹಾಕುವುದನ್ನು ಬಿಟ್ಟು ಮೊಬೈಲ್ ಕಸಿದು ಅದರೊಳಗಿನ ಮಾಹಿತಿ ಪರಿಶೀಲಿಸುವುದು ತಪ್ಪು.ಇಲ್ಲಿ ಯಾವುದೋ ಬೇರೆ ವಿಷಯಗಳ ಬಗ್ಗೆ ಅಧಿಕಾರಿಗಳು ತನಿಖೆ ಮಾಡುವ ಪ್ರಯತ್ನ ಮಾಡುವುದು ಸರಿಯಲ್ಲ ಎಂದು ಶಾಸಕರು ಎಚ್ಚರಿಕೆ ಕೊಟ್ಟರು.

ಸಭೆಯಲ್ಲಿ ಉಪಸ್ಥಿತರಿದ್ದ ಕಂಪೆನಿಯ ಉನ್ನತ ಅಧಿಕಾರಿಗಳಾದ ಬಿ ಎಚ್ ವಿ ಪ್ರಸಾದ್ ಹಾಗೂ ಕೃಷ್ಣ ಹೆಗ್ಡೆಯವರು ಇಂತಹ ಘಟನೆಗಳು ಮುಂದೆ ಆಗದಂತೆ ನೋಡಿಕೊಳ್ಳುವುದಾಗಿ ಹಾಗೂ ಆ ಯುವಕನೊಂದಿಗೆ ಅಸಭ್ಯವಾಗಿ ವರ್ತಿಸಿದ ಆರು ಜನ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

MRPL ನಲ್ಲಿ ಕೆಲಸ ಮಾಡುವ ಸ್ಥಳೀಯರಿಗೆ ಅಲ್ಲಿ ಯಾವುದೇ ರೀತಿಯ ತೊಂದರೆ ಆಗದಂತೆ ಸೂಕ್ತವಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶಾಸಕರು ಪೊಲೀಸ್ ಸಬ್ ಇನ್ಸಪೆಕ್ಟರ್ ಚಂದ್ರಪ್ಪ ಅವರಿಗೆ ಸೂಚನೆ ನೀಡಿದರು. ಡಾ.ಭರತ್ ಶೆಟ್ಟಿಯವರೊಂದಿಗೆ ಪಾಲಿಕೆ ಸ್ಥಾಯಿ ಸಮತಿ ಅಧ್ಯಕ್ಷ ಲೋಕೇಶ್ ಬೊಳ್ಳಾಜೆ ಉಪಸ್ಥಿತರಿದ್ದರು. ಡಾ.ಸರೋಜಿನಿ ಮಹಿಷಿ ವರದಿ ಅನುಷ್ಟಾನಕ್ಕೆ ತಂದು ಬೃಹತ್ ಕೈಗಾರಿಕೆ, ಉದ್ದಿಮೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡಬೇಕೆಂಬ ನಿಯಮ ಜಾರಿಗೆ ತರಬೇಕು ಎಂದು ಡಾ‌.ಭರತ್ ಶೆಟ್ಟಿಯವರು ವಿಧಾನಸಭೆಯಲ್ಲಿ ಮಾತನಾಡಿದ್ದನ್ನು ಇಲ್ಲಿ ಸ್ಮರಿಸಬಹುದು.