ಉಡುಪಿ : ಉಡುಪಿ ಉದ್ಯಮಿ ಭಾಸ್ಕರ್ ಶೆಟ್ಟಿ(52)ಯನ್ನು ಕೊಲೆಗೈದು ಹೋಮಕುಂಡದಲ್ಲಿ ಸುಟ್ಟು ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಪತ್ನಿ, ಮಗ, ಜ್ಯೋತಿಷಿ ನಿರಂಜನ್ ಭಟ್ ಇವರಿಗೆ ಜೀವಾವಧಿ ಶಿಕ್ಷೆ ನೀಡಿ ತೀರ್ಪು ಮಾಡಿದೆ.
ಭಾಸ್ಕರ ಶೆಟ್ಟಿಯ ಪತ್ನಿ ರಾಜೇಶ್ವರಿ ಶೆಟ್ಟಿ, ಪುತ್ರ ನವನೀತ್ ಶೆಟ್ಟಿ ಹಾಗೂ ನಂದಳಿಕೆಯ ಜ್ಯೋತಿಷಿ ನಿರಂಜನ್ ಭಟ್ ನ್ಯಾಯಾಲಯ ದೋಷಿಗಳೆಂದು ಘೋಷಿಸಿದೆ. ಸಾಕ್ಷ್ಯನಾಶ ಆರೋಪಿ ರಾಘವೇಂದ್ರ ನ್ಯಾಯಾಲಯ ಖುಲಾಸೆಗೊಳಿಸಿದೆ.
ಆರೋಪಿಗಳು 2016ರ ಜು.28ರಂದು ಅಪರಾಹ್ನ 3 ಗಂಟೆಗೆ ಇಂದ್ರಾಳಿಯ ಮನೆಯಲ್ಲಿ ಭಾಸ್ಕರ್ ಶೆಟ್ಟಿಯನ್ನು ಕೊಲೆ ಮಾಡಿ, ಬಳಿಕ ಮೃತದೇಹವನ್ನು ನಂದಳಿಕೆಯಲ್ಲಿರುವ ನಿರಂಜನ ಭಟ್ ಮನೆಯಲ್ಲಿನ ಹೋಮ ಕುಂಡದಲ್ಲಿ ಹಾಕಿ ಸುಟ್ಟಿರುವುದು ಪೊಲೀಸ್ ತನಿಖೆಯಲ್ಲಿ ಪತ್ತೆಯಾಗಿತ್ತು. ಜು.31ರಂದು ಭಾಸ್ಕರ್ ಶೆಟ್ಟಿ ತಾಯಿ ತನ್ನ ಮಗ ನಾಪತ್ತೆಯಾಗಿರುವುದಾಗಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಪ್ರಾಸಿಕ್ಯೂಶನ್ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ಶಾಂತರಾಮ್ ಶೆಟ್ಟಿ ವಾದ ಮಂಡಿಸಿದ್ದಾರೆ.
ಪ್ರಕರಣ ನಡೆದದ್ದು ಹೇಗೆ ?
ಭಾಸ್ಕರ್ ಶೆಟ್ಟಿ ಅವರು ಉಡುಪಿ, ದುಬೈನಲ್ಲಿ ಉದ್ಯಮಗಳನ್ನು ಹೊಂದಿದ್ದರು. ದುಬೈನಲ್ಲಿ ಸೂಪರ್ ಮಾರ್ಕೆಟ್, ಉಡುಪಿಯಲ್ಲಿ ಹೋಟೆಲ್ ಹೊಂದಿದ್ದ ಬಹುಕೋಟಿ ಉದ್ಯಮಿ. ಉಡುಪಿ ನಗರದ ಇಂದ್ರಾಳಿಯಲ್ಲಿ ವಾಸವಿದ್ದರು.
ರಾಜೇಶ್ವರಿಗೆ ಮದುವೆಯಾದ ಬಳಿಕ ಭಾಸ್ಕರ್ ಶೆಟ್ಟಿ ಅವರು ರಾಜೇಶ್ವರಿ ಅವರ ಅಕ್ಕನ ಗಂಡನ ಜತೆಗೂಡಿ ವ್ಯವಹಾರ ಮಾಡುತ್ತಿದ್ದರು. ಎರಡು-ಮೂರು ವರ್ಷಗಳ ಹಿಂದಿನವರೆಗೆ ಒಟ್ಟಿಗೆ ವ್ಯವಹಾರ ನಡೆಸುತ್ತಿದ್ದ ಅಕ್ಕ, ತಂಗಿಯರ ಗಂಡಂದಿರ ನಡುವೆ ಪಾಲಾಯಿತು.
ರಾಜೇಶ್ವರಿ ಮತ್ತು ಜ್ಯೋತಿಷಿನಿರಂಜನ್ ಜೊತೆ ಸ್ನೇಹವಾಗಿತ್ತು. ಇದು ಅತೀ ಎನ್ನುವಂತೆ ಹೆಚ್ಚಿತ್ತು. ಇದು ಭಾಸ್ಕರ್ ಶೆಟ್ಟಿಯವರಗೂ ತಿಳಿದಿತ್ತು. ನಿರಂಜನ್‌ಭಟ್‌ನೊಂದಿಗೆ ರಾಜೇಶ್ವರಿ ಅನ್ಯೋನ್ಯತೆ ಹೊಂದಿರುವುದನ್ನು ಸ್ವತಃ ಭಾಸ್ಕರ್ ಶೆಟ್ಟಿಯವರು ಕಂಡು ನೊಂದುಕೊಂಡಿದ್ದರು. ಆತನಿಗೆ ಹಣವನ್ನೂ ರಾಜೇಶ್ವರಿ ನೀಡುತ್ತಿದ್ದ ಮಾಹಿತಿ ಅವರಿಗಿತ್ತು. ಪುತ್ರ ಜಿಮ್ ಪ್ರಾರಂಭಿಸುವಲ್ಲಿಯೂ ನಿರಂಜನ್ ಭಾಗೀದಾರಿಕೆ ಹೆಚ್ಚಾಗಿತ್ತು. ಇನ್ನು ಅವರು ನನ್ನನ್ನು ಕ್ಯಾರ್ ಮಾಡುವುದಿಲ್ಲ ಎಂದು ತಿಳಿಯುತ್ತಲೇ ಮಡದಿಯ ಹೆಸರಿಗೆ ಮಾಡಿಕೊಟ್ಟಿದ್ದ ಪವರ್ ಆಫ್ ಅಟಾರ್ನಿಯನ್ನು ಹಿಂದಕ್ಕೆ ಪಡೆದು ಎಲ್ಲ ಆಸ್ತಿಯನ್ನು ಬದಲಾಯಿಸಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದರು. ಪತ್ನಿಗೆ ವಿಚ್ಚೇದನ ನೀಡುವ ಬಗ್ಗೆಯೂ ಆಪ್ತರಲ್ಲಿ ಹೇಳಿಕೊಂಡಿದ್ದರು. ಈ ಬಗ್ಗೆ ರಾಜೇಶ್ವರಿಗೆ ಎಲ್ಲ ಮಾಹಿತಿ ತಿಳಿದು ಕೊಲೆಗೆ ಪ್ಲಾನ್ ಮಾಡಲಾಯಿತು.
ದುರ್ಗಾ ಇಂಟರ್‌ನ್ಯಾಶನಲ್ ಕಟ್ಟಡದಲ್ಲಿ ಭಾಸ್ಕರ್ ಶೆಟ್ಟಿಯವರ ಕಚೇರಿ ಇದೆ. ಅಲ್ಲಿಗೆ ತಾಯಿ, ಮಗ ಬಂದು ಗಲಾಟೆ ಮಾಡಿ ಹಲ್ಲೆಯನ್ನೂ ಮಾಡಿದ್ದರು. ಬಳಿಕ ಭಾಸ್ಕರ್ ಶೆಟ್ಟಿ ಅವರಿಗೆ ಅಪಾಯದ ಅರಿವಾಗಿ ರಾತ್ರಿ ಇಂದ್ರಾಳಿಯ ಮನೆಗೆ ಹೋಗುವುದನ್ನೇ ನಿಲ್ಲಿಸಿ ಹೊಟೇಲ್‌ನಲ್ಲಿದ್ದ ಕಚೇರಿ ರೂಮಿನಲ್ಲಿಯೇ ಮಲಗುತ್ತಿದ್ದರು.
ಪತ್ನಿ ರಾಜೇಶ್ವರಿಯು ಪುತ್ರ ಮತ್ತು ಪ್ರಿಯಕರನ ಜೊತೆ ಸೇರಿ ಪ್ಲಾನ್ ಮಾಡಿಕೊಂಡಿದ್ದರು. ಅದುವೇ ಗಂಡನ ಕೊಲೆ ಪ್ಲಾನ್. ಅದರಂತೆ 2016 ಜುಲೈ 28ರಂದು ಇಂದ್ರಾಳಿಯ ಮನೆಗೆ ಬಂದಿದ್ದ ಭಾಸ್ಕರ್ ಶೆಟ್ಟಿಯವರು ಸ್ನಾನ ಮಾಡಲೆಂದು ಹೋದಾಗ ಈ ಮೂವರು ಮೆಣಸಿನ ಹುಡಿ ಎರಚಿ, ತಲೆಗೆ ರಾಡ್ ನಿಂದ ಹೊಡೆದು ಕೊಲೆ ಮಾಡಿದ್ದರು. ನಂತರ ಮೃತದೇಹವನ್ನು ಕಾರ್ಕಳ ತಾಲೂಕಿನ ನಂದಳಿಕೆಗೆ ತಂದಿದ್ದರು. ಅಲ್ಲಿ ನಿರಂಜನ್ ಭಟ್ ನ ಮನೆಯಲ್ಲಿ ಸಿದ್ದಮಾಡಲಾಗಿದ್ದ ಹೋಮ ಕುಂಡದಲ್ಲಿ ಭಾಸ್ಕರ್ ಶೆಟ್ಟಿಯವರ ಮೃತದೇಹವನ್ನು ಸುಟ್ಟು ಹಾಕಿದ್ದರು ಈ ಮೂವರು. ಬಳಿಕ ಮೂಳೆ, ಬೂದಿಯನ್ನು ಬಿಸಾಕಿ ಸಾಕ್ಷ್ಯ ನಾಶ ಮಾಡಿದ್ದರು.
Click this button or press Ctrl+G to toggle between Kannada and English